
ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಪೊಲೀಸರ ಮೇಲೆ ದಾಳಿ ಮಾಡಿದ ಉಗ್ರರು ನಂತರ ಅವರ ಬಳಿಯಿದ್ದ 5 ಬಂದೂಕುಗಳನ್ನು ಕಿತ್ತುಕೊಂಡು ಸ್ಥಳದಿಂದ ಪರಾರಿಯಾಗಿರುವ ಘಟನೆ ಅನಂತನಾಗ್ ಜಿಲ್ಲೆಯ ಟಿವಿ ಟವರ್ ಬಳಿ ಭಾನುವಾರ ರಾತ್ರಿ ನಡೆಸಿದಿದೆ.
ಕಳೆದ ರಾತ್ರಿ ಅನಂತನಾಗ್ ಜಿಲ್ಲೆಯಲ್ಲಿರುವ ಟಿವಿ ಟವರ್ ಬಳಿ ಬಂದಿರುವ ಉಗ್ರರು ಏಕಾಏಕಿ ಸ್ಥಳದಲ್ಲಿದ್ದ ಪೊಲೀಸರ ಮೇಲೆ ದಾಳಿ ಮಾಡಿದ್ದಾರೆ. ನಂತರ ಪೊಲೀಸರ ಬಳಿಯಿದ್ದ ಐದು ಬಂದೂಕುಗಳನ್ನು ಕಿತ್ತುಕೊಂಡು ಪರಾರಿಯಾಗಿದ್ದಾರೆಂದು ಮೂಲಗಳಿಂದ ತಿಳಿದುಬಂದಿದೆ. ಪರಾರಿಯಾದ ಉಗ್ರರಿಗಾಗಿ ಈಗಾಗಲೇ ಕಾರ್ಯಾಚರಣೆಯನ್ನು ಆರಂಭಿಸಲಾಗಿದೆ.
ಈಗಾಗಲೇ ಭಾರತದೊಳಗೆ ನುಸುಳಿರುವ ಉಗ್ರರು ದೊಡ್ಡ ಮಟ್ಟದಲ್ಲಿಯೇ ವಿಧ್ವಂಸಕ ದಾಳಿ ನಡೆಸಲು ಸಂಚು ರೂಪಿಸುತ್ತಿದ್ದು, ಉಗ್ರರ ಸಂಚನ್ನು ಭಾರತೀಯ ಸೇನೆ ವಿಫಲಗೊಳ್ಳುವಂತೆ ಮಾಡುತ್ತಿದೆ.
ಸೀಮಿತ ದಾಳಿಯಲ್ಲಿ ಪಾಕಿಸ್ತಾನದ ಸಾಕಷ್ಟು ಉಗ್ರರ ನೆಲೆಗಳನ್ನು ಭಾರತೀಯ ಸೇನೆ ಧ್ವಂಸಗೊಳಿಸಿತ್ತು. ಭಾರತದ ಮೇಲೆ ಪ್ರತೀಕಾರ ತೀರಿಸಿಕೊಳ್ಳಲು ಉಗ್ರ ಸಂಘಟನೆಗಳು ಹವಣಿಸುತ್ತಿವೆ. ಜಮ್ಮು ಮತ್ತು ಕಾಶ್ಮೀರ ಸೇರಿದಂತೆ ಹಲವೆಡೆ ಬಿಗಿ ಭದ್ರತೆಯನ್ನು ಒದಗಿಸಿರುವುದರಿಂದ ಈಗಾಗಲೇ ಭಾರತದೊಳಗೆ ನುಸುಳಿರುವ ಉಗ್ರರಿಗೆ ಅತ್ತಿತ್ತ ಅಲುಗಾಡಲು ಸಾಧ್ಯವಾಗದೆ ಒದ್ದಾಡುವಂತಹ ಪರಿಸ್ಥಿತಿ ಎದುರಾಗಿದೆ.
Advertisement