ಸಾಮ್ನಾ ವ್ಯಂಗ್ಯಚಿತ್ರ ವಿವಾದ: ವಿಷಾದ ವ್ಯಕ್ತಪಡಿಸಿದ ವ್ಯಂಗ್ಯಚಿತ್ರಕಾರ

ಯಾವುದೇ ಉದ್ದೇಶದಿಂದ ನಾನು ಈ ರೀತಿಯ ವ್ಯಂಗ್ಯಚಿತ್ರವನ್ನು ಬರೆದಿರಲಿಲ್ಲ. ನನ್ನ ವ್ಯಂಗ್ಯಚಿತ್ರದಿಂದ ಮರಾಠಾ ಸಮುದಾಯಕ್ಕೆ ನೋವಾಗಿದೆ. ಹೀಗಾಗಿ ವಿಷಾದ ವ್ಯಕ್ತಪಡಿಸುತ್ತೇನೆಂದು ಸಾಮ್ನಾ ಪತ್ರಿಕೆಯ...
ಸಾಮ್ನಾ ವ್ಯಂಗ್ಯಚಿತ್ರ ವಿವಾದ: ವಿಷಾದ ವ್ಯಕ್ತಪಡಿಸಿದ ವ್ಯಂಗ್ಯಚಿತ್ರಕಾರ
ಸಾಮ್ನಾ ವ್ಯಂಗ್ಯಚಿತ್ರ ವಿವಾದ: ವಿಷಾದ ವ್ಯಕ್ತಪಡಿಸಿದ ವ್ಯಂಗ್ಯಚಿತ್ರಕಾರ

ಮುಂಬೈ: ಯಾವುದೇ ಉದ್ದೇಶದಿಂದ ನಾನು ಈ ರೀತಿಯ ವ್ಯಂಗ್ಯಚಿತ್ರವನ್ನು ಬರೆದಿರಲಿಲ್ಲ. ನನ್ನ ವ್ಯಂಗ್ಯಚಿತ್ರದಿಂದ ಮರಾಠಾ ಸಮುದಾಯಕ್ಕೆ ನೋವಾಗಿದೆ. ಹೀಗಾಗಿ ವಿಷಾದ ವ್ಯಕ್ತಪಡಿಸುತ್ತೇನೆಂದು ಸಾಮ್ನಾ ಪತ್ರಿಕೆಯ ವ್ಯಂಗ್ಯಚಿತ್ರಕಾರ ಶ್ರೀನಿವಾಸ್ ಪ್ರಭುದೇಸಾಯಿಯವರು ಬುಧವಾರ ಹೇಳಿದ್ದಾರೆ.

ಮೀಸಲಾತಿಗೆ ಆಗ್ರಹಿಸಿ ಮರಾಠಾ ಸಮುದಾಯ ನಡೆಸುತ್ತಿರುವ ಮೌನ ಪ್ರತಿಭಟನೆ ಸಂಬಂಧಿಸಿದಂತೆ ಸಾಮ್ನಾ ವ್ಯಂಗ್ಯಚಿತ್ರಕಾರ ಶ್ರೀನಿವಾಸ್ ಪ್ರಭುದೇಸಾಯಿಯವರು, ಮೌನ ಮೆರವಣಿಗೆಯನ್ನು ಟೀಕಿಸುವ ವ್ಯಂಗ್ಯಚಿತ್ರವೊಂದನ್ನು ರಚಿಸಿದ್ದರು. ಈ ವ್ಯಂಗ್ಯಚಿತ್ರ ಸೋಮವಾರ ಸಾಮ್ನಾ ಪತ್ರಿಕೆಯ ಮುಖಪುಟದಲ್ಲಿ ಪ್ರಕಟವಾಗಿತ್ತು.

ಶ್ರೀನಿವಾಸ್ ಪ್ರಭುದೇಸಾಯಿಯವರ ಈ ವ್ಯಂಗ್ಯಚಿತ್ರಕ್ಕೆ ಮರಾಠಾ ಸಮುದಾಯದ ಜನರು ಸಾಕಷ್ಟು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಅಲ್ಲದೆ, ಕ್ಷಮೆಯಾಚಿಸುವಂತೆ ಕೋರಿ ಸಾಕಷ್ಟು ಪ್ರತಿಭಟನೆಗಳನ್ನು ನಡೆಸುತ್ತಿದ್ದಾರೆ.

ನವೀ ಮುಂಬೈನಲ್ಲಿರುವ ಶಿವಸೇನೆಯ ಮುಖವಾಣಿ ಪತ್ರಿಕೆಯ ಸಾಮ್ನಾ ಕಚೇರಿ ಮೇಲೂ ಕಲ್ಲು ತೂರಾಟವನ್ನು ನಡೆಸಲಾಗಿದೆ.

ಈ ಹಿನ್ನೆಲೆಯಲ್ಲಿ ಹೇಳಿಕೆ ನೀಡಿರುವ ಸಾಮ್ನಾ ವ್ಯಂಗ್ಯಚಿತ್ರಕಾರ ಶ್ರೀನಿವಾಸ ಪ್ರಭುದೇಸಾಯಿ ಅವರು, ಅನಾವಶ್ಯಕವಾಗಿ ವಿವಾದವನ್ನು ಹುಟ್ಟಹಾಕಲಾಗುತ್ತಿದೆ. ನಾನು ರಾಜಕೀಯ ವ್ಯಂಗ್ಯಚಿತ್ರಕಾರನಲ್ಲ, ಕಲಾಕಾರನಷ್ಟೇ. ನನ್ನ ವ್ಯಂಗ್ಯಚಿತ್ರದಿಂದ ಜನರ ಮುಖದಲ್ಲಿ ನಗು ತರಿಸಬೇಕೆಂಬುದಷ್ಟೇ ನನ್ನ ಉದ್ದೇಶವೇ ಹೊರತು, ಸಮುದಾಯವೊಂದಕ್ಕೆ ನೋವುಂಟು ಮಾಡುವ ಉದ್ದೇಶವಲ್ಲ ಎಂದು ಹೇಳಿದ್ದಾರೆ.

ಸುಖಾಸುಮ್ಮನೆ ಇದಕ್ಕೆ ರಾಜಕೀಯ ಬಣ್ಣ ನೀಡಿ, ವಿವಾದವಾಗುವಂತೆ ಮಾಡಲಾಗುತ್ತಿದೆ. ಅಲ್ಲದೆ, ವಿವಾದದ ಮಧ್ಯೆ ಸೇನೆ ಹಾಗೂ ಸಾಮ್ನಾವನ್ನು ಎಳೆಯಲಾಗುತ್ತಿದೆ ಎಂದು ಹೇಳಿದ್ದಾರೆ.

ವಿವಾದದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್, ವ್ಯಂಗ್ಯಚಿತ್ರದ ಬಗ್ಗೆ ಕೇವಲ ವ್ಯಂಗ್ಯಚಿತ್ರಕಾರನಷ್ಟೇ ಕ್ಷಮೆ ಕೇಳಿದರೆ ಸಾಲದು. ಪತ್ರಿಕೆಯ ಸಂಪಾದಕ ಕೂಡ ಕ್ಷಮೆಯಾಚಿಸಬೇಕೆಂದು ಆಗ್ರಹಿಸಿದೆ.

ಸಾಮ್ನಾ ಪತ್ರಿಕೆಯ ಸಂಪಾದಕ ಮರಾಠ ಸಮುದಾಯದ ಜನರ ಭಾವನೆಗಳಿಗೆ ನೋವುಂಟು ಮಾಡಿದ್ದಾರೆ. ಸಂಪಾದಕರ ಅನುಮತಿಯಿಲ್ಲದೆಯೇ ಪತ್ರಿಕೆಯಲ್ಲಿ ವ್ಯಂಗ್ಯಚಿತ್ರ ಪ್ರಕಟಣೆ ಮಾಡಲು ಸಾಧ್ಯವಿಲ್ಲ. ಹೀಗಾಗಿ ಸಂಪಾದಕ ಕೂಡ ಕ್ಷಮೆಯಾಚಿಸಬೇಕೆಂದು ಕಾಂಗ್ರೆಸ್ ನಾಯಕ ನಿತೇಶ್ ರಾಣೆ ಅವರು ಹೇಳಿದ್ದಾರೆ.

ಈ ರೀತಿಯ ಪ್ರಕರಣಗಳಿಗೆ ಅದರದ್ದೇ ಆದ ಪ್ರಕರಣಗಳನ್ನು ದಾಖಲಿಸಿಕೊಳ್ಳುವ ಪ್ರಕ್ರಿಯೆಗಳಿವೆ. ಮರಾಠ ಸಮುದಾಯದ ಜನರಿಗೆ ನೋವುಂಟು ಮಾಡಿರುವ ಪತ್ರಿಕೆ ವಿರುದ್ಧ ಕ್ರಮ ಕೈಗೊಳ್ಳುವುದಕ್ಕೆ ಮುಖ್ಯಮಂತ್ರಿಗಳು ಪೊಲೀಸರಿಗೆ ಮುಕ್ತ ಕೈಗಳನ್ನು ನೀಡಬೇಕಿದೆ ಎಂದು ತಿಳಿಸಿದ್ದಾರೆ.

ಸಾಮ್ನಾ ಕಚೇರಿ ಮೇಲೆ ನಡೆದ ಕಲ್ಲು ತೂರಾಟದ ಹೊಣೆಯನ್ನು ಮರಾಠಾ ಸಾಮಾಜಿಕ ಸಂಘಟನೆ ಸಂಭಾಜಿ ಬ್ರಿಗೇಡ್ ಹೊತ್ತುಕೊಂಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com