
ನವದೆಹಲಿ: ಗೋ ರಕ್ಷಕರ ಹೆಸರಿನಲ್ಲಿ ಹಿಂಸಾಚಾರದಲ್ಲಿ ತೊಡಗಿರುವವರನ್ನುನಿಷೇಧಿಸಬೇಕು ಎಂದು ಕೋರಿ ದಾಖಲಾಗಿರುವ ಅರ್ಜಿ ಸಂಬಂದ ಸುಪ್ರೀಂ ಕೋರ್ಟ್ ಶುಕ್ರವಾರ ಕರ್ನಾಟಕ ಸೇರಿದಂತೆ ಒಟ್ಟು ಆರು ರಾಜ್ಯ ಸರ್ಕಾರಗಳಿಗೆ ಪ್ರತಿಕ್ರಿಯೆ ನೀಡುವಂತೆ ಸೂಚನೆ ನೀಡಿದೆ.
ಗೋರಕ್ಷಣೆ ಹೆಸರಿನಲ್ಲಿ ಕೆಲ ಸಂಘಟನೆಗಳು ದೇಶದಲ್ಲಿ ಅಶಾಂತಿ ವಾತಾವರಣ ಸೃಷ್ಟಿ ಮಾಡುತ್ತಿವೆ. ಹೀಗಾಗಿ ಇಂತಹ ಗೋರಕ್ಷಕರನ್ನು ನಿಷೇಧಿಸುವಂತೆ ಕಾಂಗ್ರೆಸ್ ಮುಖಂಡ ತೆಹ್ಸೀನ್ ಪೂನಾವಾಲಾ ಎಂಬುವವರು ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದರು. ಗೋರಕ್ಷಕರು ಅಲ್ಪ ಸಂಖ್ಯಾತರು ಹಾಗೂ ದಲಿತರಿಗೆ ಭಯೋತ್ಪಾದಕರಂತೆ ಕಾಡುತ್ತಿದ್ದಾರೆ. ಸಿಮಿ ಸಂಘಟನೆಯನ್ನು ನಿಷೇಧಿಸಿದ ರೀತಿಯೇ ಗೋರಕ್ಷಕ ಸಂಘಟನೆಗಳನ್ನು ನಿಷೇಧಿಸಬೇಕೆಂದು ಅರ್ಜಿದಾರ ಪೂನಾವಾಲಾ ಆಗ್ರಹಿಸಿದ್ದರು. ಗುಜರಾತ್, ಮಹಾರಾಷ್ಟ್ರ ಹಾಗೂ ಹರ್ಯಾಣ ರಾಜ್ಯಗಳಲ್ಲಿ ಗೋರಕ್ಷಕರಿಗೆ ರಕ್ಷಣೆಯ ಜೊತೆಗೆ ಬಹುಮಾನವನ್ನು ನೀಡಲಾಗುತ್ತದೆ. ಇಂತಹ ಸಂಘಟನೆಗಳು ಗೋರಕ್ಷಣೆಯ ಹೆಸರಲ್ಲಿ ಹಿಂಸಾಚಾರಕ್ಕೆ ಪ್ರಚೋದನೆ ನೀಡುತ್ತಿವೆ ಎಂದು ಅರ್ಜಿದಾರರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
ಪೂನಾವಾಲಾ ತಮ್ಮ ಅರ್ಜಿಯಲ್ಲಿ ಆರು ರಾಜ್ಯ ಸರಕಾರಗಳು ಇಂತಹ ಘಟನೆಗಳಿಗೆ ಹೊಣೆ ಎಂದು ಪಟ್ಟಿ ಮಾಡಿದ್ದರು. ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ "ಗೋರಕ್ಷಣೆ ಹೆಸರಿನಲ್ಲಿ ಗೂಂಡಾಗಿರಿ ನಡೆಸುತ್ತಿರುವ ಗೋರಕ್ಷಕ ಸಂಘಟನೆಗಳನ್ನು ಏಕೆ ನಿಷೇಧಿಸಬಾರದು ಎಂದು ಕೇಳಿದೆ. ಅಂತೆಯೇ ಈ ಬಗ್ಗೆ ಪ್ರತಿಕ್ರಿಯೆ ನೀಡುವಂತೆ ಕೇಂದ್ರ ಸರಕಾರ ಹಾಗೂ ಕರ್ನಾಟಕ, ಉತ್ತರ ಪ್ರದೇಶ, ರಾಜಸ್ತಾನ, ಗುಜರಾತ್, ಜಾರ್ಖಂಡ್ ಮತ್ತು ಮಹಾರಾಷ್ಟ್ರ ಸರ್ಕಾರಗಳಿಗೆ ಪ್ರತಿಕ್ರಿಯೆ ನೀಡುವಂತೆ ಸೂಚಿಸಿದ್ದು, ಮುಂದಿನ ವಿಚಾರಣೆಯನ್ನು ಮೇ 3ಕ್ಕೆ ಮುಂದೂಡಿದೆ.
ಕಳೆದ ಮಾರ್ಚ್ 23ರಂದು ರಾಜಸ್ತಾನದ ಆಳ್ವಾರ್ ನಲ್ಲಿ ನಡೆದ ಹಿಂಸಾಚಾರ ಪ್ರಕರಣ ದೇಶಾದ್ಯಂತ ವ್ಯಾಪಕ ಚರ್ಚೆಗೆ ಕಾರಣವಾಗಿತ್ತು. ಹೆದ್ದಾರಿಯಲ್ಲಿ ಗೋವುಗಳನ್ನು ಸಾಗಿಸುತ್ತಿದ್ದ ತಂಡದ ಮೇಲೆ ಗೋರಕ್ಷಕರು ಎಂದು ಹೇಳಿಕೊಂಡ ಕೆಲ ವ್ಯಕ್ತಿಗಳು ದಾಳಿ ಮಾಡಿದ್ದರು. ಘಟನೆಯಲ್ಲಿ ಪೆಹ್ಲುಖಾನ್ ಎಂಬ 50 ವರ್ಷದ ವ್ಯಕ್ತಿ ಸಾವನ್ನಪ್ಪಿದ್ದರು. ಈ ಪ್ರಕರಣ ಸಂಬಂಧ ಸ್ವತಃ ಗೃಹ ಸಚಿವ ರಾಜ್ ನಾಥ್ ಸಿಂಗ್ ಅವರು ಸಂಸತ್ ನಲ್ಲಿ ಹೇಳಿಕೆ ನೀಡಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದರು.
ಕೇವಲ ಈ ಪ್ರಕರಣ ಮಾತ್ರವಲ್ಲದೇ ದಾದ್ರಿ ಪ್ರಕರಣವನ್ನು ಕೂಡ ಇದೀಗ ಸುಪ್ರೀಂಕೋರ್ಟ್ ಗಮನಕ್ಕೆ ತರಲಾಗಿದ್ದು, ಎರಡೂ ಪ್ರಕರಣಗಳ ವಿಚಾರಣೆ ನಡೆಸುವ ಸಂಬಂಧ ತೀರ್ಮಾನ ಕೈಗೊಳ್ಳಲಿದೆ. ಇನ್ನು ಕಾಂಗ್ರೆಸ್ ಮುಖಂಡ ಸಲ್ಲಿಸಿರುವ ಅರ್ಜಿಯಲ್ಲಿ ಗೋರಕ್ಷಕ ಸಮೂಹಗಳು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಲಾಗಿರುವ ಪ್ರಚೋದನಕಾರಿ ವಿಡಿಯೋಗಳನ್ನೂ ಕೂಡ ತೆಗೆದುಹಾಕುವಂತೆ ಸೂಚನೆ ನೀಡಬೇಕು ಎಂದು ಸುಪ್ರೀಂ ಕೋರ್ಟ್ ಗೆ ಸಲ್ಲಿಸಿರುವ ಅರ್ಜಿಯಲ್ಲಿ ಮನವಿ ಮಾಡಲಾಗಿದೆ.
Advertisement