
ಕಾನ್ಪುರ: ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಸ್ವಚ್ಛ ಭಾರತ ಅಭಿಯಾನದಿಂದ ಪ್ರೇರಣೆಗೊಂಡಿದ್ದ ಮಹಿಳೆಯೊಬ್ಬರು ತಮ್ಮ ಮಾಂಗಲ್ಯವನ್ನೇ ಮಾರಿ ಶೌಚಾಲಯವನ್ನು ಕಟ್ಟಿಸಿರುವ ಘಟನೆಯೊಂದು ಕಾನ್ಪುರ ಜಿಲ್ಲೆಯ ವಿಧ್ನು ಗ್ರಾಮದಲ್ಲಿ ನಡೆದಿದೆ.
ಲತಾ ದಿವಾಕರ್ ಮಾಂಗಲ್ಯ ಮಾರಿ ಶೌಚಾಲಯ ಕಟ್ಟಿಸಿದ ಮಹಿಳೆಯಾಗಿದ್ದಾರೆ. ಸ್ವಚ್ಛ ಭಾರತ ಅಭಿಯಾನದಿಂದ ಪ್ರೇರಣೆಗೊಂಡಿದ್ದ ಲತಾ ಅವರು, ಶೌಚಾಲಯ ಕಟ್ಟಿಸುವಂತೆ ಪತಿಗೆ ಹೇಳಿದ್ದಾರೆ. ಇದರಂತೆ ಇಬ್ಬರ ನಡುವೆ ಸಾಕಷ್ಟು ಜಗಳವಾಗಿದೆ. ನಂತರ ತನ್ನ ಮಾತಿಗೆ ಸ್ವಲ್ಪ ಕೂಡ ಬೆಲೆ ಕೊಡದ ಪತಿಯ ವಿರುದ್ಧ ತೀವ್ರವಾಗಿ ಕೆಂಡಾಮಂಡಲವಾದ ಲತಾ ಅವರು ಕೊನೆಗೆ ಯಾವುದೇ ದಾರಿ ಇಲ್ಲದೆ ಕೊರಳಲ್ಲಿದ್ದ ಮಾಂಗಲ್ಯವನ್ನು ರು.17 ಸಾವಿರಕ್ಕೆ ಮಾರಿ ಶೌಚಾಲಯವನ್ನು ಕಟ್ಟಿಸಿದ್ದಾರೆ.
ಶೌಚಾಲಯಕ್ಕಿಂತ ಮಗಳ ಮದುವೆಗೆ ಹಣವನ್ನು ಖರ್ಚು ಮಾಡಬೇಕೆಂದು ನನ್ನ ಪತಿ ಹೇಳುತ್ತಿದ್ದರು. ಆದರೆ, ಶೌಚಾಲಯ ಕಟ್ಟಿಸುವುದು ನನಗೆ ಮುಖ್ಯವಾಗಿತ್ತು. ಶೌಚಾಲಯ ಕಟ್ಟಿಸಲು ರು.25,000 ಹಣ ಬೇಕಿತ್ತು. ಮಾಂಗಲ್ಯವನ್ನು ರು.17 ಸಾವಿರಕ್ಕೆ ಮಾರಿದ್ದೆ. ಉಳಿದ ಹಣಕ್ಕೆ ಬೇರಾವುದೇ ದಾರಿಯಿಲ್ಲದೆ ಮನೆಯಲ್ಲಿದ್ದ ಕರುಗಳನ್ನು ಮಾರಿದೆ ಎಂದು ಲತಾ ಅವರು ಹೇಳಿದ್ದಾರೆ.
ಪತ್ನಿಯ ಈ ನಡೆಗೆ ಇದೀಗ ಪತಿ ಬಾಬುಲಾಲ್ ಅವರು ಕೂಡ ಶೌಚಾಲಯದ ಮಹತ್ವವನ್ನು ಅರಿತುಕೊಂಡಿದ್ದು, ಪತ್ನಿಗೆ ಬೆಂಬಲ ನೀಡಲು ಮುಂದಾಗಿದ್ದಾರೆ.
Advertisement