

ಪಾಟ್ನಾ: ಮಹಿಳಾ ದೌರ್ಜನ್ಯ ಹಾಗೂ ಕಾನೂನು ಸುವ್ಯವಸ್ಥೆಗೆ ಭಂಗದಂತಹ ಪ್ರಕರಣಗಳಿಂದ ಸದಾ ಕಾಲ ಸುದ್ದಿಯಲ್ಲಿರುವ ಉತ್ತರ ಪ್ರದೇಶದಲ್ಲಿ ಮತ್ತೊಂದು ವಿದ್ರಾವಕ ಘಟನೆ ನಡೆದಿದ್ದು, ತುಂಬುಗರ್ಭಿಣಿಯಾಗಿದ್ದ ಅತ್ಯಾಚಾರ ಸಂತ್ರಸ್ತೆಗೆ ಆಸ್ಪತ್ರೆ ಸಿಬ್ಬಂದಿ ಚಿಕಿತ್ಸೆ ನಿರಾಕರಿಸಿದ್ದರಿಂದ ಆ್ಯಂಬುಲೆನ್ಸ್ ನಲ್ಲೇ ಬಾಲಕಿ ಮಗುವಿಗೆ ಜನ್ಮ ನೀಡಿದ ಘಟನೆ ನಡೆದಿದೆ.
ಉತ್ತರ ಪ್ರದೇಶದ ಬರೇಲಿಯಲ್ಲಿ ಈ ಘಟನೆ ನಡೆದಿದ್ದು, 14 ವರ್ಷದ ಬಾಲಕಿಗೆ ಸ್ಥಳೀಯ ಸಮುದಾಯ ಆಸ್ಪತ್ರೆಯ ಸಿಬ್ಬಂದಿ ಆಕೆ ಚಿಕಿತ್ಸೆಗೆ ನಿರಾಕರಿಸಿದ್ದು, ಅತ್ಯಾಚಾರ ಸಂತ್ರಸ್ತೆ ಎಂದು ತಿಳಿದಬಳಿಕ ಚಿಕಿತ್ಸೆ ನೀಡುವುದಿಲ್ಲ ಎಂದು ಹೇಳಿದ್ದಾರೆ. ಹೀಗಾಗಿ ಅನ್ಯ ಮಾರ್ಗವಿಲ್ಲದೇ ಬಾಲಕಿ ಪೋಷಕರು ಬಾಲಕಿಯನ್ನು ಬರೇಲಿ ಜಿಲ್ಲಾಸ್ಪತ್ರೆಗೆ ಕರೆದೊಯ್ಯಲು ನಿರ್ಧರಿಸಿ ಆ್ಯಂಬುಲೆನ್ಸ್ ನಲ್ಲಿ ಸಾಗಿಸುತ್ತಿದ್ದಾಗ ಮಾರ್ಗಮಧ್ಯೆಯೇ ಬಾಲಕಿ ಶುಕ್ರವಾರ ಮಗುವಿಗೆ ಜನ್ಮ ನೀಡಿದ್ದಾಳೆ.
ಈ ಘಟನೆ ಉತ್ತರ ಪ್ರದೇಶದಾದ್ಯಂತ ವ್ಯಾಪಕವಾಗಿ ಹಬ್ಬಿದ್ದು, ಆಸ್ಪತ್ರೆ ನಡೆಯ ವಿರುದ್ಧ ವ್ಯಾಪಕ ಖಂಡನೆ ವ್ಯಕ್ತವಾಗುತ್ತಿದೆ. ಆದರ ಘಟನೆ ಸಂಬಂಧ ಪ್ರತಿಕ್ರಿಯೆ ನೀಡಿರುವ ಸಮುದಾಯ ಆಸ್ಪತ್ರೆ ಆಡಳಿತ ಮಂಡಳಿ ನಮ್ಮ ಸಿಬ್ಬಂದಿಗಳು ಬಾಲಕಿಗೆ ಚಿಕಿತ್ಸೆ ನೀಡುವುದಿಲ್ಲ ಎಂದು ಹೇಳಿಲ್ಲ. ಬದಲಿಗೆ ಬಾಲಕಿಗೆ ಅಗತ್ಯವಾದ ಚಿಕಿತ್ಸೆಗಾಗಿ ಪೂರಕ ಚಿಕಿತ್ಸಾ ಪರಿಕರಗಳ ಕೊರತೆ ಇತ್ತು. ಹೀಗಾಗಿ ಜಿಲ್ಲಾಸ್ಪತ್ರೆಗೆ ಸೇರಿಸುವಂತೆ ಸಲಹೆ ನೀಡಿದ್ದೆವು ಎಂದು ಸ್ಪಷ್ಟನೆ ನೀಡಿದ್ದಾರೆ.
ಆದರೆ ಆಸ್ಪತ್ರೆ ಹೇಳಿಕೆಯನ್ನು ನಿರಾಕರಿಸಿರುವ ಬಾಲಕಿ ಪೋಷಕರು ಬಾಲಕಿಯನ್ನು ಚಿಕಿತ್ಸೆ ದಾಖಲಿಸಿದಾಗ ಆಸ್ಪತ್ರೆಯ ನರ್ಸ್ ಬಾಲಕಿ ಬಗ್ಗೆ ವಿಚಾರಿಸಿದರು. ಆಗ ನಾವು ಆಕೆ ಮೇಲೆ ನಡೆದ ಅತ್ಯಾಚಾರವನ್ನು ಹೇಳಿದವು. ಆಗ ನರ್ಸ್ ಅತ್ಯಾಚಾರ ಸಂತ್ರಸ್ತೆಗೆ ಇಲ್ಲಿ ಚಿಕಿತ್ಸೆ ನೀಡುವುದಿಲ್ಲ ಎಂದು ಹೇಳಿ ನಮ್ಮನ್ನು ಕಳುಹಿಸಿದರು ಎಂದು ಆರೋಪಿಸಿದ್ದಾರೆ.
ಮದುವೆಯಾಗುವುದಾಗಿ ಹೇಳಿ 14ರ ಬಾಲೆ ಮೇಲೆ ನಿರಂತರ ಅತ್ಯಾಚಾರ
ಇನ್ನು ಬಾಲಕಿ ಪೋಷಕರು ಹೇಳಿರುವಂತೆ ಮನೆಯ ಪಕ್ಕದಲ್ಲಿದ್ದ ಯುವಕನೋರ್ವ ಬಾಲಕಿಯನ್ನು ಮದುವೆಯಾಗುವುದಾಗಿ ಹೇಳಿ ಆಕೆಯ ಮೇಲೆ ನಿರಂತರ ಅತ್ಯಾಚಾರ ಮಾಡಿದ್ದ. ಬಲಕಿ ಗರ್ಭಿಣಿ ಎಂದು ತಿಳಿದ ಕೂಡಲೇ ಆಕೆಯನ್ನು ಮದುವೆಯಾಗುವುದಿಲ್ಲ ಎಂದು ಹೇಳಿದ್ದ. ಇದೀಗ ಬಾಲಕಿ ಮಗುವಿಗೆ ಜನ್ಮ ನೀಡಿದ್ದಾಳೆ ಎಂದು ಹೇಳಿದ್ದಾರೆ.
ಪ್ರಸ್ತುತ ಮಗುವಿಗೆ ಜನ್ಮ ನೀಡಿರುವ ಬಾಲಕಿ ಹಾಗೂ ನವಜಾತ ಶಿಶು ಇಬ್ಬರನ್ನು ಬರೇಲಿ ಜಿಲ್ಲಾಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿದೆ.