ದೀಪಿಕಾ, ಜಾಕ್ವೆಲಿನ್ ಫರ್ನಾಂಡಿಸ್, ರಾಣಿ ಮುಖರ್ಜಿ ಗೆ ಬಿಪಿಎಲ್ ಕಾರ್ಡ್ ಮೂಲಕ ರೇಷನ್!

ದೀಪಿಕಾ ಪಡುಕೋಣೆ, ಜಾಕ್ವೆಲಿನ್ ಫರ್ನಾಂಡಿಸ್, ರಾಣಿ ಮುಖರ್ಜಿ, ದಬಾಂಗ್ ಬ್ಯೂಟಿ ಸೋನಾಕ್ಷಿ ಸಿನ್ಙಾ ಬಿಪಿಎಲ್ ಕಾರ್ಡ್ ಮೂಲಕ ತಮ್ಮ ಮನೆಗೆ ರೇಷನ್ ಪಡೆಯುತ್ತಿದ್ದಾರಂತೆ...!
ದೀಪಿಕಾ ಪಡುಕೋಣೆ, ಜಾಕ್ವೆಲಿನ್ ಫರ್ನಾಂಡಿಸ್ ಹಾಗೂ ಸರ್ಕಾರಿ ಪಡಿತರ (ಸಂಗ್ರಹ ಚಿತ್ರ)
ದೀಪಿಕಾ ಪಡುಕೋಣೆ, ಜಾಕ್ವೆಲಿನ್ ಫರ್ನಾಂಡಿಸ್ ಹಾಗೂ ಸರ್ಕಾರಿ ಪಡಿತರ (ಸಂಗ್ರಹ ಚಿತ್ರ)

ಲಖನೌ: ದೀಪಿಕಾ ಪಡುಕೋಣೆ, ಜಾಕ್ವೆಲಿನ್ ಫರ್ನಾಂಡಿಸ್, ರಾಣಿ ಮುಖರ್ಜಿ, ದಬಾಂಗ್ ಬ್ಯೂಟಿ ಸೋನಾಕ್ಷಿ ಸಿನ್ಙಾ ಬಿಪಿಎಲ್ ಕಾರ್ಡ್ ಮೂಲಕ ತಮ್ಮ ಮನೆಗೆ ರೇಷನ್ ಪಡೆಯುತ್ತಿದ್ದಾರಂತೆ...!

ಹೌದು..ಬಾಲಿವುಡ್ ನ ಖ್ಯಾತ ನಟಿಯರಾದ ದೀಪಿಕಾ ಪಡುಕೋಣೆ, ಜಾಕ್ವೆಲಿನ್ ಫರ್ನಾಂಡಿಸ್, ರಾಣಿ ಮುಖರ್ಜಿ, ದಬಾಂಗ್ ಬ್ಯೂಟಿ ಸೋನಾಕ್ಷಿ ಸಿನ್ಙಾ ಅವರು ಉತ್ತರ ಪ್ರದೇಶದಲ್ಲಿ ಬಿಪಿಎಲ್  (ಬಡತನ ರೇಖೆಗಿಂತ ಕೆಳಗಿರುವವರು) ಕಾರ್ಡ್ ಮೂಲಕ ಪಡಿತರ ಪಡೆಯುತ್ತಿದ್ದಾರಂತೆ. ಇನ್ನೂ ಪ್ರಮುಖ ಅಂಶವೆಂದರೆ ಈ ಎಲ್ಲ ನಟಿಯರಿಗೂ ಮದುವೆಯಾಗಿದ್ದು, ಜಾಕ್ವೆಲಿನ್ ಫರ್ನಾಂಡಿಸ್  ಅವರ ಪತಿ ಸಾಧುಲಾಲ್, ದೀಪಿಕಾ ಪತಿ ರಾಕೇಶ್ ಚಾಂದ್, ಸೋನಾಕ್ಷಿ ಪತಿ ರಮೇಶ್ ಚಾಂದ್ ಹಾಗೂ ರಾಣಿ ಮುಖರ್ಜಿ ಪತಿ ರಾಮ್ ಸ್ವರೂಪ್ ಎಂಬುವವರ ಪಡಿತರ ಪಡೆಯುತ್ತಿದ್ದಾರೆ...!

ಅರೆ..ಇದೇನಿದು ಬಾಲಿವುಡ್ ನ ಮೋಸ್ಟ್ ಸಕ್ಸಸ್ ಫುಲ್ ಹೀರೋಯಿನ್ ಗಳಾದ ಇವರು ಹೇಗೆ ಬಿಪಿಎಲ್ ಕಾರ್ಡ್ ಮೂಲಕ ಸರ್ಕಾರಿ ಪಡಿತರ ಅಂಗಡಿಯಲ್ಲಿ ದಿನಸಿ ಪಡೆಯಲು ಸಾಧ್ಯ ಎಂದು  ನೀವು ಪ್ರಶ್ನಿಸಿದರೆ..ಹೌದು.. ಉತ್ತರ ಪ್ರದೇಶದಲ್ಲಿನ ನಕಲಿ ರೇಷನ್ ಕಾರ್ಡ್ ದಂಧೆಯಲ್ಲಿ ಇವೆಲ್ಲವೂ ಸಾಧ್ಯ.. ಉತ್ತರ ಪ್ರದೇಶದ ಫರ್ಕಾಬಾದ್ ಜಿಲ್ಲೆಯ ಕಾಯ್ಮಗಂಜ್ ಕ್ಷೇತ್ರದ ಸಾಹಬ್ ಗಂಜ್  ನಲ್ಲಿ  ಈ ನಟಿಯರ ಹೆಸರಿನಲ್ಲಿ ಬಡತನ ರೇಖೆಗಿಂತ ಕೆಳಗಿರುವ(ಬಿಪಿಎಲ್) ಶ್ರೇಣಿಯಲ್ಲಿ ರೇಷನ್ ಕಾರ್ಡುಗಳಿವೆ. ಇಷ್ಟೇ ಅಲ್ಲದೆ ವ್ಯವಸ್ಥತವಾಗಿ ರೇಷನ್ ಕೂಡಾ ಹಂಚಲಾಗುತ್ತಿದೆ.

ಯಾರಿಗೋ ಸೇರಬೇಕಾಗಿರುವ ಸರ್ಕಾರಿ ಪಡಿತರವನ್ನು ಸ್ಥಳೀಯ ಸರ್ಕಾರಿ ಪಡಿತರ ವಿತರಕನೊಬ್ಬ ನಕಲಿ ಪಡಿತರ ಚೀಟಿಗಳನ್ನು ಸೃಷ್ಟಿಸಿ ತನ್ನ ಜೇಬಿಗಿಳಿಸುತ್ತಿದ್ದಾನೆ. ಈ ಬಗ್ಗೆ ಸ್ಥಳೀಯರು  ನೀಡಿದ ದಾಖಲೆ ಮೇರೆಗೆ ತನಿಖೆ ನಡೆಸಿದ ಜಿಲ್ಲಾಧಿಕಾರಿ ಪ್ರಕಾಶ್ ಬಿಂದು ಅವರು, ದಾಖಲೆ ಪರಿಶೀಲಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಕಾಯ್ಮಗಂಜ್ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ  ಸಾಹಬ್'ಗಂಜ್ ಹಳ್ಳಿಯ 169 ಕುಟುಂಬಗಳಿಗೆ ರೇಷನ್ ಕಾರ್ಡ್ ವಿತರಿಸಲಾಗಿದ್ದು, ಈ ಪೈಕಿ 40 ಕುಟುಂಬಗಳಿಗೆ ವಿತರಿಸಲಾಗಿರುವ ಪಡಿತರ ಚೀಟಿ ನಕಲಾಗಿದ್ದು, ಬಿಪಿಎಲ್ ಕುಟುಂಬಗಳಿಗೆ  ಕಲ್ಪಿಸಲಾಗಿರುವ ಅಂತ್ಯೋದಯ' ಕಾರ್ಡುಗಳ ಪಟ್ಟಿಯಲ್ಲಿ ದೀಪಿಕಾ ಪಡುಕೋಣೆ, ಜಾಕ್ವೆಲಿನ್ ಫೆರ್ನಾಂಡಿಸ್, ಸೋನಾಕ್ಷಿ ಸಿನ್ಹಾ ಹಾಗೂ ರಾಣಿ ಮುಖರ್ಜಿ ಹೆಸರನ್ನು ಸೇರಿಸಲಾಗಿದೆ.

ಇನ್ನು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಜಿಲ್ಲಾಧಿಕಾರಿ ಪ್ರಕಾಶ್ ಬಿಂದು ಅವರು, ತತ್ ಕ್ಷಣದಿಂದಲೇ ಆರೋಪ ಕೇಳಿಬಂದಿರುವ ಪಡಿತರ ವಿತರಕನ ಪರವಾನಗಿಯನ್ನು  ಅಮಾನತುಗೊಳಿಸಿದ್ದು, ತನಿಖೆ ಆದೇಶಿಸಿದ್ದಾರೆ. ಅಲ್ಲದೆ ತಮ್ಮ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಎಲ್ಲ ಪಡಿತರ ಚೀಟಿಗಳನ್ನು ಕೂಲಂಕುಷವಾಗಿ ಪರಿಶೀಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.  ಒಟ್ಟಾರೆ ಬಡವರ ಕೈ ಸೇರಬೇಕಿರುವ ಪಡಿತರ ಇಂತಹ ಕಳ್ಳ-ಕಾಕರ ಚಾಣಾಕ್ಷತನದಿಂದಾಗಿ ಅವರ ಗೋದಾಮು ಸೇರುವಂತಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com