
ಮುಂಬೈ: ವಾಣಿಜ್ಯ ನಗರಿ ಮುಂಬೈ ಮತ್ತೊಂದು ಪಾತಕ ಕೃತ್ಯಕ್ಕೆ ಸಾಕ್ಷಿಯಾಗಿದ್ದು, 72 ವರ್ಷದ ಹಿರಿಯ ಆರ್ ಟಿಐ ಕಾರ್ಯಕರ್ತನನ್ನು ದುಷ್ಕರ್ಮಿಗಳು ಗುಂಡಿಟ್ಟು ಹತ್ಯೆ ಗೈದಿದ್ದಾರೆ.
ಮುಂಬೈನ ಸ್ಯಾಂಟಾಕ್ರೂಜ್ ನಲ್ಲಿರುವ ಆರ್ ಟಿಐ ಕಾರ್ಯಕರ್ತ ಭೂಪೇಂದ್ರ ವಿರಾ ಅವರ ಮನೆಗೆ ಶನಿವಾರ ನುಗ್ಗಿದ್ದ ದುಷ್ಕರ್ಮಿಗಳು ವಿರಾ ಅವರ ತಲೆಗೆ ಗನ್ ಇಟ್ಟು ಗುಂಡು ಹಾರಿಸಿದ್ದಾರೆ ಎಂದು ತಿಳಿದುಬಂದಿದೆ. ಮೂಲಗಳ ಪ್ರಕಾರ ಸ್ಥಳೀಯ ಅಕ್ರಮ ಭೂ ಒತ್ತುವರಿದಾರರ ವಿರುದ್ಧ ವಿರಾ ಕಾನೂನು ಸಮರ ಸಾರಿದ್ದರು. ಇಲ್ಲಿನ ಕಲಿನಾ ಕಾಲೋನಿಯಲ್ಲಿನ ಕೆಲ ಪ್ರಭಾವಿಗಳ ಅಕ್ರಮವಾಗಿ ಭೂಮಿಯನ್ನು ಒತ್ತುವರಿ ಮಾಡಿಕೊಂಡಿದ್ದರ ವಿರುದ್ಧ ವಿರಾ ಪೊಲೀಸರಿಗೆ ದೂರು ನೀಡಿದ್ದರು.
ಈ ಸಂಬಂಧ ವಿರಾ ಅವರಿಗೆ ಸಾಕಷ್ಟು ಬೆದರಿಕೆ ಕರೆಗಳು ಬರುತ್ತಿತ್ತಾದರೂ ಅವರು ಈ ಬಗ್ಗೆ ಹೆಚ್ಚಾಗಿ ತಲೆಕೆಡಿಸಿಕೊಂಡಿರಲಿಲ್ಲ. ಆದರೆ ಶನಿವಾರ ರಾತ್ರಿ ಸುಮಾರು 9 ಗಂಟೆ ವೇಳೆಯಲ್ಲಿ ವಿರಾ ಅವರ ಮನೆಗೆ ನುಗ್ಗಿದ ದುಷ್ಕರ್ಮಿಗಳ ತಂಡ ಅವರ ಪತ್ನಿ ಮನೆಯಲ್ಲಿರುವಾಗಲೇ ವಿರಾ ಅವರ ತಲೆಗೆ ಗುಂಡಿಕ್ಕಿದ್ದಾರೆ. ಆದರೆ ಗುಂಡಿನ ಶಬ್ದ ಪತ್ನಿಗೆ ಕೇಳಿಸಿರಲಿಲ್ಲ ಎಂದು ತಿಳಿದುಬಂದಿದೆ. ಗುಂಡೇಟಿನಿಂದ ವಿರಾ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಅವರ ಸಾವು ಇದೀಗ ಮುಂಬೈನಲ್ಲಿ ವ್ಯಾಪಕ ಸುದ್ದಿಗೆ ಗ್ರಾಸವಾಗಿದೆ.
ಇದೇ ವೇಳೆ ಮುಂಬೈನ ಸಾಕಷ್ಟು ಅಕ್ರಮ ಭೂ ಒತ್ತವರಿ ಕುರಿತಂತೆ ಸಾಕಷ್ಟು ಆರ್ ಟಿಐ ಕಾರ್ಯಕರ್ತರು ದೂರು ಸಲ್ಲಿಸಿದ್ದು, ಅವರು ಕೂಡ ಪ್ರಾಣ ಭೀತಿ ಎದುರಿಸುತ್ತಿದ್ದಾರೆ ಎಂದು ಭೂಪೇಂದ್ರ ವಿರಾ ಪತ್ನಿ ಕಳವಳ ವ್ಯಕ್ತಪಡಿಸಿದ್ದಾರೆ. ಭೂಪೇಂದ್ರ ವಿರಾ ಅವರಿದೆ ಮೂರು ಜನ ಮಕ್ಕಳಿದ್ದು, ಈ ಹಿಂದೆ ಇದೇ ಭೂ ಒತ್ತವರಿ ವಿಚಾರವಾಗಿ ಪ್ರಶ್ನಿಸಿದ್ದ ವಿರಾ ಅವರ ವಿರುದ್ಧ ಸೇಡು ತೀರಿಸಿಕೊಳ್ಳಲು ಅವರ ಪುತ್ರನೋರ್ವನಿಗೆ ದುಷ್ಕರ್ಮಿಗಳು ಚಾಕುವಿನಿಂದ ಇರಿದಿದ್ದರು ಎಂಬ ಮಾಹಿತಿಯನ್ನು ಅವರ ಪತ್ನಿ ತಿಳಿಸಿದ್ದಾರೆ.
ರಾಜಕಾರಣಿ ಹಾಗೂ ಆತನ ಪುತ್ರನ ಬಂಧನ
ಭೂಪೇಂದ್ರ ವಿರಾ ಹತ್ಯೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಮುಂಬೈ ಪೊಲೀಸರು ಇಂದು ಇಬ್ಬರು ಶಂಕಿತ ದುಷ್ಕರ್ಮಿಗಳನ್ನು ಬಂಧಿಸಿದ್ದಾರೆ. ಮೂಲಗಳ ಪ್ರಕಾರ ಬಂಧಿತರನ್ನು ಸ್ಥಳೀಯ ಮಾಜಿ ಕಾರ್ಪೋರೇಟರ್ ರಜಾಕ್ ಖಾನ್ ಹಾಗೂ ಆತನ ಪುತ್ರ ಅಮ್ಜದ್ ಎಂದು ಗುರುತಿಸಲಾಗಿದೆ.
ರಜಾಖ್ ಖಾನ್ ಕಲೀನಾ ಕಾಲೋನಿಯಲ್ಲಿ ಅಕ್ರಮವಾಗಿ ಭೂ ಒತ್ತುವರಿ ಮಾಡಿಕೊಂಡು ಕಟ್ಟಡ ನಿರ್ಮಾಣ ಮಾಡುತ್ತಿದ್ದರು. ಇದರ ವಿರುದ್ಧ ವಿರಾ ಅವರು ಕಾನೂನು ಹೋರಾಟ ನಡೆಸುತ್ತಿದ್ದರು ಎಂದು ಭೂಪೇಂದ್ರ ವಿರಾ ಪತ್ನಿ ಖುಶ್ಬೂ ಹೇಳಿದ್ದಾರೆ.
Advertisement