ಮುಂಬೈ: ಸಮುದ್ರ ಮಾರ್ಗವಾಗಿ ಇಸಿಸ್ ಉಗ್ರ ಸಂಘಟನೆಯ ಭಯೋತ್ಪಾದಕರು ಭಾರತದ ಒಳಗೆ ಪ್ರವೇಶ ಮಾಡಿದ್ದು, ಈ ಹಿನ್ನಲೆಯಲ್ಲಿ ಮುಂಬೈನಲ್ಲಿ ಹೈಅಲರ್ಟ್ ಘೋಷಿಸಲಾಗಿದೆ ಎಂದು ಬುಧವಾರ ತಿಳಿದುಬಂದಿದೆ.
ಸಮುದ್ರ ಮಾರ್ಗವನ್ನು ಬಳಸಿಕೊಂಡಿರುವ ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಅ್ಯಂಡ್ ಇರಾನ್ ಉಗ್ರರು, ಭಾರತವನ್ನು ಪ್ರವೇಶ ಮಾಡಿರುವ ಶಂಕೆಗಳು ಮೂಡತೊಡಗಿದ್ದು, ದಾಳಿ ನಡೆಯುವ ಸಾಧ್ಯತೆಗಳಿವೆ ಹೀಗಾಗಿ ಕಟ್ಟೆಚ್ಚರ ವಹಿಸುವಂತೆ ಕರಾವಳಿ ಕಾವಲು ಪಡೆ ಮುಂಬೈ ಪೊಲೀಸರಿಗೆ ಮಾಹಿತಿ ನೀಡಿದ್ದಾರೆಂದು ವರದಿಗಳು ತಿಳಿಸಿವೆ.
ಕರಾವಳಿ ಕಾವಲು ಪಡೆ ಮಾಹಿತಿ ನೀಡಿರುವ ಹಿನ್ನಲೆಯಲ್ಲಿ ಮುಂಬೈನಾದ್ಯಂತ ಕಟ್ಟೆಚ್ಚರ ವಹಿಸಲಾಗಿದ್ದು, ಸೂಕ್ಷ್ಮ ಪ್ರದೇಶಗಳಲ್ಲಿ ಅಧಿಕಾರಿಗಳು ತಪಾಸಣೆ ನಡೆಸುತ್ತಿದ್ದಾರೆ. ಲಾಡ್ಜ್ ಗಳು ಹಾಗೂ ಹೋಟೆಲ್ ಗಳಲ್ಲಿ ಮಾಲೀಕರು ಗುರಿತಿನ ಚೀಟಿಗಳನ್ನು ಕೇಳದ ಕಾರಣ ಉಗ್ರರು ಹೋಟೆಲ್ ಗಳಲ್ಲಿ ತಂಗಿರುವ ಶಂಕೆಗಳು ವ್ಯಕ್ತವಾದ ಹಿನ್ನಲೆಯಲ್ಲಿ ಮುಂಬೈನಲ್ಲಿರುವ ಹೋಟೆಲ್ ಗಳು ಹಾಗೂ ಲಾಡ್ಜ್ ಗಳಲ್ಲಿ ಅಧಿಕಾರಿಗಳು ತಪಾಸಣೆ ನಡೆಸುತ್ತಿದ್ದಾರೆ.
ಆರ್ಥಿಕ ನಗರಿ ಮುಂಬೈ ಮೇಲೆ ಈ ಹಿಂದೆ ಸಾಕಷ್ಟು ಬಾರಿ ಉಗ್ರರು ದಾಳಿ ನಡೆಸಿದ್ದಾರೆ. ಪ್ರಮುಖವಾಗಿ 26/11ರಲ್ಲಿ ಉಗ್ರರು ನಡೆಸಿದ್ದ ದಾಳಿ ಮರೆಯಲಾದ ಕರಾಳ ದಿನವೆಂದೇ ಇಂದಿಗೂ ನೆನೆಯಲಾಗುತ್ತದೆ.