
ಮುಂಬೈ: ಪಾಕಿಸ್ತಾನ ಕಲಾವಿದ ಫವಾದ್ ಖಾನ್ ಪ್ರಮುಖ ಪಾತ್ರದಲ್ಲಿ ನಟಿಸಿರುವ 'ಎ ದಿಲ್ ಹೇ ಮುಷ್ಕಿಲ್' ಚಿತ್ರ ವಿರುದ್ಧದ ಪ್ರತಿಭಟನೆಯನ್ನು ಎಂಎನ್ಎಸ್ ತೀವ್ರಗೊಳಿಸಿರುವ ಹಿನ್ನೆಲೆಯಲ್ಲಿ ಸಹಾಯಕ್ಕಾಗಿ ಚಿತ್ರದ ನಿರ್ಮಾಪಕರು ಗುರುವಾರ ರಾಜನಾಥ್ ಸಿಂಗ್ ಮೊರೆ ಹೋಗಿದ್ದಾರೆ.
ಮುಂಬೈನ ಮಲ್ಟಿಪ್ಲೆಕ್ಸ್ ಗಳ ಮುಂದೆ ಈಗಾಗಲೇ ಮಹಾರಾಷ್ಟ್ರ ನವನಿರ್ಮಾಣ ಸೇನೆ ಪ್ರತಿಭಟನೆ ನಡೆಸುತ್ತಿದ್ದು, ಚಿತ್ರಕ್ಕೆ ಭಾರೀ ವಿರೋಧವನ್ನು ವ್ಯಕ್ತಪಡಿಸುತ್ತಿದೆ. ಈ ಹಿನ್ನೆಲೆಯಲ್ಲಿ ನಿರ್ಮಾಪಕರಾದ ಮುಕೇಶ್ ಭಟ್, ಅಪೂರ್ವ ಮೆಹ್ತಾ ಹಾಗೂ ಕರಣ್ ಜೋಹರ್ ಅವರು ಇಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರನ್ನು ಭೇಟಿ ಮಾಡಲು ತೀರ್ಮಾನಿಸಿದ್ದಾರೆಂದು ಹೇಳಲಾಗುತ್ತಿದೆ.
ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟಿಸಿದ್ದ ಎ ದಿಲ್ ಹೇ ಮುಷ್ಕಿಲ್ ಚಿತ್ರವನ್ನು ಬಿಡುಗಡೆ ಮಾಡಲು ನಿರ್ಧರಿಸಲಾಗಿತ್ತು. ಚಿತ್ರದಲ್ಲಿ ಪಾಕಿಸ್ತಾನ ಕಲಾವಿದ ಫವಾದ್ ಖಾನ್ ಅವರು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಉರಿ ದಾಳಿ ನಂತರ ಭಾರತ ಮತ್ತು ಪಾಕಿಸ್ತಾನ ದೇಶಗಳ ನಡುವಿನ ಸಂಬಂಧ ಹದಗೆಟ್ಟಿದ್ದು, ಈ ಹಿನ್ನೆಲೆಯಲ್ಲಿ ಪಾಕಿಸ್ತಾನ ಕಲಾವಿದರಿಗೆ ಭಾರತದಲ್ಲಿ ನಿಷೇಧ ಹೇರಬೇಕೆಂದು ಎಂಎನ್ಎಸ್ ಪಟ್ಟು ಹಿಡಿದಿತ್ತು. ಇದರ ಬೆನ್ನಲ್ಲೇ ಭಾರತೀಯ ಚಲನಚಿತ್ರ ನಿರ್ಮಾಪಕರ ಸಂಘ ಕೂಡ ಪಾಕಿಸ್ತಾನ ಕಲಾವಿದರಿಗೆ ಭಾರತದಲ್ಲಿ ನಿಷೇಧ ಹೇರಿತ್ತು.
ಎ ದಿಲ್ ಹೇ ಮುಷ್ಕಿಲ್ ಚಿತ್ರದಲ್ಲಿ ಪಾಕಿಸ್ತಾನ ಕಲಾವಿದ ಫವಾದ್ ಖಾನ್ ಅವರು ಪ್ರಮುಖ ಪಾತ್ರದಲ್ಲಿ ನಟಿಸಿರುವ ಹಿನ್ನೆಲೆಯಲ್ಲಿ ಚಿತ್ರಕ್ಕೆ ಮಹಾರಾಷ್ಟ್ರ ನವನಿರ್ಮಾಣ ಸೇನೆ ಭಾರೀ ವಿರೋಧವನ್ನು ವ್ಯಕ್ತಪಡಿಸುತ್ತಿದೆ. ಚಿತ್ರ ಪ್ರದರ್ಶನ ಮಾಡುವ ನಿರ್ಧಾರವನ್ನು ಮಲ್ಟಿಪ್ಲೆಕ್ಸ್ ಗಳು ತೆಗೆದುಕೊಂಡಿದ್ದೇ ಆದರೆ, ಮಲ್ಟಿಪ್ಲೆಕ್ಸ್ ಚಿತ್ರ ಮಂದಿರಗಳನ್ನು ಧ್ವಂಸ ಮಾಡುತ್ತೇವೆಂದು ಬೆದರಿಕೆಯನ್ನು ಹಾಕಿದೆ. ಈ ಹಿನ್ನೆಲೆಯಲ್ಲಿ ಕರಣ್ ಜೋಹರ್ ಅವರು ಚಿತ್ರ ಬಿಡುಗಡೆಗೆ ಯಾವುದೇ ತೊಡಕಾದಂತೆ ಸಹಾಯ ಮಾಡುವಂತೆ ಕೋರಿ ಇಂದು ರಾಜನಾಥ ಸಿಂಗ್ ಅವರನ್ನು ಭೇಟಿ ಮಾಡಲಿದ್ದಾರೆಂದು ತಿಳಿದುಬಂದಿದೆ.
Advertisement