
ನವದೆಹಲಿ: ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಸೆ.18 ರಿಂದ ರಷ್ಯಾ, ಅಮೆರಿಕ ಪ್ರವಾಸ ಕೈಗೊಂಡಿದ್ದಾರೆ.
ಭಾರತದ ಮೇಲೆ ಹಾಗೂ ದಕ್ಷಿಣ ಏಷ್ಯಾದಲ್ಲಿ ನಡೆಯುತ್ತಿರುವ ಪಾಕಿಸ್ತಾನದ ಕೃಪಾಪೋಷಿತ ಭಯೋತ್ಪಾದನೆಯನ್ನು ಎತ್ತಿತೋರಿಸುವುದು ರಾಜನಾಥ್ ಸಿಂಗ್ ಅವರ ರಷ್ಯಾ, ಅಮೆರಿಕ ಭೇಟಿಯ ಮುಖ್ಯ ಉದ್ದೇಶವಾಗಿದೆ.
ಸೆ.18 ರಿಂದ 5 ದಿನಗಳು ರಷ್ಯಾದಲ್ಲಿರಲಿರುವ ರಾಜನಾಥ್ ಸಿಂಗ್, ರಷ್ಯಾದ ಆಂತರಿಕ ಭದ್ರತಾ ಸಚಿವ ವ್ಲಾಡಿಮಿರ್ ಕೊಲೊಕೊಲ್ಟ್ ಸೇವ್ ಅವರೊಂದಿಗೆ ಮಾತುಕತೆ ನಡೆಸಲಿದ್ದು, ದಕ್ಷಿಣ ಏಷ್ಯಾದ ಪ್ರದೇಶದಲ್ಲಿ ಹಾಗು ಭಾರತದ ಗಡಿ ಪ್ರದೇಶದಲ್ಲಿ ಐಎಸ್ಐಎಸ್, ಪಾಕಿಸ್ತಾನ ನಡೆಸುತ್ತಿರುವ ಭಯೋತ್ಪಾದನೆಯ ವಿಷಯಗಳನ್ನು ಚರ್ಚಿಸಲಿದ್ದು, ಭಯೋತ್ಪಾದನೆ ನಿರ್ಮೂಲನೆಗೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಮಾತನಾಡಲಿದ್ದಾರೆ.
ಪಾಕಿಸ್ತಾನ ಜಮ್ಮು-ಕಾಶ್ಮೀರದಲ್ಲಿ ನಡೆಸುತ್ತಿರುವ ಭಯೋತ್ಪಾದನೆ ವಿಷಯವನ್ನು ಅಂತಾರಾಷ್ಟ್ರೀಯ ಸಮುದಾಯಕ್ಕೆ ತಿಳಿಸುವ ಉದ್ದೇಶ ಭಾರತ ಸರ್ಕಾರದ್ದಾಗಿದ್ದು, ಜಮ್ಮು-ಕಾಶ್ಮೀರ ಭಾಗದಲ್ಲಿ ಪಾಕಿಸ್ತಾನ ನಡೆಸುತ್ತಿರುವ ಭಯೋತ್ಪಾದನೆಯನ್ನು ರಷ್ಯಾದ ಸಚಿವರಿಗೆ ರಾಜನಾಥ್ ಸಿಂಗ್ ತಿಳಿಸಲಿದ್ದಾರೆ ಎಂಬ ನಿರೀಕ್ಷೆ ಇದೆ. ರಷ್ಯಾ ಭೇಟಿಯ ನಂತರ ರಾಜನಾಥ್ ಸಿಂಗ್ ಅಮೆರಿಕಗೆ ಭೇಟಿ ನೀಡಲಿದ್ದು, ಸೆ.26 ರಿಂದ 7 ದಿನಗಳ ವರೆಗೆ ದ್ವಿಪಕ್ಷೀಯ ಮಾತುಕತೆ ಹಾಗೂ ಇತರ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ.
ಈ ವೇಳೆ ಅಮೆರಿಕದ ಗೃಹ ಸಚಿವ ಜೇಹ್ ಚಾರ್ಲ್ಸ್ ಜಾನ್ಸನ್ ರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಲಿರುವ ರಾಜನಾಥ್ ಸಿಂಗ್ ಅಲ್ಲಿಯೂ ಪಾಕಿಸ್ತಾನ ಬೆಂಬಲಿತ ಭಯೋತ್ಪಾದನೆ, ಇಸೀಸ್ ಉಗ್ರ ಸಂಘಟನೆಯ ಭಯೋತ್ಪಾದನೆ ವಿಚಾರವನ್ನು ಮುಖ್ಯವಾಗಿ ಪ್ರಸ್ತಾಪಿಸಲಿದ್ದಾರೆ ಎಂದು ಅಧಿಕಾರಿಗಳ ಮೂಲಕ ತಿಳಿದುಬಂದಿದೆ. ಎರಡು ರಾಷ್ಟ್ರಗಳ ಭೇಟಿಯಲ್ಲಿ ರಾಜನಾಥ್ ಸಿಂಗ್ ಪಾಕಿಸ್ತಾನ ಭಾರತದ ಮೇಲೆ ಭಯೋತ್ಪಾದಕ ದಾಳಿ ನಡೆಸುವುದನ್ನು ಮುಖ್ಯವಾಗಿ ಪ್ರಸ್ತಾಪಿಸಲಿದ್ದು, ಭಯೋತ್ಪಾದನೆ ನಿರ್ಮೂಲನೆ ಬಗ್ಗೆ ವಿಸ್ತೃತ ಚರ್ಚೆ ನಡೆಸಲಿದ್ದಾರೆ.
ಪಾಕಿಸ್ತಾನದ ಭಯೋತ್ಪಾದನೆ ವಿಷಯವನ್ನು ಹೊರತುಪಡಿಸಿ ಇಸೀಸ್ ಉಗ್ರ ಸಂಘಟನೆ ವಿರುದ್ಧ ಹೋರಾಡಲು ಪರಸ್ಪರ ಗುಪ್ತಚರ ಮಾಹಿತಿ ಹಂಚಿಕೆ, ಹಾಗೂ ವಾಂಟೆಡ್ ಕ್ರಿಮಿನಲ್ ಗಾಲ ಪಟ್ಟಿಯನ್ನು ಹಂಚಿಕೊಳ್ಳುವುದು, ವೀಸಾ ಉದಾರೀಕರಣ ನೀತಿಗಳ ಬಗ್ಗೆ ಚರ್ಚೆ ನಡೆಯುವ ಸಾಧ್ಯತೆ ಇದೆ. ಕಳೆದ ಕೆಲ ದಿನಗಳ ಹಿಂದೆ ಜಿ-20 ಸಭೆಯಲ್ಲಿ ಭಾಗವಹಿಸಿದ್ದ ಪ್ರಧಾನಿ ನರೇಂದ್ರ ಮೋದಿ ಸಹ ಪಾಕಿಸ್ತಾನದ ಹೆಸರನ್ನು ಪ್ರಸ್ತಾಪಿಸದೇ, ಭಯೋತ್ಪಾದನೆಯನ್ನು ಉತ್ತೇಜಿಸುತ್ತಿರುವವರನ್ನು ಪ್ರತ್ಯೇಕಿಸಿ ಎಂದು ಅಂತಾರಾಷ್ಟ್ರೀಯ ಸಮುದಾಯಕ್ಕೆ ಕರೆ ನೀಡಿದ್ದರು.
ಕಾಶ್ಮೀರದಲ್ಲಿ ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆಯ ಉಗ್ರ ಬುರ್ಹಾನ್ ವನಿ ಹತ್ಯೆಯನ್ನು ಬಹಿರಂಗವಾಗಿ ವಿರೋಧಿಸಿದ್ದ ಪಾಕಿಸ್ತಾನ, ಕಾಶ್ಮೀರದಲ್ಲಿ ಗಲಭೆಯನ್ನು ಉತ್ತೇಜಿಸಿದ್ದರ ಪರಿಣಾಮವಾಗಿ ಭಾರತ ಸರ್ಕಾರ ಈಗ ಪಾಕಿಸ್ತಾನಕ್ಕೆ ತಿರುಗೇಟು ನೀಡಲು ಸಿದ್ಧತೆ ನಡೆಸಿದೆ. ಇದರ ಭಾಗವಾಗಿ ರಾಜನಾಥ್ ಸಿಂಗ್ ರಷ್ಯಾ ಹಾಗೂ ಅಮೆರಿಕ ಭೇಟಿ ವೇಳೆ ಪಾಕಿಸ್ತಾನದ ಕೃಪಾಪೋಷಿತ ಭಯೋತ್ಪಾದನೆಯನ್ನು ಮುಖ್ಯ ವಿಷಯವನ್ನಾಗಿ ಚರ್ಚಿಸಲು ಅಣಿಯಾಗಿದ್ದಾರೆ.
Advertisement