
ನವದೆಹಲಿ: ಕೆಲವು ದಿನಗಳ ಹಿಂದೆ ತಮಿಳುನಾಡಿನಲ್ಲಿ ಎನ್ಐಎ ಅಧಿಕಾರಿಗಳು ನಡೆಸಿದ ಕಾರ್ಯಾಚರಣೆಯಲ್ಲಿ ಇಸೀಸ್ ಉಗ್ರ ಸಂಘಟನೆಯ ಕಾರ್ಯಕರ್ತ ಸುಬಹಾನಿ ಹಾಜ ಮೊಯಿದ್ದೀನ್ ಎಂಬ ಉಗ್ರನನ್ನು ಬಂಧಿಸದೇ ಇದ್ದಿದ್ದರೆ ಆತ ಇಸೀಸ್ ಪರವಾಗಿ ಭಾರತದಲ್ಲಿ ಮೊದಲ ಬಾರಿಗೆ ಒಂಟಿ ತೋಳ(ಲೋನ್ ವೂಲ್ಫ್) ಮಾದರಿ ದಾಳಿ ನಡೆಸಿದ ಉಗ್ರನಾಗಿರುತ್ತಿದ್ದ ಎಂಬ ಆಘಾತಕಾರಿ ಮಾಹಿತಿ ಬಹಿರಂಗವಾಗಿದೆ.
ಮೊಯಿದ್ದೀನ್ ಬಂಧನಕ್ಕೂ ಮುನ್ನ ಎನ್ಐಎ ಅಧಿಕಾರಿಗಳು ಪಶ್ಚಿಮ ಬಂಗಾಳದ ಮೊಹಮ್ಮದ್ ಮಸಿಯುದ್ದೀನ್ ಅಲಿಯಾಸ್ ಅಬು ಮೌಸಾನನ್ನ ಬಂಧಿಸಿದ್ದರು, ಈ ವರೆಗೂ ಆತನೊಬ್ಬನೇ ಒಂಟಿ ತೋಳ( ಲೋನ್ ಉಲ್ಫ್) ಮಾದರಿ ದಾಳಿ ನಡೆಸಲು ನಿಯೋಜಿತನಾಗಿದ್ದ ಉಗ್ರನೆಂದು ಹೇಳಲಾಗಿತ್ತು. ಆದರೆ ಎನ್ಐಎ ಅಧಿಕಾರಿಗಳು ಸುಬಹಾನಿ ಹಾಜ ಮೊಯಿದ್ದೀನ್ ನನ್ನ ಬಂಧಿಸಿದ ನಂತರ ಲೋನ್ ವುಲ್ಫ್ ದಾಳಿ ನಡೆಸಲು ಈತ ಗೌಪ್ಯವಾಗಿ ಸಿದ್ಧತೆ ನಡೆಸುತ್ತಿದ್ದ ಹಾಗೂ ಇಸೀಸ್ ಉಗ್ರ ಸಂಘಟನೆಯಿಂದ ತರಬೇತಿ ಪಡೆದು ಭಾರತಕ್ಕೆ ವಾಪಸ್ಸಾದ ನಂತರ ಕೇರಳದ ಇಸೀಸ್ ಉಗ್ರ ಸಂಘಟನೆಯ ಕಾರ್ಯಕರ್ತರೊಂದಿಗೂ ಸಹ ಸಂಪರ್ಕದಲ್ಲಿದ್ದ. ಅಷ್ಟೇ ಅಲ್ಲದೆ ಅಂತರ್ಜಾಲದ ಮೂಲಕ ಇಸೀಸ್ ಉಗ್ರ ಸಂಘಟನೆಯೊಂದಿಗೆ ನಿರತಂತರ ಸಂಪರ್ಕದಲ್ಲಿದ್ದ ಉಗ್ರ ದಾಳಿ ನಡೆಸುವ ವಿಧಾನಗಳ ಬಗ್ಗೆ ಚರ್ಚೆ ನಡೆಸುತ್ತಿದ್ದ ಎಂದು ಎನ್ಐಎ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇನ್ನು ಭಯೋತ್ಪಾದಕ ವಿರೋಧಿ ಕಾರ್ಯತಂತ್ರದ ತಜ್ಞರ ಪ್ರಕಾರ ಮೊಯಿದ್ದೀನ್ ಇಸೀಸ್ ಉಗ್ರ ಸಂಘಟನೆಯಿಂದ ವಾಪಸ್ಸಾಗಿದ್ದು ಒಳ್ಳೆಯ ಬೆಳವಣಿಗೆ ಎಂದು ವಿಶ್ಲೇಷಿಸಿದ್ದಾರೆ. ಇಸೀಸ್ ಉಗ್ರ ಸಂಘಟನೆಯಿಂದ ತರಬೇತಿ ಪಡೆಯಲು ತೆರಳಿದ್ದ ಮೊಯಿದ್ದೀನ್ ಗೆ ಇಸೀಸ್ ಉಗ್ರ ಸಂಘಟನೆಯ ಕರಾಳ, ವಿಕೃತ ಮುಖ ದರ್ಶನವಾಗಿದ್ದು, ಇಸೀಸ್ ಉಗ್ರರೊಂದಿಗಿನ ಜೀವನ ಸುಲಭವಾದುದ್ದಲ್ಲ ಎಂದು ಮೊಯಿದ್ದೀನ್ ಎನ್ಐಎ ಅಧಿಕಾರಿಗಳಿಗೆ ಮಾಹಿತಿ ನೀಡಿರುವುದು ಬಹಿರಂಗವಾಗಿದೆ.
ಇಸೀಸ್ ಉಗ್ರ ಸಂಘಟನೆಯ ಕ್ರೌರ್ಯವನ್ನು ಸಹಿಸಲು ಸಾಧ್ಯವಾಗಲಿಲ್ಲ. ಆದ್ದರಿಂದ ಇಸೀಸ್ ಉಗ್ರ ಸಂಘಟನೆಯನ್ನು ಬಿಟ್ಟುಬಿಡುವ ನಿರ್ಧಾರ ಕೈಗೊಂಡಿದ್ದೆ. ತರಬೇತಿ ಪಡೆಯುತ್ತಿದ್ದಾಗ ಇಸೀಸ್ ಉಗ್ರರು ಸಣ್ಣ ತಪ್ಪುಗಳಿಗೂ ಉಗ್ರ ಶಿಕ್ಷೆ ನೀಡುತ್ತಿದ್ದರು. ಮೊಣಕಾಲಿಗೆ ಪೆಟ್ಟು ಬಿದ್ದಾಗಲೂ 40 ದಿನಗಳು ಜೈಲಿನಲ್ಲಿಟ್ಟಿದ್ದರು ಎಂದು ಮೊಯಿದ್ದೀನ್ ಎನ್ಐಎ ಅಧಿಕಾರಿಗಳಿಗೆ ತಿಳಿಸಿದ್ದಾನೆ ಎನ್ನಲಾಗಿದೆ. ಭಾರತವಷ್ಟೇ ಅಲ್ಲದೆ ಯುಎಸ್, ಯುಕೆಯಿಂದ ಇಸೀಸ್ ಉಗ್ರ ಸಂಘಟನೆಯಿಂದ ತರಬೇತಿ ಪಡೆಯಲು ಹೋಗಿದ್ದವರು ಸಹ ಅಲ್ಲಿನ ಕ್ರೌರ್ಯವನ್ನು ತಡೆಯಲಾರದೆ ತಮ್ಮ ನಾಡಿಗೆ ವಾಪಸ್ಸಾಗಿರುವ ಉದಾಹರಣೆಗಳಿವೆ.
Advertisement