
ನವದೆಹಲಿ: ದೇಶ ವಿರೋಧಿ ಘೋಷಣೆಗಳಿಂದ ವಿವಾದಕ್ಕೀಡಾಗಿರುವ ದೆಹಲಿಯ ಜವಾಹರ್ ಲಾಲ್ ನೆಹರೂ ವಿಶ್ವವಿದ್ಯಾಲಯ ಮತ್ತೆ ಸುದ್ದಿಯಲ್ಲಿದ್ದು, ವಿವಿಯ ವಿದ್ಯಾರ್ಥಿಯೊಬ್ಬ ಅನುಮಾನಾಸ್ಪದವಾಗಿ ನಾಪತ್ತೆಯಾಗಿದ್ದಾನೆ ಎಂದು ತಿಳಿದುಬಂದಿದೆ.
ನಜೀಬ್ ಅಹ್ಮಮದ್ ಎಂಬ ವಿದ್ಯಾರ್ಥಿ ಜೆಎನ್ ಯು ಕ್ಯಾಂಪಸ್ ನಿಂದ ಅನುಮಾನಾಸ್ಪದವಾಗಿ ನಾಪತ್ತೆಯಾಗಿದ್ದು, ಕಳೆದ ಶನಿವಾರದಿಂದ ಆತನ ಕಾಣುತ್ತಿಲ್ಲ ಎಂದು ತಿಳಿದುಬಂದಿದೆ. ಇದೀಗ ನಾಪತ್ತೆಯಾಗಿರುವ ತನ್ನ ಮಗನನ್ನು ಹುಡುಕಿಕೊಡುವಂತೆ ನಜೀಬ್ ಅಹ್ಮಮದ್ ಅವರ ಪೋಷಕರು ಕ್ಯಾಂಪಸ್ ನಲ್ಲಿಯೇ ಪ್ರತಿಭಟನೆ ನಡೆಸುತ್ತಿದ್ದು, ಪೋಷಕರಿಗೆ ಕೆಲ ವಿದ್ಯಾರ್ಥಿಗಳು ಕೂಡ ಸಾಥ್ ನೀಡಿದ್ದಾರೆ.
ಜೆಎನ್ ಯುನಲ್ಲಿ ಬಯೋಟೆಕ್ನಾಲಜಿ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿದ್ದ ನಜೀಬ್ ಅಹ್ಮಮದ್ ಕಳೆದ 15 ದಿನಗಳ ಹಿಂದಷ್ಟೇ ವಿವಿಯ ಹಾಸ್ಟೆಲ್ ಗೆ ಬಂದಿದ್ದ ಎಂದು ತಿಳಿದುಬಂದಿದೆ.
ಮೂಲಗಳ ಪ್ರಕಾರ ವಿದ್ಯಾರ್ಥಿ ನಜೀಬ್ ಅಹ್ಮಮದ್ ನಾಪತ್ತೆಯ ಹಿಂದೆ ಎಬಿವಿಪಿ ಸಂಘಟನೆಯ ಕೈವಾಡವಿದೆ ಎಂದು ಶಂಕಿಸಲಾಗುತ್ತಿದೆ. ವಿದ್ಯಾರ್ಥಿ ಸಮುದಾಯದ ಚುನಾವಣೆ ನಿಮಿತ್ತ ಕಳೆದ ಶುಕ್ರವಾರ ವಿವಿ ಆವರಣ ಮತ್ತು ಹಾಸ್ಟೆಲ್ ನಲ್ಲಿ ಪ್ರಚಾರ ನಡೆಸಲಾಗಿತ್ತು. ಈ ವೇಳೆ ವಿದ್ಯಾರ್ಥಿ ನಜೀಬ್ ಅಹ್ಮಮದ್ ಎಬಿವಿಪಿ ಸಂಘಟನೆಗೆ ಸೇರಿದ್ದ ಸದಸ್ಯನಿಗೆ ಕಪಾಳ ಮೋಕ್ಷ ಮಾಡಿದ್ದ. ಇದರಿಂದ ಕುಪಿತಗೊಂಡಿದ್ದ ಆತ ರಾತ್ರೋರಾತ್ರಿ ತನ್ನ ಇತರೆ ಸಂಗಡಿಗರನ್ನು ಕರೆತಂದು ನಜೀಬ್ ಅಹ್ಮಮದ್ ಮೇಲೆ ಹಲ್ಲೆ ನಡೆಸಿದ್ದ. ಈ ಘಟನೆ ಬಳಿಕ ನಜೀಬ್ ಅಹ್ಮಮದ್ ನಾಪತ್ತೆಯಾಗಿದ್ದಾನೆ ಎಂದು ಆತನ ಸ್ನೇಹಿತರು ಅನುಮಾನ ವ್ಯಕ್ತಪಡಿಸಿದ್ದಾರೆ.
ಇನ್ನು ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬಿಜೆಪಿ ಘಟನೆಗೂ ಎಬಿವಿಪಿಗೂ ಯಾವುದೇ ಸಂಬಂಧವಿಲ್ಲ. ವಿದ್ಯಾರ್ಥಿಗಳ ನಡುವಿನ ಗಲಾಟೆಯನ್ನು ದುರುದ್ದೇಶಪೂರ್ವಕವಾಗಿ ರಾಜಕೀಯಗೊಳಿಸಲಾಗುತ್ತಿದೆ ಎಂದು ಅಭಿಪ್ರಾಯಪಟ್ಟಿದೆ.
Advertisement