
ನವದೆಹಲಿ: ಉತ್ತರ ಕೊರಿಯಾ ನಡೆಸಿರುವ ಪರಮಾಣು ಶಸ್ತ್ರಾಸ್ತ್ರ ಪರೀಕ್ಷೆಯನ್ನು ಭಾರತ ಅತ್ಯಂತ ಆತಂಕಕಾರಿ ವಿಷಯ ಎಂದು ಹೇಳಿದ್ದು, ಡೆಮಾಕ್ರೆಟಿಕ್ ಪೀಪಲ್ಸ್ ರಿಪಬ್ಲಿಕ್ ಆಫ್ ಕೊರಿಯಾಗೆ ಇಂತಹ ಪರೀಕ್ಷೆಗಳಿಂದ ದೂರಉಳಿಯುವಂತೆ ಸಲಹೆ ನೀಡಿದೆ.
ಪರಮಾಣು ಶಸ್ತ್ರಾಸ್ತ್ರ ಪರೀಕ್ಷೆ ಪ್ರಾದೇಶಿಕ ಹಾಗು ಅಂತಾರಾಷ್ಟ್ರೀಯ ಮಟ್ಟದ ಶಾಂತಿಯ ಮೇಲೆ ಪ್ರತಿಕೂಲ ಪರಿಣಾಮ ಬಿರಲಿದೆ ಎಂದು ಭಾರತ ಅಭಿಪ್ರಾಯಪಟ್ಟಿದ್ದು, ಅಣ್ವಸ್ತ್ರ ಪ್ರಸರಣ ಹಾಗು ಕ್ಷಿಪಣಿ ತಂತ್ರಜ್ಞಾನ ಭಾರತದ ರಾಷ್ಟ್ರೀಯ ಭದ್ರತೆ ಮೇಲೂ ಪರಿಣಾಮ ಬೀರುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದೆ.
ಡೆಮಾಕ್ರೆಟಿಕ್ ಪೀಪಲ್ಸ್ ರಿಪಬ್ಲಿಕ್ ಆಫ್ ಕೊರಿಯಾ(ಡಿಪಿಆರ್ ಕೆ) ನಡೆಸಿರುವ ಪರಮಾಣು ಶಸ್ತ್ರಾಸ್ತ್ರ ಪರೀಕ್ಷೆಯನ್ನು ವಿರೋಧಿಸುವುದಾಗಿ ತಿಳಿಸಿರುವ ಭಾರತ, ಡಿಪಿಆರ್ ಕೆ ಅಂತಾರಾಷ್ಟ್ರೀಯ ಅಭಿಪ್ರಾಯದ ವಿರುದ್ಧವಾಗಿ ನಡೆದುಕೊಂಡಿದೆ, ಅಷ್ಟೇ ಅಲ್ಲದೆ ಉತ್ತರ ಕೊರಿಯಾ ಸ್ವತಃ ತಾನೇ ಅಂಗೀಕರಿಸಿದ್ದ ಅಣ್ವಸ್ತ್ರ ನಿಶಸ್ತ್ರೀಕರಣ ನೀತಿಯನ್ನು ಮುರಿದಿದೆ ಎಂದು ವಿದೇಶಾಂಗ ಇಲಾಖೆ ವಕ್ತಾರ ವಿಕಾಸ್ ಸ್ವರೂಪ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಅಂತಾರಾಷ್ಟ್ರೀಯ ಅಭಿಪ್ರಾಯದ ವಿರುದ್ಧವಾಗಿ ಪರಮಾಣು ಶಸ್ತ್ರಾಸ್ತ್ರ ಪರೀಕ್ಷೆಯನ್ನು ನಡೆಸುವುದರಿಂದ ಉತ್ತರ ಕೊರಿಯಾ ದೂರಉಳಿಯಬೇಕು ಎಂದು ವಿಕಾಸ್ ಸ್ವರೂಪ್ ಮನವಿ ಮಾಡಿದ್ದಾರೆ. ಸೆ.9 ರಂದು ಉತ್ತರ ಕೊರಿಯಾ ಇತ್ತೀಚೆಗಷ್ಟೇ ಐದನೇ ಪರಮಾಣು ಶಸ್ತ್ರಾಸ್ತ್ರ ಪರೀಕ್ಷೆ ನಡೆಸಿತ್ತು. ಯಾವುದೇ ಪರಮಾಣು ಅಥವಾ ಕ್ಷಿಪಣಿ ಪರೀಕ್ಷೆ ನಡೆಸದಂತೆ ಉತ್ತರ ಕೊರಿಯಾಗೆ ವಿಶ್ವಸಂಸ್ಥೆ ನಿರ್ಬಂಧ ಹೇರಿದೆ. ಹೀಗಿದ್ದರೂ ಕಳೆದ ಜನವರಿಯಲ್ಲಿ ಉತ್ತರ ಕೊರಿಯಾ ನಾಲ್ಕನೇ ಪರಮಾಣು ಪರೀಕ್ಷೆಯನ್ನು ನಡೆಸಿತ್ತು.
Advertisement