ಐಎನ್ ಎಸ್ ವಿರಾಟ್ ಗೆ ಹೃದಯ ಸ್ಪರ್ಶಿ ವಿದಾಯ!

ಭಾರತೀಯ ಸೇನೆ ಒಂದು ಕಾಲದ ಶಕ್ತಿ ಹಾಗೂ ವಿಶ್ವದ ‘ಗ್ರ್ಯಾಂಡ್ ಓಲ್ಡ್ ಲೇಡಿ’ ಎಂದು ಖ್ಯಾತಿ ಪಡೆದಿದ್ದ ಭಾರತೀಯ ನೌಕಾಪಡೆಯ ನೌಕೆ ಐಎನ್​ಎಸ್ ವಿರಾಟ್​ಗೆ ಭಾನುವಾರ ವಿದ್ಯುಕ್ತ ಬೀಳ್ಕೊಡುಗೆ ನೀಡಲಾಯಿತು.
ಐಎನ್ ಎಸ್ ವಿರಾಟ್ ವಿದ್ಯುಕ್ತ ಬೀಳ್ಕೊಡುಗೆ (ಸಂಗ್ರಹ ಚಿತ್ರ)
ಐಎನ್ ಎಸ್ ವಿರಾಟ್ ವಿದ್ಯುಕ್ತ ಬೀಳ್ಕೊಡುಗೆ (ಸಂಗ್ರಹ ಚಿತ್ರ)

ಮುಂಬೈ: ಭಾರತೀಯ ಸೇನೆ ಒಂದು ಕಾಲದ ಶಕ್ತಿ ಹಾಗೂ ವಿಶ್ವದ ‘ಗ್ರ್ಯಾಂಡ್ ಓಲ್ಡ್ ಲೇಡಿ’ ಎಂದು ಖ್ಯಾತಿ ಪಡೆದಿದ್ದ ಭಾರತೀಯ ನೌಕಾಪಡೆಯ ನೌಕೆ ಐಎನ್​ಎಸ್ ವಿರಾಟ್​ಗೆ ಭಾನುವಾರ  ವಿದ್ಯುಕ್ತ ಬೀಳ್ಕೊಡುಗೆ ನೀಡಲಾಯಿತು.

ಕಳೆದ 5 ದಶಕಗಳಿಂದ ಭಾರತೀಯ ನೌಕಾಪಡೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಯುದ್ಧ ವಿಮಾನ ವಾಹಕ ಐಎನ್​ಎಸ್ ವಿರಾಟ್ (ಆರ್-22) ಜುಲೈ 23ರಂದೇ ಕಾರ್ಯಾಚರಣೆಯಿಂದ  ಹೊರಗುಳಿದಿತ್ತಾದರೂ, ಭಾನುವಾರ ನೌಕೆಗೆ ಅಧಿಕೃತವಾಗಿ ವಿದಾಯ ಹೇಳಲಾಗಿದೆ. ಹಿಂದುಮಹಾಸಾಗರ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿದ್ದ ನೌಕೆಯನ್ನು ಮುಂಬೈ ಬಂದರಿಗೆ  ತರಲಾಗಿದ್ದು, ಭಾನುವಾರ ಅಧಿಕೃತವಾಗಿ ಸೇವೆಯನ್ನು ಅಂತ್ಯಗೊಳಿಸಲಾಯಿತು ಎಂದು ನೌಕಾಪಡೆಯ ಅಧಿಕಾರಿಗಳು ತಿಳಿಸಿದ್ದಾರೆ.

ದಕ್ಷಿಣ ನೌಕಾಪಡೆ ಮುಖ್ಯಸ್ಥ ಅಡ್ಮಿರಲ್ ನಾಡಕರ್ಣಿ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು. ಮೂರು ಟಗ್ ಬೋಟ್ ಗಳ ಸಹಾಯದಿಂದ ಐಎನ್ ಎಸ್ ವಿರಾಟ್ ಅನ್ನು ಸಮುದ್ರಕ್ಕೆ  ಎಳೆದೊಯ್ಯಲಾಯಿತು. ಬಳಿಕ ನೌಕೆ ಕೇರಳದ ಕೊಚ್ಚಿ ಬಂದರಿನ ಎರ್ನಾಕುಲಂನಿಂದ ಪ್ರಯಾಣ ಬೆಳೆಸಿತು. ಆ ಮೂಲಕ ಐಎನ್ ಎಸ್ ವಿರಾಟ್ ತನ್ನ ಅಂತಿಮ ಪ್ರಯಾಣ ಬೆಳೆಸಿತು. ಅಲ್ಲಿಂದ  ವಿಶಾಖಪಟ್ಟಣಕ್ಕೆ ತೆರಳಿರುವ ನೌಕೆ ಅಲ್ಲಿಯೇ ಲಂಗರು ಹಾಕಲಿದ್ದು, ಪ್ರವಾಸೋಧ್ಯಮ ಕಾರಣಕ್ಕಾಗಿ ಆಂಧ್ರ ಪ್ರದೇಶ ಸರ್ಕಾರ ನೌಕೆಯನ್ನು ಬಳಸಿಕೊಳ್ಳಲಿದೆ.

ವಿಶಾಖ ಪಟ್ಟಣದಲ್ಲಿ ನೌಕೆಯನ್ನು ಆಂಧ್ರಪ್ರದೇಶ ಸರ್ಕಾರಕ್ಕೆ ಹಸ್ತಾಂತರಿಸುವುದಾಗಿ ನೌಕಾಪಡೆ ತಿಳಿಸಿದ್ದು, ಪ್ರವಾಸೋದ್ಯಮ ಉತ್ತೇಜನಕ್ಕಾಗಿ ಐಎನ್​ಎಸ್ ವಿರಾಟ್ ನೌಕೆಯನ್ನು  ವಿಶಾಖಪಟ್ಟಣ ಲಂಗರುದಾಣದಲ್ಲಿ ಇಡಲು ಆಂಧ್ರಪ್ರದೇಶ ಸರ್ಕಾರ ನಿರ್ಧರಿಸಿದೆ.

"ವಿರಾಟ" ರೂಪ
ವಿಕ್ಕರ್ಸ್ ನೌಕಾ ನಿರ್ಮಾಣ ಮತ್ತು ಇಂಜಿನಿಯರಿಂಗ್ ಕಂಪನಿ ತಯಾರಿಸಿದ್ದ ಈ ನೌಕೆ ಗರಿಷ್ಠ 30 ಯುದ್ಧ ವಿಮಾನಗಳನ್ನು ಹೊತ್ತೊಯ್ಯುವ ಸಾಮರ್ಥ್ಯ ಹೊಂದಿತ್ತು. 1956 ಫೆಬ್ರವರಿ 16ರಂದು  ನೌಕೆಗೆ ಚಾಲನೆ ನೀಡಲಾಯಿತು. 1959 ನವೆಂಬರ್ 18ರಂದು ಕಾರ್ಯಾಚರಣೆ ಆರಂಭಿಸಿತ್ತು. 27 ವರ್ಷ ರಾಯಲ್ ನೇವಿ(ಬ್ರಿಟಿಷ್ ನೌಕಾದಳ)ಯಲ್ಲಿ ಸೇವೆ ಸಲ್ಲಿಸಿದ್ದ ನೌಕೆಯನ್ನು 1987  ಮೇ 12ರಂದು ಭಾರತ ಖರೀದಿಸಿತ್ತು. ಸೀ ಹ್ಯಾರಿಯರ್ (ವೈಟ್ ಟೈಗರ್) ಎಂಕೆ 51 ಮತ್ತು ಎಂಕೆ 52, ಸೀಕಿಂಗ್ 42 ಬಿ (ಜಲಾಂತರ್ಗಾಮಿ ನಿಗ್ರಹ ಕ್ಷಿಪಣಿಯುಕ್ತ ಹೆಲಿಕಾಪ್ಟರ್),  ಸೀಕಿಂಗ್ 42 ಸಿ(ಕಮಾಂಡೋ ಕರಿಯರ್ ಹೆಲಿಕಾಪ್ಟರ್), ಎಚ್​ಎಎಲ್ ಚೇತಕ್, ಎಚ್​ಎಎಲ್ ಧ್ರುವ್ ಸೇರಿ 28 ಯುದ್ಧವಿಮಾನಗಳನ್ನು ಹೊತ್ತೊಯ್ಯುತ್ತಿತ್ತು.

ಐಎನ್​ಎಸ್ ವಿರಾಟ್​ನಲ್ಲಿ 1, 206 ನೌಕಾ ಸಿಬ್ಬಂದಿ ಮತ್ತು 143 ವಾಯು ಸೇನಾ ಸಿಬ್ಬಂದಿ ಸೇರಿದಂತೆ ಗರಿಷ್ಠ 2,100 ಮಂದಿ ಕಾರ್ಯ ನಿರ್ವಹಿಸುತ್ತಿದ್ದರು. ತನ್ನ ಸೇವಾವಧಿಯಲ್ಲಿ ನೌಕೆಯು ಆರು ವರ್ಷಕ್ಕೂ ಅಧಿಕಕಾಲ ಸರಿಸುಮಾರು 2, 250 ಗಂಟೆಗೂ ಅಧಿಕ ಸಮಯವನ್ನು ಸಮುದ್ರದಲ್ಲಿ ಕಳೆದಿದ್ದು, 5,88,288 ನಾಟಿಕಲ್ ಮೈಲು ದೂರ ಕ್ರಮಿಸಿದೆ. 27 ಬಾರಿ ಭೂಮಿಯನ್ನು ಸುತ್ತಿರುವ ಖ್ಯಾತಿ ನೌಕೆಗೆ ಇದೆ.

ಇನ್ನು ಐಎನ್ ಎಸ್ ವಿರಾಟ್ ಹಲವು ಜಂಟಿ ಸಮರಾಭ್ಯಾಸಗಳಲ್ಲಿ ಪಾಲ್ಗೊಂಡಿದ್ದು, ಭಾರತದ ಪರ ಇತ್ತೀಚೆಗೆ ನಡೆದ ಮಲಬಾರ್ ನಲ್ಲೂ ಪಾಲ್ಗೊಂಡಿತ್ತು. ಇದಲ್ಲದೆ ವರುಣಾ, ನಸೀಮ್ ಅಲ್ ಬಹರ್ ನಂತಹ ಪ್ರಮುಖ ತರಬೇತಿಯಲ್ಲಿ ನೌಕೆ ಪಾಲ್ಗೊಂಡಿತ್ತು. 2013ರಲ್ಲಿ ಐಎನ್​ಎಸ್ ವಿಕ್ರಮಾದಿತ್ಯ ನೌಕೆಯನ್ನು ಬೀಳ್ಕೊಟ್ಟ ನಂತರ ಬ್ರಿಟಿಷ್ ಸರ್ಕಾರ ನಿರ್ಮಾಣದ ಏಕೈಕ ನೌಕೆಯಾಗಿ ಐಎನ್​ಎಸ್ ವಿರಾಟ್ ಸೇವೆ ಸಲ್ಲಿಸುತ್ತಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com