ನವದೆಹಲಿ: ಕಾಶ್ಮೀರದ ಉರಿಯಲ್ಲಿ ಭಯೋತ್ಪಾದಕರ ದಾಳಿ, ಭಾರತ ಸೇನೆಯ ಸೀಮಿತ ದಾಳಿ ನಂತರ ಭಾರತ-ಪಾಕಿಸ್ತಾನ ಗಡಿ ಭಾಗದಲ್ಲಿ ನೆಲೆಗೊಂಡಿರುವ ಆತಂಕದ ಬಗ್ಗೆ ಭಾರತದ ಭದ್ರತಾ ಸಲಹೆಗಾರ ಅಜಿತ್ ದೋವಲ್ ಮತ್ತು ಪಾಕಿಸ್ತಾನದ ಭದ್ರತಾ ಸಲಹೆಗಾರ ನಾಜಿರ್ ಜಂಜುವಾ ದೂರವಾಣಿ ಮೂಲಕ ಮಾತುಕತೆ ನಡೆಸಿದ್ದಾರೆ.
ಇಬ್ಬರೂ ನಾಯಕರು ಗಡಿ ನಿಯಂತ್ರಣ ರೇಖೆ ಬಳಿ ಆತಂಕವನ್ನು ನಿವಾರಿಸಲು ಒಪ್ಪಿಕೊಂಡಿದ್ದಾರೆ ಎಂದು ಪಾಕಿಸ್ತಾನದ ವಿದೇಶಾಂಗ ವ್ಯವಹಾರಗಳ ಸಲಹೆಗಾರ ಸರ್ತಾಜ್ ಅಜೀಜ್ ಹೇಳಿದ್ದಾರೆ ಎಂದು ಎಎನ್ಐ ಸುದ್ದಿಸಂಸ್ಥೆ ಉಲ್ಲೇಖಿಸಿದೆ.
ಆತಂಕ ಪರಿಸ್ಥಿತಿಯನ್ನು ಶಮನಗೊಳಿಸುವಂತೆ ಅಂತಾರಾಷ್ಟ್ರೀಯ ಸಮುದಾಯ ಭಾರತ ಮತ್ತು ಪಾಕಿಸ್ತಾನಕ್ಕೆ ಒತ್ತಾಯಪಡಿಸುತ್ತಿದ್ದಂತೆ ನಿನ್ನೆ ಮಾತನಾಡಿದ್ದ ಪ್ರಧಾನಿ ಮೋದಿ, ಈ ದೇಶ ಆಸ್ತಿಪಾಸ್ತಿಗಾಗಿ ಎಂದಿಗೂ ಆಸೆ ಹೊಂದಿಲ್ಲ. ಭಾರತ ಯಾವತ್ತಿಗೂ ಬೇರೆ ದೇಶಗಳೊಂದಿಗೆ ಯುದ್ಧ ಮಾಡಿಲ್ಲ ಎಂದು ಹೇಳಿದ್ದರು.
ಆತಂಕ, ಗಲಭೆಯ ವಾತಾವರಣದಲ್ಲಿ ಭದ್ರತಾ ಪಡೆ ತೀವ್ರ ಎಚ್ಚರಿಕೆ ಘೋಷಿಸಿದ್ದು, ಗಡಿ ನಿಯಂತ್ರಣ ರೇಖೆ ಬಳಿ ಮತ್ತು ಪಾಕಿಸ್ತಾನದ ಅಂತಾರಾಷ್ಟ್ರೀಯ ಗಡಿ ಭಾಗದಲ್ಲಿ ಹಾಗೂ ಸುತ್ತಮುತ್ತಲ 10 ಕಿಲೋ ಮೀಟರ್ ವ್ಯಾಪ್ತಿಯಲ್ಲಿನ ಜನರನ್ನು ಸ್ಥಳಾಂತರಿಸಲಾಗಿದೆ.