
ಮುಂಬೈ: ವಿವಾದಿತ ಎ ದಿಲ್ ಹೆ ಮುಷ್ಕಿಲ್ ಚಿತ್ರದ ವಿರುದ್ಧದ ಮಹಾರಾಷ್ಟ್ರ ನವನಿರ್ಮಾಣ ಸೇನೆ (ಎಂಎನ್ಎಸ್) ಪ್ರತಿಭಟನೆಯನ್ನು ಮುಂದುವರೆಸಿದ್ದು, ಚಿತ್ರ ಬಿಡುಗಡೆಯಾಗುವುದಕ್ಕೆ ಬಿಡುವುದಿಲ್ಲ ಎಂದು ಗುರುವಾರ ಹೇಳಿದೆ.
ಚಿತ್ರದಲ್ಲಿ ಪಾಕಿಸ್ತಾನ ಕಲಾವಿದ ಫವಾದ್ ಖಾನ್ ಅವರು ನಟಿಸಿದ್ದು. ಯಾವುದೇ ಕಾರಣಕ್ಕೂ ಚಿತ್ರ ಬಿಡುಗಡೆಯಾಗುವುದಕ್ಕೆ ಬಿಡುವುದಿಲ್ಲ ಎಂದು ಹೇಳಿ ಎಂಎನ್ಎಸ್ ಕಾರ್ಯಕರ್ತರು ಮುಂಬೈನಲ್ಲಿರುವ ಮೆಲ್ಟಿಪ್ಲೆಕ್ಸ್ ವೊಂದರ ಮುಂದೆ ಪ್ರತಿಭಟನೆ ನಡೆಸುತ್ತಿದ್ದಾರೆಂದು ತಿಳಿದುಬಂದಿದೆ.
ಚಿತ್ರಕ್ಕೆ ವಿರೋಧಗಳು ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ಕೆಲ ದಿನಗಳ ಹಿಂದಷ್ಟೇ ಕರಣ್ ಜೋಹರ್ ಅವರು ಹೇಳಿಕೆಯೊಂದನ್ನು ನೀಡಿದ್ದರು. ಚಿತ್ರಕ್ಕೆ ವಿರೋಧಗಳು ವ್ಯಕ್ತವಾಗುತ್ತಿದ್ದರೂ ನಾನು ಮೌನವಹಿಸಿದ್ದೆ, ಇದಕ್ಕೆ ಕಾರಣ ನನಗೆ ನೋವಾಗಿದೆ. ನನ್ನನ್ನು ದೇಶ ವಿರೋಧಿ ಎಂದು ಕೆಲವರು ಕರೆದಿದ್ದರು. ಮೊದಲು ಇದಕ್ಕೆ ಉತ್ತರ ನೀಡಲು ಬಯಸುತ್ತೇನೆ. ನನಗೆ ದೇಶ ಮೊದಲು. ದೇಶಕ್ಕಿಂತಲೂ ಮಿಗಿಲಾದದ್ದು ಬೇರೆ ಇಲ್ಲ. ನನ್ನ ಕೆಲಸ ಮೂಲಕ ನನ್ನ ದೇಶಾಭಿಮಾನವನ್ನು ನಾನು ತೋರಿಸಿದ್ದೇನೆಂದು ಹೇಳಿದ್ದರು.
ಸೆಪ್ಟೆಂಬರ್-ಡಿಸೆಂಬರ್ ವರೆಗಿನ ವಾತಾವರಣ ವಿಭಿನ್ನವಾಗಿತ್ತು. ಇದೀಗ ವಾತಾವರಣ ಬದಲಾಗಿದೆ. ಉಭಯ ದೇಶಗಳ ನಡುವಿನ ಸಂಬಂಧವನ್ನು ಸರಿಪಡಿಸುವ ಸರ್ಕಾರಗಳು ಸಲುವಾಗಿ ಸಾಕಷ್ಟು ಪ್ರಯತ್ನಗಳನ್ನು ಮಾಡುತ್ತಿದೆ. ಆ ಪ್ರಯತ್ನಗಳನ್ನು ನಾನು ಗೌರವಿಸುತ್ತೇನೆ. ಜನರ ಭಾವನೆಗಳು ಹಾಗೂ ಆಲೋಚನೆಗಳನ್ನು ನಾನು ಅರ್ಥಮಾಡಿಕೊಳ್ಳುತ್ತೇನೆ. ಮುಂದಿನ ಚಿತ್ರಗಳಲ್ಲಿ ಯಾವುದೇ ಕಾರಣಕ್ಕೂ ವಿದೇಶಿ ಹಾಗೂ ಪಾಕಿಸ್ತಾನ ಕಲಾವಿದರನ್ನು ಹಾಕಿಕೊಂಡು ಚಿತ್ರ ಮಾಡುವುದಿಲ್ಲ. ಚಿತ್ರದಲ್ಲಿ 3000ಕ್ಕೂ ಹೆಚ್ಚು ಭಾರತೀಯ ಜನರು ರಕ್ತ ಹರಿಸಿದ್ದಾರೆ. ಇಂತಹ ಜನರು ಕಷ್ಟ ಅನುಭವಿಸುವುದು ಸರಿಯಲ್ಲ ಎಂದು ತಿಳಿಸಿದ್ದರು.
Advertisement