ಉತ್ತರ ಪ್ರದೇಶದ ಮಿರ್ಜಾಪುರ್ ಜಿಲ್ಲೆಯ ನವ ದಂಪತಿಗಳು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸೂಚಿಸಿದಂತೆ ಮಗಳಿಗೆ ವೈಭವಿ ಎಂದು ನಾಮಕರಣ ಮಾಡಿ ಸಂಭ್ರಮಿಸಿದ್ದಾರೆ.
ನವದಂಪತಿಗಳಾದ ಭರತ್ ಸಿಂಗ್ ಮತ್ತು ವಿಭಾ ತಮ್ಮ ಮಗಳಿಗೆ ಹೆಸರು ಸೂಚಿಸುವಂತೆ ಕೋರಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಆಗಸ್ಟ್ 13 ರಂದು ಪತ್ರ ಬರೆದಿದ್ದರು. ಇದಕ್ಕೆ ಪ್ರತಿಯಾಗಿ ಆಗಸ್ಟ್ 20 ರಂದು ಪ್ರಧಾನಮಂತ್ರಿ ಕಚೇರಿ(ಪಿಎಂಒ) ನಿಂದ ರಾತ್ರಿ 10 ಗಂಟೆಗೆ ಸುಮಾರಿಗೆ ದಂಪತಿಗೆ ಕರೆ ಬಂದಿದ್ದು ಪ್ರಧಾನಿಗಳು ನಿಮ್ಮ ಜತೆ ಮಾತನಾಡಲಿದ್ದಾರೆ ಎಂದು ಹೇಳಿದರಂತೆ. ಬಳಿಕ ಪ್ರಧಾನಿ ಮೋದಿ ಅವರು ಎರಡು ಕಾಲು ನಿಮಿಷ ನಮ್ಮ ಜತೆ ಮಾತನಾಡಿದರು. ಮಗಳು ಹುಟ್ಟಿರುವುದಕ್ಕೆ ಶುಭಾಶಯ ಹೇಳಿದರು. ಬಳಿಕ ಮಗಳಿಗೆ ವೈಭವಿ ಎಂದು ಹೆಸರಿಡುವಂತೆ ಸೂಚಿಸಿದರು ಎಂದು ದಂಪತಿಗಳು ಹೇಳಿಕೊಂಡಿದ್ದಾರೆ.
ಇನ್ನು ತಮ್ಮೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಕರೆ ಮಾಡಿ ಮಾತನಾಡಿದರು ಎಂದು ಗ್ರಾಮಸ್ಥರಿಗೆ ಹೇಳಿಕೊಂಡಿದ್ದರು. ಆದರೆ ಇದನ್ನು ಯಾರು ನಂಬಿರಲಿಲ್ಲ. ಇದಾದ ಮಾರನೇ ದಿನ ಆಗಸ್ಟ್ 22ಕ್ಕೆ ಮತ್ತೆ ಭರತ್ ಸಿಂಗ್ ತಮ್ಮ ಮೊಬೈಲ್ ಗೆ ಕರೆ ಬಂದಿದ್ದ ನಂಬರ್ ಗೆ ಕರೆ ಮಾಡಿ ಪ್ರಧಾನಿಗಳ ಶುಭ ಆರೈಕೆ ಹಾಗೂ ಅವರು ಹೆಸರು ಸೂಚಿಸಿದಕ್ಕೆ ಪತ್ರ ನೀಡುವಂತೆ ಹೇಳಿದ್ದರು. ಅದರಂತೆ ಆಗಸ್ಟ್ 30ರಂದು ಪ್ರಧಾನಿ ಕಚೇರಿಯಿಂದ ಪತ್ರ ಬಂದಿದೆ ಎಂದು ಹೇಳಿದ್ದಾರೆ.
ಪತ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ದಂಪತಿಗಳಿಗೆ ಶುಭಾಶಯ ಹೇಳಿದ್ದು, ನಿಮ್ಮ ಮನೆಗೆ ಮಗಳ ಆಗಮನವಾಗಿದೆ. ವೈಭವಿಯ ಕನಸುಗಳನ್ನು ನನಸು ಮಾಡಿ, ಮುಂದೆ ಅವಳೇ ನಿಮ್ಮ ಶಕ್ತಿಯಾಗಲಿದ್ದಾಳೆ ಎಂದು ಪತ್ರದಲ್ಲಿ ಬರೆಯಲಾಗಿತ್ತು.