ಮೊಸಳೆಯೊಂದಿಗೆ ಹೋರಾಡಿ ತನ್ನ ಸ್ನೇಹಿತೆ ರಕ್ಷಿಸಿದ 6 ವರ್ಷದ ದಿಟ್ಟ ಬಾಲಕಿ!

ಸ್ನಾನ ಮಾಡಲು ನೀರಿಗಳಿದಾಗ ದಾಳಿ ಮಾಡಿ ಸ್ನೇಹಿತೆಯ ಹೊತ್ತೊಯ್ಯುತ್ತಿದ್ದ ಅಪಾಯಕಾರಿ ಮೊಸಳೆಯೊಂದಿಗೆ ಸೆಣಸಿದ ಆರು ವರ್ಷದ ಬಾಲಕಿಯೊಬ್ಬಳು ತನ್ನ ಸಾಹಸದಿಂದ ಸ್ನೇಹಿತೆಯ ಪ್ರಾಣ ಉಳಿಸಿಕೊಂಡಿದ್ದಾಳೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಭುವನೇಶ್ವರ: ಸ್ನಾನ ಮಾಡಲು ನೀರಿಗಳಿದಾಗ ದಾಳಿ ಮಾಡಿ ಸ್ನೇಹಿತೆಯ ಹೊತ್ತೊಯ್ಯುತ್ತಿದ್ದ ಅಪಾಯಕಾರಿ ಮೊಸಳೆಯೊಂದಿಗೆ ಸೆಣಸಿದ ಆರು ವರ್ಷದ ಬಾಲಕಿಯೊಬ್ಬಳು ತನ್ನ ಸಾಹಸದಿಂದ ಸ್ನೇಹಿತೆಯ ಪ್ರಾಣ ಉಳಿಸಿಕೊಂಡಿದ್ದಾಳೆ.

ಒಡಿಶಾದ ಕೇಂದ್ರ ಪಾರಾ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, 6 ವರ್ಷದ ಪುಟ್ಟ ಬಾಲಕಿ ಟಿಕಿ ದಲೈ ತನ್ನ ಸಾಹಸ ಮೂಲಕ ಸ್ನೇಹಿತೆ ಬಸಂತಿ ದಲೈಳನ್ನು ರಕ್ಷಿಸಿದ್ದಾಳೆ. ಇಬ್ಬರೂ 1ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದು, ಬಂಕ್ವಲಾ  ಗ್ರಾಮದ ಸರ್ಕಾರಿ ಶಾಲೆಯಲ್ಲಿ ಸಹಪಾಠಿಗಳಾಗಿದ್ದಾರೆ. ಇತ್ತೀಚೆಗೆ ಇಬ್ಬರೂ ಬಾಲಕಿಯರೂ ಗ್ರಾಮದ ಸಮೀಪ ವಿರುವ ಕೆರೆಯಲ್ಲಿ ಸ್ನಾನ ಮಾಡಲು ತೆರಳಿದ್ದು, ಇಬ್ಬರೂ ನೀರಿನಲ್ಲಿ ಸ್ನಾನ ಮಾಡುತ್ತಿದ್ದ ವೇಳೆ ಅಲ್ಲಿಗೆ ಬಂದ ರಾಕ್ಷಸೀ  ಮೊಸಳೆಯೊಂದು ನೋಡ ನೋಡುತ್ತಿದ್ದಂತೆಯೇ ಬಸಂತಿ ದಲೈ ಮೇಲೆ ದಾಳಿ ಮಾಡಿದೆ.

ಆಕೆಯ ಕೈ ಮತ್ತು ಕಾಲುಗಳನ್ನು ಕಚ್ಚಿದ ಮೊಸಳೆ ಆಕೆಯನ್ನು ನೀರಿನೊಳಗೆ ಎಳೆದೊಯ್ಯಲು ಪ್ರಯತ್ನಿಸಿದೆ. ಈ ಘಟನೆಯನ್ನು ಕಂಡ ಟಿಕಿ ದಲೈ ಎದೆಗುಂದದೇ ಪಕ್ಕದಲ್ಲಿದ್ದ ಬಿದಿರಿ ಮರದ ಕೊಂಬನ್ನು ಮುರಿದು ತಂದು ಮೊಸಳೆಯ  ತಲೆ ಮೇಲೆ ಬಲವಾಗಿ ಬಾರಿಸಿದ್ದಾಳೆ. ಮೊದಲ ಏಟಿಗೆ ಮೊಸಳೆಯ ತಲೆ ತಿರುಗಿದ್ದು, ಏಟು ಬೀಳುತ್ತಿದ್ದಂತೆಯೇ ಬಸಂತಿಯನ್ನು ಅಲ್ಲಿಯೇ ಬಿಟ್ಟು ನೀರಿನೊಳಗೆ ಮರೆಯಾಗಿದೆ. ಬಳಿಕ ಗಾಯಗೊಂಡಿದ್ದ ಬಸಂತಿಯನ್ನು ಸ್ಥಳೀಯರ  ನೆರವಿನೊಂದಿಗೆ ಟಿಕಿ ದಲೈ ಗ್ರಾಮದ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿದ್ದಾಳೆ.

ಬಾಲಕಿಯ ಕೈ ಮತ್ತು ತೊಡೆ ಭಾಗದಲ್ಲಿ ಮೊಸಳೆ ಕಚ್ಚಿದ ಗಾಯಗಳಾಗಿದ್ದು, ಬಸಂತಿ ಪ್ರಾಣಾಪಾಯದಿಂದ ಪಾರಾಗಿದ್ದಾಳೆ. ಇನ್ನು ಪುಟ್ಟ  ಬಾಲಕಿಯ ಸಾಹಸಗಥೆ ಕೇಳಿ ಸ್ವತಃ ವೈದ್ಯರೇ ಅಚ್ಚರಿಗೊಂಡಿದ್ದು, ಬಾಲಕಿಯ ಶೌರ್ಯಕ್ಕೆ  ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇನ್ನು ಈ ಬಗ್ಗೆ ಮುಗ್ದತೆಯಿಂದಲೇ ಮಾತನಾಡಿರುವ ಸಾಹಸ ಬಾಲಕಿ ಟಿಕ್ಕಿ ದಲೈ, ಸ್ನಾನ ಮಾಡುತ್ತಿದ್ದಾಗ ಮೊಸಳೆ ದಿಢೀರ್ ದಾಳಿ ಮಾಡಿತು. ಆಗ ನಾನು ಪಕ್ಕದಲ್ಲಿದ್ದ ಬಿದಿರಿನ ಬೊಂಬನ್ನು ತೆಗೆದುಕೊಂಡು ಬಾರಿಸಿದೆ. ಆಗ  ಮೊಸಳೆ ಹೊರಟು ಹೋಯಿತು. ಬಿದಿರಿನ ಬೊಂಬು ಇಲ್ಲದೇ ಇದ್ದಿದ್ದರೆ ಆಕೆಯನ್ನು ರಕ್ಷಿಸಲಾಗುತ್ತಿರಲಿಲ್ಲ ಎಂದು ಹೇಳಿದ್ದಾಳೆ. ಬಾಲಕಿ ಟಿಕ್ಕಿ ದಲೈಳ ಈ ಸಾಹಸ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com