

ಅಲಹಾಬಾದ್: ಸಾಕಷ್ಟು ಭದ್ರತೆಯ ನಡುವೆಯೂ ಅಲಹಾಬಾದ್ ಹೈಕೋರ್ಟ್ ಆವರಣದಲ್ಲಿ ಸ್ಫೋಟಕ ವಸ್ತು ತುಂಬಿದ ಬ್ಯಾಗ್ ವೊಂದು ಗುರುವಾರ ರಾತ್ರಿ ಪತ್ತೆಯಾಗಿರುವುದಾಗಿ ತಿಳಿದುಬಂದಿದೆ.
ನ್ಯಾಯಾಲಯದ ಕೊಠಡಿಯೊಂದರಲ್ಲಿ ಬ್ಯಾಗ್ ದೊರಕಿತ್ತು. ಬ್ಯಾಗ್ ನಲ್ಲಿ ಕಡಿಮೆ ತೀವ್ರತೆಯುಳ್ಳ ಕಚ್ಚಾ ಬಾಂಬ್ ಗಳು ದೊರಕಿದ್ದವು. ಕೆಲ ಅಧಿಕಾರಿಗಳಿಗೆ ತೊಂದರೆ ಮಾಡುವ ಸಲುವಾಗಿ ದುಷ್ಕರ್ಮಿಗಳು ಈ ರೀತಿಯಾಗಿ ಮಾಡಿರಬಹುದು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ನ್ಯಾಯಾಲಯದ ನ.55 ಕೊಠಡಿಯಲ್ಲಿ ಬ್ಯಾಗ್ ದೊರಕಿತ್ತು. ಅನುಮಾನಸ್ಪದವಾಗಿ ಬ್ಯಾಗ್ ಕಾಣಿಸುತ್ತಿದ್ದಂತೆ ಸ್ಥಳೀಯ ಸಿಬ್ಬಂದಿಗಳು ಮೇಲಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ನಂತರ ಜಿಲ್ಲಾಧಿಕಾರಿ ಸಂಜಯ್ ಕುಮಾರ್ ಮತ್ತು ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಶಲಾಭ್ ಮಥೂರ್ ಹಾಗೂ ಬಾಂಬ್ ನಿಷ್ಕ್ರಿಯ ದಳದ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದರು. ಕೂಡಲೇ ನ್ಯಾಯಾಲಯದ ಆವರಣದಿಂದ ಬ್ಯಾಗನ್ನು ಸುರಕ್ಷಿತವಾಗಿ ಹೊರಗೆ ತೆಗೆದುಕೊಂಡು ಹೋಗಿ ಬಾಂಬ್ ಗಳನ್ನು ನಿಷ್ಕ್ರಿಯ ಗೊಳಿಸಲಾಗಿತ್ತು ಎಂದು ಅಧಿಕಾರಿಗಳು ಹೇಳಿದ್ದಾರೆ.
ಘಟನೆ ಕುರಿತಂತೆ ಆಶ್ಚರ್ಯ ವ್ಯಕ್ತಪಡಿಸಿರುವ ಅಧಿಕಾರಿಗಳು, ಹೈಕೋರ್ಟ್ ಆವರಣದಲ್ಲಿ 150 ಕ್ಕೂ ಹೆಚ್ಚು ಪೊಲೀಸರು ಭದ್ರತೆಯನ್ನು ನೀಡುತ್ತಿರುತ್ತಾರೆ. ಪ್ರತೀಯೊಂದು ಮೂಲೆಯಲ್ಲಿಯೂ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ನ್ಯಾಯಾಲಯದ ಒಳಾಂಗಣದಲ್ಲಿಯೂ ಸಿಆರ್ ಪಿಎಫ್ ಯೋಧರು ಕರ್ತವ್ಯದಲ್ಲಿ ನಿರತರಾಗಿರುತ್ತಾರೆ. ಇಷ್ಟೊಂದು ಭದ್ರತೆಯ ನಡುವೆಯೂ ಸ್ಫೋಟಕ ವಸ್ತುಗಳಿದ್ದ ಬ್ಯಾಗ್ ನ್ಯಾಯಾಲಯದೊಳಗೆ ಹೇಗೆ ಬಂದಿತು ಎಂಬುದು ಅರ್ಥವಾಗುತ್ತಿಲ್ಲ ಎಂದಿದ್ದಾರೆ.
ಬ್ಯಾಗ್ ನಲ್ಲಿ ಎರಡು ಕಚ್ಚಾ ಬಾಂಬ್ ಗಳಿದ್ದವು. ನಂತರ ಬಾಂಬ್ ನಿಷ್ಕ್ರಿಯ ದಳದ ಅಧಿಕಾರಿಗಳು ಬಾಂಬ್ ಗಳನ್ನು ನಿಷ್ಕ್ರಿಯಗೊಳಿಸಿದ್ದರು. ಇದಲ್ಲದೆ, ಕೆಲ ಪಟಾಕಿಗಳನ್ನು ಬ್ಯಾಗ್ ನಲ್ಲಿರಿಸಲಾಗಿತ್ತು. ಸ್ಫೋಟಕ ವಸ್ತುಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.