
ಮುಂಬೈ; ಎ ದಿಲ್ ಹೇ ಮುಷ್ಕಿಲ್ ಚಿತ್ರಕ್ಕೆ ಎಂಎನ್ಎಸ್ ಬೆದರಿಕೆ ನೀಡಿರುವ ನಡುವೆಯೂ ಕರಣ್ ಜೋಹರ್ ಅವರಿಗೆ ಕೇಂದ್ರ ಗೃಹ ಸಚಿವ ರಾಜನಾಥ ಸಿಂಗ್ ಅವರು ಗುರುವಾರ ಬೆಂಬಲ ವ್ಯಕ್ತಪಡಿಸಿದ್ದಾರೆ.
ಚಿತ್ರವನ್ನು ಪ್ರದರ್ಶಿಸುವ ಧೈರ್ಯವನ್ನು ಮಲ್ಟಿಪ್ಲೆಕ್ಸ್ ಮಾಡಿದ್ದೇ ಆದರೆ, ಚಿತ್ರಮಂದಿರಗಳನ್ನು ಧ್ವಂಸಗೊಳಿಸುವುದಾಗಿ ಎಂಎನ್ಎಸ್ ಬೆದರಿಕೆ ಹಾಕಿರುವ ಹಿನ್ನೆಲೆಯಲ್ಲಿ ಇಂದು ಕೇಂದ್ರ ಸಚಿವರನ್ನು ಭೇಟಿ ಮಾಡಿರುವ ಮುಖೇಶ್ ಭಟ್, ಕರಣ್ ಜೋಹರ್ ಹಾಗೂ ಇನ್ನಿತರೆ ನಿರ್ಮಾಪಕರು ಮಾತುಕತೆ ನಡೆಸಿದ್ದಾರೆ.
ಗೃಹ ಸಚಿವರೊಂದಿಗಿನ ಮಾತುಕತೆ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಭಾರತದ ಚಲನಚಿತ್ರ ಮತ್ತು ಕಿರುತೆರೆ ನಿರ್ಮಾಪಕರ ಸಂಘದ ಅಧ್ಯಕ್ಷ ಮುಖೇಶ್ ಭಟ್ ಅವರು, ಶಾಂತಿಯುತವಾಗಿ ಚಿತ್ರ ಬಿಡುಗಡೆ ಮಾಡುವುದಕ್ಕೆ ರಾಜನಾಥ ಸಿಂಗ್ ಅವರು ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದ್ದಾರೆ. ಚಿತ್ರ ಬಿಡುಗಡೆ ಸಂದರ್ಭದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವಂತೆಯೂ ಮುಖ್ಯಮಂತ್ರಿಗಳಿಗೆ ಸೂಚನೆ ನೀಡುತ್ತೇನೆಂದು ಗೃಹ ಸಚಿವರು ಹೇಳಿದ್ದಾರೆಂದು ಹೇಳಿದ್ದಾರೆ.
ಪಾಕಿಸ್ತಾನ ರಾಷ್ಟ್ರ ನಮ್ಮ ಚಿತ್ರಗಳನ್ನು ನಿಷೇಧ ಮಾಡಿದರೆ. ನಮಗೆ ಚಿಂತೆಯಿಲ್ಲ. ನಮ್ಮ ಚಿತ್ರಗಳು ವಿಶ್ವದೆಲ್ಲೆಡೆ ಬಿಡುಗಡೆಗೊಳ್ಳುತ್ತವೆ. ನಮಗೆ ಪಾಕಿಸ್ತಾನದ ಅಗತ್ಯವಿಲ್ಲ. ಚಿತ್ರ ನೋಡುವುದು ಯಾರಿಗೆ ಇಷ್ಟವಿಲ್ಲವೋ ಅವರು ಸುಮ್ಮನಿರಲಿ. ಬೇರೆಯವರ ಮೇಲೆ ಒತ್ತಡ ಹೇರುವುದು, ತಡೆಯೊಡ್ಡುವುದು ನಿಲ್ಲಿಸಲಿ ಎಂದು ರಾಜನಾಥ್ ಸಿಂಗ್ ಅವರು ಮಾತುಕತೆ ವೇಳೆ ತಿಳಿಸಿದ್ದಾರೆಂದು ಅವರು ಹೇಳಿದ್ದಾರೆ.
Advertisement