ಜಯಲಲಿತಾ ಹೆಚ್ಚಿನ ಚಿಕಿತ್ಸೆಗೆ ಸಿಂಗಾಪುರಕ್ಕೆ ಹೋಗುವುದಿಲ್ಲ: ಎಐಎಡಿಎಂಕೆ ಸ್ಪಷ್ಟನೆ

ತಮಿಳುನಾಡು ಮುಖ್ಯಮಂತ್ರಿ ಜೆ. ಜಯಲಲಿತಾ ಅವರು ಆರೋಗ್ಯವಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಸಿಂಗಾಪುರಕ್ಕೆ ಹೋಗುತ್ತಿಲ್ಲ ಎಂದು ಅಖಿಲ ಭಾರತ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ...
ತಮಿಳುನಾಡು ಮುಖ್ಯಮಂತ್ರಿ ಜೆ.ಜಯಲಲಿತಾ
ತಮಿಳುನಾಡು ಮುಖ್ಯಮಂತ್ರಿ ಜೆ.ಜಯಲಲಿತಾ

ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ಜೆ. ಜಯಲಲಿತಾ ಅವರು ಆರೋಗ್ಯವಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಸಿಂಗಾಪುರಕ್ಕೆ ಹೋಗುತ್ತಿಲ್ಲ ಎಂದು ಅಖಿಲ ಭಾರತ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ (ಎಐಎಡಿಎಂಕೆ) ಶನಿವಾರ ಸ್ಪಷ್ಟನೆ ನೀಡಿದೆ.

ತಮಿಳುನಾಡು ಮುಖ್ಯಮಂತ್ರಿ ಜೆ.ಜಯಲಲಿತಾ ಅವರು ಅತಿಯಾದ ಸಕ್ಕರೆ ಖಾಯಿಲೆ ಹಾಗೂ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದು, ಆರೋಗ್ಯ ತೀವ್ರವಾಗಿ ಹದಗೆಟ್ಟಿದೆ. ಹೀಗಾಗಿ ಹೆಚ್ಚಿನ ಚಿಕಿತ್ಸೆಗಾಗಿ ಸಿಂಗಾಪುರಕ್ಕೆ ಹೋಗಲಿದ್ದಾರೆಂಬ ಊಹಾಪೋಹಾಗಳು ಓಡಾಡಲು ಆರಂಭಿಸಿದ್ದವು.

ಈ ಹಿನ್ನೆಲೆಯಲ್ಲಿ ಎಐಎಡಿಎಂಕೆ ವಕ್ತಾರೆ ಸಿ.ಆರ್. ಸರಸ್ವತಿ ಅವರು ಸ್ಪಷ್ಟನೆ ನೀಡಿದ್ದು, ವದಂತಿಗಳನ್ನು ತಳ್ಳಿಹಾಕಿದ್ದಾರೆ. ಜಯಲಲಿತಾ ಅವರು ಆರೋಗ್ಯವಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಸಿಂಗಾಪುರಕ್ಕೆ ಹೋಗುತ್ತಿಲ್ಲ ಎಂದು ಹೇಳಿದ್ದಾರೆ. ಆದರೆ, ಜಯಲಲಿತಾ ಅವರು ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೋ, ಇಲ್ಲವೋ ಎಂಬುದರ ಕುರಿತಂತೆ ಯಾವುದೇ ಮಾಹಿತಿಗಳನ್ನು ಅವರು ಬಹಿರಂಗಪಡಿಸಿಲ್ಲ,

ಜಯಲಲಿತಾ ಅವರು ಜ್ವರ ಹಾಗೂ ನಿರ್ಜಲೀಕರಣ (ದೇಹದಲ್ಲಿ ನೀರಿನ ಕೊರತೆ)ದಿಂದ ಬಳಲುತ್ತಿದ್ದು, ಗುರುವಾರವಷ್ಟೇ ಚೆನ್ನೈನ ಅಪೋಲೋ ಆಸ್ಪತ್ರೆಗೆ ದಾಖಲಾಗಿದ್ದರು.

ಜಯಲಲಿತಾ ಅವರು ಅನಾರೋಗ್ಯಕ್ಕೀಡಾಗಿರುವುದರ ಮಾಹಿತಿ ಪಡೆದಿದ್ದ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಹೂವಿನ ಗುಚ್ಛವೊಂದನ್ನು ಕಳುಹಿಸಿ, ಶೀಘ್ರಗತಿಯಲ್ಲಿ ಗುಣಮುಖರಾಗುವಂತೆ ಸಂದೇಶವೊಂದನ್ನು ಈ ಹಿಂದೆ ರವಾನಿಸಿದ್ದರು.

ಮೋದಿಯವರ ಈ ಪತ್ರಕ್ಕೆ ಜಯಲಲಿತಾ ಅವರು ಪ್ರತಿಕ್ರಿಯೆ ನೀಡಿದ್ದರು. ಗುಣಮುಖರಾಗಲಿ ಎಂದು ಶುಭ ಹಾರೈಸಿದ್ದಕ್ಕಾಗಿ ಧನ್ಯವಾದಗಳು ಎಂದು ಹೇಳಿದ್ದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೂ ಕೂಡ ಜಯಲಲಿತಾ ಅವರು ಶೀಘ್ರಗತಿಯಲ್ಲಿ ಗುಣಮುಖರಾಗಲಿ ಎಂದು ಟ್ವಿಟರ್ ನಲ್ಲಿ ಪ್ರತಿಕ್ರಿಯೆಯನ್ನು ನೀಡಿದ್ದರು.

ಜಯಲಲಿತಾ ಅವರು ಅನಾರೋಗ್ಯಕ್ಕೀಡಾಗಿರುವುದಕ್ಕೆ ತೀವ್ರ ಬೇಸರ ವ್ಯಕ್ತಪಡಿಸುತ್ತಿರುವ ತಮಿಳುನಾಡು ಜನತೆ ಶೀಘ್ರಗತಿಯಲ್ಲಿ ಗುಣಮುಖರಾಗಲಿ ಎಂದು ದೇವಾಲಯಗಳಲ್ಲಿ ವಿಶೇಷ ಪೂಜೆಗಳನ್ನು ಸಲ್ಲಿಸಿ ಪ್ರಾರ್ಥನೆಗಳನ್ನು ಸಲ್ಲಿಸುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com