ನೌಕರರಿಗೆ ವೇತನದ ಸಮಯ: ಬ್ಯಾಂಕುಗಳಲ್ಲಿ ಹಣದ ಕೊರತೆ ಭೀತಿ

ಹಳೇ 500 ಮತ್ತು 1000 ಮುಖಬೆಲೆಯ ನೋಟುಗಳ ಅಪಮೌಲ್ಯದ ನಂತರ ಆ ಬಗ್ಗೆ ಪರ, ವಿರೋಧ ಚರ್ಚೆಗಳು ವ್ಯಾಪಕವಾಗಿ ಒಂದೆಡೆ ನಡೆಯುತ್ತಿದ್ದರೆ, ಮತ್ತೊಂದೆಡೆ ಬ್ಯಾಂಕುಗಳಿಗೆ, ಸರ್ಕಾರಕ್ಕೆ ಮತ್ತು ಹೆಚ್ಚಿನ ಜನರಿಗೆ ಇದು ದೊಡ್ಡ ಸವಾಲಾಗಿ ಪರಿಣಮಿಸಿದೆ...
ಎಟಿಎಂವೊಂದರ ಮುಂದೆ ಗ್ರಾಹಕರು
ಎಟಿಎಂವೊಂದರ ಮುಂದೆ ಗ್ರಾಹಕರು
ನವದೆಹಲಿ: ಹಳೇ 500 ಮತ್ತು 1000 ಮುಖಬೆಲೆಯ ನೋಟುಗಳ ಅಪಮೌಲ್ಯದ ನಂತರ ಆ ಬಗ್ಗೆ ಪರ, ವಿರೋಧ ಚರ್ಚೆಗಳು ವ್ಯಾಪಕವಾಗಿ ಒಂದೆಡೆ ನಡೆಯುತ್ತಿದ್ದರೆ, ಇನ್ನೊಂದೆಡೆ ಬ್ಯಾಂಕುಗಳಿಗೆ, ಸರ್ಕಾರಕ್ಕೆ ಮತ್ತು ಹೆಚ್ಚಿನ ಜನರಿಗೆ ಇದು ದೊಡ್ಡ ಸವಾಲಾಗಿ ಪರಿಣಮಿಸಿದೆ.
ತಿಂಗಳ ಮೊದಲ ವಾರ ಉದ್ಯೋಗಿಗಳಿಗೆ ವೇತನ ಸಿಗುವ ವಾರ. ಕಂಪೆನಗಳು, ಸಂಸ್ಥೆಗಳು, ಸರ್ಕಾರಿ ಉದ್ಯೋಗಿಗಳ ವೇತನವನ್ನು ಠೇವಣಿ ಮಾಡುವುದು, ಜನರು ಹಣ ಹಿಂಪಡೆಯುವುದು, ತಿಂಗಳ ಆರಂಭದಲ್ಲಿ ಅನೇಕ ಬಿಲ್ ಪಾವತಿ ಮಾಡಬೇಕು ಇತ್ಯಾದಿ ಆತಂಕದಲ್ಲಿ ಜನರಿದ್ದಾರೆ. ಇದೆಲ್ಲವೂ ಆಗಿದ್ದು ನೋಟುಗಳ ನಿಷೇಧದಿಂದ!
 ಹೀಗಾಗಿ ಈ ತಿಂಗಳ ಆರಂಭದ ಹತ್ತು ದಿನಗಳ  ಕಾಲ ಬ್ಯಾಂಕುಗಳ ಮುಂದೆ ವಿಪರೀತ ಜನದಟ್ಟಣೆ ಇರುವ ಸಾಧ್ಯತೆಯಿದೆ. ಅನೇಕ ಎಟಿಎಂಗಳಲ್ಲಿ ಇನ್ನೂ ಕೂಡ ಸರಿಯಾಗಿ ಹಣ ಸಿಗುತ್ತಿಲ್ಲ. ಒಟ್ಟಾರೆ ಪರಿಸ್ಥಿತಿ ಇನ್ನೂ ಸುಧಾರಿಸಿದಂತೆ ಕಂಡುಬರುತ್ತಿಲ್ಲ. ಮುಂದಿನ 10 ದಿನಗಳವರೆಗೆ ಬ್ಯಾಂಕುಗಳಿಗೆ ಪೊಲೀಸ್ ಭದ್ರತೆ ನೀಡಬೇಕೆಂದು ಅಖಿಲ ಭಾರತ ಬ್ಯಾಂಕ್ ನೌಕರರ ಒಕ್ಕೂಟ ಕೋರಿದೆ ಎಂದು ಅದರ ಪ್ರಧಾನ ಕಾರ್ಯದರ್ಶಿ ಸಿಎಚ್ ವೆಂಕಟಾಚಲಮ್ ತಿಳಿಸಿದ್ದಾರೆ. ಗೊಂದಲಕ್ಕೀಡಾಗಿರುವ ಜನರು ಬ್ಯಾಂಕುಗಳ ಮುಂದೆ ಬಂದು ಹೊರಗಿನಿಂದ ಬ್ಯಾಂಕುಗಳ ಬಾಗಿಲನ್ನು ಮುಚ್ಚುತ್ತಿರುವ ಪ್ರಕರಣಗಳು ಉತ್ತರ ಪ್ರದೇಶ, ಬಿಹಾರ, ತಮಿಳುನಾಡು ಮೊದಲಾದ ಕಡೆ ನಡೆಯುತ್ತಿದೆ ಎಂದು ಅವರು ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ.
ಈ ಮಧ್ಯೆ ಆರ್ ಬಿಐ ಮತ್ತು ಹಣಕಾಸು ಸಚಿವಾಲಯ ಕೊನೆ ಕ್ಷಣದಲ್ಲಾದರೂ ಕಾರ್ಯತತ್ಪರವಾಗಿದ್ದು, ಕೆಲ ಹೊಸ ಕ್ರಮಗಳನ್ನು ಜಾರಿಗೆ ತರುವ ಮೂಲಕ ಗ್ರಾಹಕರಿಗೆ ವೇತನ ನೀಡಿಕೆ ಸಮಸ್ಯೆಗಳನ್ನು ಬಗೆಹರಿಸಲು ಬ್ಯಾಂಕುಗಳಿಗೆ ಸಹಾಯ ಮಾಡುತ್ತಿವೆ. ನಿನ್ನೆ ಸಂಜೆಯಿಂದ ಆರ್ ಬಿಐ ಬ್ಯಾಂಕುಗಳಿಗೆ ಹೆಚ್ಚು ಹಣವನ್ನು ಪೂರೈಸುತ್ತಿದೆ. ಡಿಸೆಂಬರ್ 7ರವರೆಗೆ ಹೆಚ್ಚಿನ ಹಣವನ್ನು ಆರ್ ಬಿಐ ಬ್ಯಾಂಕುಗಳಿಗೆ ಪೂರೈಸಲಿದೆ. 
ಹೀಗಾಗಿ 500ರ ಹೊಸ ನೋಟುಗಳನ್ನು ಆರ್ ಬಿಐ ಹೆಚ್ಚು ಮುದ್ರಿಸುತ್ತಿದೆ. ಈ ಹಿಂದೆ 2,000ದ ಹೊಸ ನೋಟುಗಳನ್ನು ಮಾತ್ರ ತಯಾರಿಸುತ್ತಿತ್ತು. ವೇತನ ಮತ್ತು ನಿವೃತ್ತಿ ವೇತನ ಹಣದ ಪೂರೈಕೆಯನ್ನು ಕೇಂದ್ರೀಯ ಬ್ಯಾಂಕ್ ಆರ್ ಬಿಐ ಶೇಕಡಾ 20ರಿಂದ 30ರಷ್ಟು ಹೆಚ್ಚಳ ಮಾಡಲಿದೆ. ದೊಡ್ಡ ದೊಡ್ಡ ಕಂಪೆನಿಗಳು ನೌಕರರಿಗೆ ಕ್ಯಾಶ್ ಬದಲಿಗೆ ಪ್ರಿಪೇಯ್ಡ್ ಪೇಮೆಂಟ್ ಮಾಡುವಂತೆ ಕೋರಿದೆ.
ಡಿಜಿಟಲ್ ಪೇಮೆಂಟ್ ವಿಸ್ತರಣೆಗೆ ಕಾರ್ಯಸೂಚಿಯನ್ನು ರಚಿಸಲು ಕೇಂದ್ರ ಸರ್ಕಾರ 13 ಸದಸ್ಯರ ತಂಡವನ್ನು ರಚಿಸುವುದಾಗಿ ಹೇಳಿದೆ. ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ತಂಡದ ನೇತೃತ್ವ ವಹಿಸಲಿದ್ದು, ಅದರಲ್ಲಿ ನವೀನ್ ಪಟ್ನಾಯಕ್, ಶಿವರಾಜ್ ಸಿಂಗ್ ಚೌಹಾಣ್, ಪವನ್ ಕುಮಾರ್ ಚಮ್ಲಿಂಗ್, ವಿ.ನಾರಾಯಣಸಾಮಿ ಮತ್ತು ದೇವೆಂದ್ರ ಫಡ್ನವಿಸ್ ಇದ್ದಾರೆ.
ಹೆಚ್ಚು ಹಣ ಪೂರೈಕೆಗೆ ಬ್ಯಾಂಕ್ ಒಕ್ಕೂಟ ಒತ್ತಾಯ: ಬ್ಯಾಂಕುಗಳು ಗ್ರಾಹಕರ ಬೇಡಿಕೆಗಳನ್ನು ಈಡೇರಿಸಲು ಹೆಚ್ಚು ಹಣ ಪೂರೈಸುವಂತೆ ಆರ್ ಬಿಐಯನ್ನು ಕೋರುತ್ತಿದೆ. ಇನ್ನೊಂದೆಡೆ ಬ್ಯಾಂಕುಗಳು ಹಣವನ್ನು ಗ್ರಾಪಕರಿಗೆ ನೀಡದೆ ಸಂಗ್ರಹಿಸಿಟ್ಟುಕೊಳ್ಳುತ್ತಿದೆ ಎಂಬುದು ಸತ್ಯಕ್ಕೆ ದೂರವಾದ ವಿಷಯ ಎಂದು ಬ್ಯಾಂಕು ನೌಕರರ ರಾಷ್ಟ್ರೀಯ ಸಂಘಟನೆ ಹೇಳಿಕೆಯಲ್ಲಿ ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com