ಶವ ಸಾಗಿಸಲು ಆ್ಯಂಬುಲೆನ್ಸ್ ಚಾಲಕ ನಕಾರ: ಸಹಾಯಕ್ಕಾಗಿ ಅಲೆದಾಡಿದ ಹೆತ್ತ ತಾಯಿ

ಉತ್ತರ ಪ್ರದೇಶದಲ್ಲಿ ಆ್ಯಂಬುಲೆನ್ಸ್ ಚಾಲಕರ ನಿರ್ಲಕ್ಷ್ಯ ಪ್ರಕರಣಗಳು ಹೆಚ್ಚಾಗುತ್ತಲೇ ಬಂದಿದ್ದು, ಇದಕ್ಕೆ ಉದಾಹರಣೆಯೆಂಬಂತೆ ಮೀರುತ್ ನಲ್ಲಿ ನಡೆದಿರುವ ಮತ್ತೊಂದು...
ಶವ ಸಾಗಿಸಲು ಆ್ಯಂಬುಲೆನ್ಸ್ ಚಾಲಕ ನಕಾರ: ಸಹಾಯಕ್ಕಾಗಿ ಅಲೆದಾಡಿದ ಹೆತ್ತ ತಾಯಿ
ಶವ ಸಾಗಿಸಲು ಆ್ಯಂಬುಲೆನ್ಸ್ ಚಾಲಕ ನಕಾರ: ಸಹಾಯಕ್ಕಾಗಿ ಅಲೆದಾಡಿದ ಹೆತ್ತ ತಾಯಿ

ಮೀರುತ್: ಉತ್ತರ ಪ್ರದೇಶದಲ್ಲಿ ಆ್ಯಂಬುಲೆನ್ಸ್ ಚಾಲಕರ ನಿರ್ಲಕ್ಷ್ಯ ಪ್ರಕರಣಗಳು ಹೆಚ್ಚಾಗುತ್ತಲೇ ಬಂದಿದ್ದು, ಇದಕ್ಕೆ ಉದಾಹರಣೆಯೆಂಬಂತೆ ಮೀರುತ್ ನಲ್ಲಿ ನಡೆದಿರುವ ಮತ್ತೊಂದು ಘಟನೆ ಸಾಕ್ಷ್ಯಿಯಾಗಿದೆ.

ಶವ ಸಾಗಿಸಲು ಆ್ಯಂಬುಲೆನ್ಸ್ ಚಾಲಕನೊಬ್ಬ ನಿರಾಕರಿಸಿದ ಪರಿಣಾಮ, ತನ್ನ ಮಗಳ ಮೃತ ದೇಹ ಸಾಗಿಸಲು ತಾಯಿಯೊಬ್ಬಳು ಅಲೆದಾಡಿರುವ ಹೃದಯ ವಿದ್ರಾವಕ ಘಟನೆಯೊಂದು ಉತ್ತರ ಪ್ರದೇಶದ ಮೀರುತ್ ನಲ್ಲಿ ನಡೆದಿದೆ.

ಭಾಗ್‌ಪಟ್ ಜಿಲ್ಲೆಯ ನಿವಾಸಿಯಾಗಿರುವ ಇಮ್ರಾನಾ ಎಂಬುವವರ ಎರಡೂವರೆ ವರ್ಷದ ಮಗಳು ಗುಲ್ಡಾಡ್ ನ್ನು ಪಿಎಲ್ ಶರ್ಮಾ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಗುರುವಾರ ರಾತ್ರಿ ಬಾಲಕಿಯ ಸ್ಥಿತಿ ಚಿಂತಾಜನಕವಾಗಿದ್ದರಿಂದ ಮೀರುತ್ ನಲ್ಲಿರುವ ಲಾಲಾ ಲಜಪತ್ ರಾಯ್ ಮೆಡಿಕಲ್ ಕಾಲೇಜಿಗೆ ದಾಖಲಿಸುವಂತೆ ಅಲ್ಲಿನ ವೈದ್ಯರು ಸಲಹೆ ನೀಡಿದ್ದಾರೆ. ಇದರಂತೆ ಮಗಳನ್ನು ಎಲ್ಎಲ್ಆರ್ ಎಂಸಿ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಬಾಲಕಿ ಮೃತಪಟ್ಟಿದ್ದಾಳೆ.

ಮಗಳು ಮೃತಪಟ್ಟ ನಂತರ ಮೃತದೇಹವನ್ನು ಮನೆಗೆ ಕರೆದೊಯ್ಯಲು ಆ್ಯಂಬುಲೆನ್ಸ್ ವ್ಯವಸ್ಥೆ ಕಲ್ಪಿಸುವಂತೆ ವೈದ್ಯರ ಬಳಿ ಮನವಿ ಮಾಡಲಾಗಿತ್ತು. ಗಂಟೆ ಕಳೆದರೂ ಯಾವುದೇ ಪ್ರತಿಕ್ರಿಯೆ ಬರದಿದ್ದ ಹಿನ್ನೆಲೆಯಲ್ಲಿ ಆಸ್ಪತ್ರೆಯ ಆ್ಯಂಬುಲೆನ್ಸ್ ಚಾಲಕನ ಸಹಾಯ ಕೇಳಿದೆ. ಈ ವೇಳೆ ಆತ ಬೇರೆ ಜಿಲ್ಲೆಗೆ ಬರಲು ಸಾಧ್ಯವಿಲ್ಲ ಎಂದು ಹೇಳಿದ.

ನಂತರ 108ಗೆ ಕರೆ ಮಾಡಿದ್ದೆ. ಕೆಲ ಗಂಟೆಗಳ ಬಳಿಕ ಆಸ್ಪತ್ರೆಯ ಬಳಿ ಆ್ಯಂಬುಲೆನ್ಸ್ ವೊಂದು ಬಂದಿತ್ತು. ಆದರೆ ಚಾಲಕ ರು.1,500 ಹಣ ನೀಡುವಂತೆ ಕೇಳಿದ. ನನ್ನ ಬಳಿ ಅಷ್ಟೊಂದು ಹಣವಿರಲಿಲ್ಲ ಎಂದು ಇಮ್ರಾನಾ ಅವರು ಹೇಳಿಕೊಂಡಿದ್ದಾರೆ.

ಆ್ಯಂಬುಲೆನ್ಸ್ ಸೇವೆ ಸಿಗದಿದ್ದ ಕಾರಣ ಇಮ್ರಾನಾ ಅವರು ಆಸ್ಪತ್ರೆಯ ಹೊರಭಾಗದಲ್ಲಿ ಮಗಳ ಶವವನ್ನು ಮಡಿಲಿನಲ್ಲೇ ಇರಿಸಿಕೊಂಡು ರಾತ್ರಿ ಕಳೆದಿದ್ದಾರೆ. ಮರುದಿನ ಬೆಳಗ್ಗೆ ಸ್ಥಳೀಯ ಜನರು ಇಮ್ರಾನಾ ಅವರಿಗೆ ಸಹಾಯ ಮಾಡಿ ಖಾಸಗಿ ಆ್ಯಂಬುಲೆನ್ಸ್ ನಲ್ಲಿ ಶವವನ್ನು ತೆಗೆದುಕೊಂಡು ಹೋಗಲು ಸಹಾಯಮಾಡಿದ್ದಾರೆ.

ಈ ಹಿಂದೆ ಇದೇ ರೀತಿಯ ಘಟನೆಯೊಂದು ಒಡಿಶಾದಲ್ಲಿ ನಡೆದಿತ್ತು. ಆ್ಯಂಬುಲೆನ್ಸ್ ಚಾಲಕನೊಬ್ಬ ನಡುರಸ್ತೆಯಲ್ಲೇ ಕೈಬಿಟ್ಟ ಕಾರಣ 7 ವರ್ಷದ ತನ್ನ ಮಗಳ ಮೃತ ದೇಹವನ್ನು ಹೊತ್ತ ತಂದೆಯೊಬ್ಬ 5 ಕಿ.ಮೀ ವರೆಗೂ ಕಣ್ಣೀರಿಡುತ್ತಾ ನಡೆದಿದ್ದ. ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದ ಅಲ್ಲಿನ ಜಿಲ್ಲಾಧಿಕಾರಿ ಪ್ರಕರಣವನ್ನು ತನಿಖೆಗೆ ಆದೇಶಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com