
ನವದೆಹಲಿ: ಗಡಿಯಲ್ಲಿ ಉಗ್ರರ ವಿರುದ್ಧ ಭಾರತೀಯ ಸೇನೆ ಸಿಡಿದೆದ್ದಿರುವ ಹಿನ್ನೆಲೆಯಲ್ಲಿ ಭಾರತೀಯ ಸೇನೆ ಪರವಾಗಿ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ.
ಪಾಕಿಸ್ತಾನ ಗಡಿಯಲ್ಲಿ ಭಯೋತ್ಪಾದನಾ ಚಟುವಟಿಕೆಗಳು ನಡೆಯುತ್ತಿದ್ದರೂ ಇಷ್ಟೂ ದಿನ ಸಹಿಸಿಕೊಂಡು ಧೃತಿಗೆಡದೆ ತಾಳ್ಮೆಯಿಂದ ವರ್ತಿಸುತ್ತಿದ್ದ ಸೇನೆ ಇದೀಗ ಉಗ್ರರ ವಿರುದ್ಧ ಸಿಡಿದೆದಿದ್ದು, ಗಡಿಯಲ್ಲಿರುವ ಉಗ್ರ ಕ್ಯಾಂಪ್ ಗಳ ಮೇಲೆ ದಾಳಿ ಮಾಡಲು ಆರಂಭಿಸಿವೆ. ಪರಿಣಾಮ ಈ ವರೆಗೂ 37 ಉಗ್ರರನ್ನು ಹೊಡೆದುರುಳಿಸುವಲ್ಲಿ ಯಶಸ್ವಿಯಾಗಿದೆ ಎಂದು ವರದಿಗಳು ತಿಳಿಸಿವೆ. ಗಡಿಯಲ್ಲಿ ಈಗಲೂ ಬಿಗುವಿನ ವಾತಾವರಣ ಮುಂದುವರೆದಿದ್ದು, ಗುಂಡಿನ ಚಕಮಕಿ ಶಬ್ಧ ಕೇಳಿಬರುತ್ತಿವೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಇನ್ನು ಭಾರತೀಯ ಸೇನೆಯ ಈ ನಡೆಗೆ ಹಲವೆಡೆ ಪ್ರಶಂಸೆಗಳು ವ್ಯಕ್ತವಾಗುತ್ತಿದ್ದು, ಕಾಂಗ್ರೆಸ್, ಬಿಜೆಪಿ ಹಾಗೂ ಸಾರ್ವಜನಿಕ ವಲಯದಿಂದ ಸಾಕಷ್ಟು ಅಭಿನಂದನೆಗಳು ವ್ಯಕ್ತವಾಗುತ್ತಿವೆ.
ತಮ್ಮ ಸರ್ಕಾರದ ನಡೆ ಹಾಗೂ ಸೇನೆಯ ನಡೆಯನ್ನು ಕೊಂಡಾಡಿರುವ ಬಿಜೆಪಿ ನಾಯಕರು, ಪ್ರಧಾನಮಂತ್ರಿ ನರೇಂದ್ರಿ ಮೋದಿಯವರ ಸರ್ಕಾರ ಮಾತಿಗಿಂತಲೂ, ಕಾರ್ಯದ ಮೇಲೆ ನಂಬಿಕೆಯನ್ನು ಇಟ್ಟಿದೆ ಎಂದು ಹೇಳಿದೆ.
ಭಾರತೀಯ ಸೇನೆಯ ಸೀಮಿತ ದಾಳಿಗೆ ಕಾಂಗ್ರೆಸ್ ಕೂಡ ಪ್ರಶಂಸೆಯನ್ನು ವ್ಯಕ್ತಪಡಿಸಿದ್ದು, ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಭಾರತೀಯ ಸೇನೆ ನಡೆಸಿರುವ ಸೀಮಿತ ದಾಳಿಗೆ ಹೃದಯ ಪೂರ್ವಕವಾಗಿ ಬೆಂಬಲವನ್ನು ವ್ಯಕ್ತಪಡಿಸುತ್ತೇವೆ. ದೇಶದ ಯೋಧರಿಗೆ ಸೆಲ್ಯೂಟ್ ಹೊಡೆಯುತ್ತೇವೆಂದು ಹೇಳಿಕೊಂಡಿದೆ.
ಸೇನಾ ಕಾರ್ಯಾಚರಣೆಯ ಮಾಜಿ ಮಹಾ ನಿರ್ದೇಶಕ (ಡಿಜಿಎಂಒ) ವಿನೋದ್ ಭಾಟಿಯಾ ಅವರು ಮಾತನಾಡಿ, ಭಯೋತ್ಪಾದನೆಗೆ ಪ್ರಚೋದನೆ ನೀಡುತ್ತಿರುವ ಪಾಕಿಸ್ತಾನಕ್ಕೆ ದಿಟ್ಟ ಉತ್ತರ ನೀಡುತ್ತೇವೆಂದು ಭಾರತ ಈ ಮೂಲಕ ಸ್ಪಷ್ಟ ಸಂದೇಶವನ್ನು ರವಾನಿಸಿದೆ ಎಂದು ಹೇಳಿದ್ದಾರೆ.
ಗಡಿಯಲ್ಲಿ ಸೀಮಿತ ದಾಳಿ ಮಾಡುತ್ತಿರುವ ಭಾರತೀಯ ಸೇನೆಗೆ ಶುಭಾಷಯಗಳು. ಭಯೋತ್ಪಾದನೆಯನ್ನು ತೊಡೆದು ಹಾಕುವುದಕ್ಕೆ ನಮ್ಮ ಸರ್ಕಾರ ಬದ್ಧವಾಗಿದೆ ಎಂದು ರೈಲ್ವೆ ಸಚಿವ ಸುರೇಶ್ ಪ್ರಭು ಅವರು ಹೇಳಿದ್ದಾರೆ.
ಕಾರ್ಯಾಚರಣೆಯಲ್ಲಿ ಭಾರತೀಯ ಸೇನೆ ಯಶಸ್ವಿ ಕಾಣುತ್ತಿದ್ದು, ಸೇನೆಗೆ ಶುಭಾಷಯ ಕೋರುತ್ತೇನೆಂದು ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಅವರು ಹೇಳಿದ್ದಾರೆ.
ಗಡಿ ನುಸುಳುವಿಕೆ ಮಾಡಿದರೆ ಅದಕ್ಕೆ ನೀಡುವ ಪ್ರತಿಕ್ರಿಯೆ ಹೇಗಿರುತ್ತದೆ ಎಂಬುದಕ್ಕೆ ಭಾರತ ಪಾಕಿಸ್ತಾನಕ್ಕೆ ಉತ್ತಮ ಸಂದೇಶವನ್ನು ರವಾನಿಸಿದೆ ಎಂದು ಭಾರತದ ಮಾಜಿ ಏರ್ ವೈಸ್ ಮಾರ್ಷಲ್ ಮನಮೋಹನ್ ಬಹದ್ದೂರ್ ಅವರು ಹೇಳಿದ್ದಾರೆ.
ಉರಿ ಉಗ್ರ ದಾಳಿ ಬಳಿಕ ಪಾಕಿಸ್ತಾನ ವಿರುದ್ಧ ದೇಶ ಸಾಕಷ್ಟು ಕೆಂಡಾಮಂಡಲವಾಗಿದೆ. ನರೇಂದ್ರ ಮೋದಿಯವರ ಕೈಯಲ್ಲಿ ದೇಶ ಹಾಗೂ ಭಾರತೀಯ ಸೇನೆಯಿದ್ದು ಸುರಕ್ಷಿತವಾಗಿದೆ. ಹೀಗಾಗಿಯೇ ಭಯೋತ್ಪಾದನೆ ವಿರುದ್ಧದ ಭಾರತದ ನಡೆಯನ್ನು ವಿಶ್ವ ಬೆಂಬಲಿಸುತ್ತಿದೆ ಎಂದು ಕೇಂದ್ರ ಸಚಿವ ವೆಂಕಯ್ಯ ನಾಯ್ಡು ಅವರು ಹೇಳಿದ್ದಾರೆ.
ಗಡಿಯಲ್ಲಿ ಪಾಕಿಸ್ತಾನಕ್ಕೆ ದಿಟ್ಟ ಉತ್ತರ ನೀಡುತ್ತಿರುವ ಭಾರತೀಯ ಸೇನೆಗೆ ಶುಭಾಷಯಗಳು ಎಂದು ಛತ್ತೀಸ್ಗಡ ಮುಖ್ಯಮಂತ್ರಿ ಡಾ.ರಮಣ್ ಸಿಂಗ್ ಅವರು ಹೇಳಿದ್ದಾರೆ.
ದೇಶದ ಭದ್ರತೆಗೆ ಬದ್ಧವಾಗಿರುವ ಭಾರತೀಯ ಸೇನೆಯು ಭಯೋತ್ಪಾದಕರಿಗೆ ಸಾಕಷ್ಟು ಹಾನಿಯನ್ನು ಮಾಡಿದ್ದಾರೆಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು ಹೇಳಿದ್ದಾರೆ.
Advertisement