
ನವದೆಹಲಿ: ಕಾಶ್ಮೀರದ ಉರಿ ಸೆಕ್ಟರ್ ನಲ್ಲಿ ಭಯೋತ್ಪಾದಕ ದಾಳಿ ನಡೆದಿರುವ ವೇಳೆಯಲ್ಲಿ, ಪ್ಯೂ ಸಮೀಕ್ಷಾ ವರದಿ ಹೊರಬಂದಿದ್ದು, ಭಯೋತ್ಪಾದನೆ ನಿರ್ಮೂಲನೆಗೆ ಸೇನೆಯನ್ನು ಬಳಸುವುದನ್ನು ಶೇ.62 ರಷ್ಟು ಭಾರತೀಯರು ಒಪ್ಪುತ್ತಾರೆ ಎಂಬ ಮಾಹಿತಿ ಬಹಿರಂಗವಾಗಿದೆ.
ಪಠಾಣ್ ಕೋಟ್ ದಾಳಿ ನಡೆದ ಕೆಲವೇ ತಿಂಗಳಲ್ಲಿ ( ಏ.7 ರಿಂದ ಮೇ.24 ವರೆಗೆ) ನಡೆಸಲಾದ ಸಮೀಕ್ಷೆಯಲ್ಲಿ ಭಯೋತ್ಪಾದನೆ ನಿರ್ಮೂಲನೆಗೆ ಆಯ್ದುಕೊಳ್ಳಬೇಕಿರುವ ಮಾರ್ಗ, ಪಾಕಿಸ್ತಾನದೆಡೆಗೆ ಪ್ರಧಾನಿ ನರೇಂದ್ರ ಮೋದಿ ಅವರ ನೀತಿಗಳು, ಚೀನಾ ಹಾಗೂ ಒಟ್ಟಾರೆ ಕೇಂದ್ರ ಸರ್ಕಾರದ ಕಾರ್ಯವೈಖರಿಯ ಬಗ್ಗೆ ಸಾರ್ವಜನಿಕರಿಂದ ಅಭಿಪ್ರಾಯ ಸಂಗ್ರಹಿಸಲಾಗಿದೆ.
ಸುಮಾರು 2,464 ಜನರನ್ನು ಸಮೀಕ್ಷೆಗೆ ಒಳಪಡಿಸಲಾಗಿದ್ದು, ಶೇ.62 ರಷ್ಟು ಜನರು, ಭಯೋತ್ಪಾದನೆ ನಿರ್ಮೂಲನೆಗೆ ಸೇನೆಯ ಬಳಕೆಯೇ ಉತ್ತಮ ಆಯ್ಕೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಇಸೀಸ್ ಉಗ್ರ ಸಂಘಟನೆ ಭಾರತಕ್ಕೆ ಅಪಾಯಕಾರಿ ಎಂದು ಶೇ.52 ರಷ್ಟು ಭಾರತೀಯರು ಆತಂಕ ವ್ಯಕ್ತಪಡಿಸಿದ್ದರೆ, ಸೇನೆಯನ್ನು ಬಳಕೆ ಮಾಡುವುದರಿಂದ ದ್ವೇಷವನ್ನು ಹೆಚ್ಚಿಸುವ ಮೂಲಕ ಭಯೋತ್ಪಾದನೆ ಮತ್ತಷ್ಟು ಹೆಚ್ಚುತ್ತದೆ ಎಂದು ಶೇ.21 ರಷ್ಟು ಜನರು ಹೇಳಿದ್ದಾರೆ.
ಇನ್ನು ಶೇ.54 ರಷ್ಟು ಜನರು, ಪಾಕಿಸ್ತಾನದೆಡೆಗೆ ಪ್ರಧಾನಿ ನರೇಂದ್ರ ಮೋದಿ ಅವರ ನೀತಿಗಳನ್ನು ಸಾರಾಸಗಟಾಗಿ ವಿರೋಧಿಸಿದ್ದರೆ, ಕೇವಲ ಶೇ.22 ರಷ್ಟು ಜನರು ಮಾತ್ರವೇ ಪಾಕಿಸ್ತಾನಕ್ಕೆ ಸಂಬಂಧಿಸಿದಂತೆ ನರೇಂದ್ರ ಮೋದಿ ಅವರ ನೀತಿಗಳನ್ನು ಒಪ್ಪಿದ್ದಾರೆ. ಮತ್ತೊಂದು ಗಮನಾರ್ಹ ವಿಷವೆಂದರೆ ಅದು ರಕ್ಷಣಾ ಕ್ಷೇತ್ರಕ್ಕಾಗಿ ಹೆಚ್ಚು ಖರ್ಚು ಮಾಡುವುದನ್ನು ಶೇ.63 ರಷ್ಟು ಭಾರತೀಯರು ಸ್ವಾಗತಿಸಿದ್ದಾರೆ. ಶೇ.20 ರಷ್ಟು ಈಗ ಖರ್ಚು ಮಾಡುತ್ತಿರುವುದನ್ನು ಮುಂದುವರೆಸಬೇಕೆಂದು ಅಭಿಪ್ರಾಯಪಟ್ಟಿದ್ದರೆ, ಕೇವಲ ಶೇ.6 ರಷ್ಟು ಮಂದಿ ರಕ್ಷಣಾ ವೆಚ್ಚವನ್ನು ಕಡಿಮೆ ಮಾಡಬೇಕೆಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಚೀನಾದ ರಕ್ಷಣಾ ಸಾಮರ್ಥ್ಯ ಹೆಚ್ಚುತ್ತಿರುವ ಬಗ್ಗೆ ಆತಂಕ ವ್ಯಕ್ತಪಡಿಸಿರುವ ಭಾರತೀಯರು, ಭಾರತವು ಸಹ ತನ್ನ ರಕ್ಷಣಾ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಬೇಕೆಂಬ ಅಭಿಪ್ರಾಯ ವ್ಯಕ್ತಪಡಿಸಿದ್ದು, ಇದರ ಭಾಗವಾಗಿ ರಕ್ಷಣಾ ಕ್ಷೇತ್ರಕ್ಕೆ ಹೆಚ್ಚು ಖರ್ಚು ಮಾಡುವುದರ ಪರವಾಗಿದ್ದಾರೆ ಎಂದು ಪ್ಯೂ ಸಮೀಕ್ಷಾ ವರದಿ ಹೇಳಿದೆ. ಇನ್ನು ಪ್ರಧಾನಿ ನರೇಂದ್ರ ಮೋದಿ ಈಗಲೂ ಭಾರತೀಯರ ನೆಚ್ಚಿನ ಪ್ರಧಾನಿಯಾಗಿದ್ದು, ಶೇ.81 ರಷ್ಟು ಜನರು ಮೋದಿಗೆ ಬೆಂಬಲಿಸಿರುವುದು ಸಮೀಕ್ಷೆ ಮೂಲಕ ತಿಳಿದುಬಂದಿದೆ.
Advertisement