ದೆಹಲಿ ಪಾಲಿಕೆಗೆ ಮತದಾನ ಆರಂಭ: ತೀವ್ರಗೊಂಡ ಪೈಪೋಟಿ, ಜಯದ ನಿರೀಕ್ಷೆಯಲ್ಲಿ ಬಿಜೆಪಿ

ರಾಜಧಾನಿ ದೆಹಲಿಯ 3 ಮಹಾನಗರ ಪಾಲಿಕೆ ಚುನಾವಣೆಗೆ ಭಾನುವಾರ ಮತದಾನ ಆರಂಭವಾಗಿದ್ದು, 1 ಕೋಟಿಗೂ ಅಧಿಕ ಮತದಾರರು ಇಂದು ಅಭ್ಯರ್ಥಿಗಳ ಭವಿಷ್ಯ ಬರೆಯಲಿದ್ದಾರೆ...
ದೆಹಲಿ ಪಾಲಿಕೆಗೆ ಮತದಾನ ಆರಂಭ
ದೆಹಲಿ ಪಾಲಿಕೆಗೆ ಮತದಾನ ಆರಂಭ
ನವದೆಹಲಿ: ರಾಜಧಾನಿ ದೆಹಲಿಯ 3 ಮಹಾನಗರ ಪಾಲಿಕೆ ಚುನಾವಣೆಗೆ ಭಾನುವಾರ ಮತದಾನ ಆರಂಭವಾಗಿದ್ದು, 1 ಕೋಟಿಗೂ ಅಧಿಕ ಮತದಾರರು ಇಂದು ಅಭ್ಯರ್ಥಿಗಳ ಭವಿಷ್ಯ ಬರೆಯಲಿದ್ದಾರೆ. 
ಚುನಾವಣೆ ಹಿನ್ನಲೆಯಲ್ಲಿ ಎಲ್ಲಾ ಮತಗಟ್ಟೆಗಳಲ್ಲೂ ಬಿಗಿ ಭದ್ರತೆಯನ್ನು ಒದಗಿಸಲಾಗಿದೆ. ದೆಹಲಿ ಪಾಲಿಕೆಯು ಒಟ್ಟು 272 ವಾರ್ಡ್ ಗಳನ್ನು ಹೊಂದಿದ್ದು, 1,32,10,206 ಮತದಾರರಿದ್ದಾರೆ. ಇದರಲ್ಲಿ 73,15,915 ಪುರುಷರು, 58,93,418 ಮಹಿಳೆಯರೂ ಹಾಗೂ 739 ತೃತೀಯ ಲಿಂಗಿಗಳು ಮತ ಹಕ್ಕು ಹೊಂದಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿ 1.1 ಲಕ್ಷ ಹೊಸ ಮತದಾರರು ಸೇರ್ಪಡೆಗೊಂಡಿದ್ದಾರೆ. 
ಮತದಾನಕ್ಕಾಗಿ 13,022 ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು, ಇದರಲ್ಲಿ 3,284 ಮತಗಟ್ಟೆಗಳನ್ನು ಸೂಕ್ಷ್ಮ, 1,464 ಮತಗಟ್ಟೆಗಳನ್ನು ಅತಿ ಸೂಕ್ಷ್ಮ ಮತಗಟ್ಟೆಗಳೆಂದು ಗುರ್ತಿಸಲಾಗಿದೆ. 
ಮತದಾನಕ್ಕೂ 2 ದಿನಕ್ಕೂ ಮುನ್ನ ಎಬಿಪಿ ನ್ಯೂಸ್ ಹಾಗೂ ಟೈಮ್ಸ್ ನೌ ಸಮೀಕ್ಷೆಗಳನ್ನು ನಡೆಸಿದ್ದು, ಎರಡೂ ಸಮೀಕ್ಷೆಗಳಲ್ಲೂ ಬಿಜೆಪಿಗೆ ಭಾರಿ ಜಯ. ಕೇಜ್ರಿವಾಲ್ ಪಕ್ಷಕ್ಕೆ ಹಾಗೂ ಕಾಂಗ್ರೆಸ್'ಗೆ ಹೀನಾಯ ಸೋಲು ಎಂಬ ಭವಿಷ್ಯವನ್ನು ನುಡಿದಿತ್ತು. 
3 ಪಾಲಿಕೆಗಳ ಒಟ್ಟು 272 ಕ್ಷೇತ್ರಗಳಲ್ಲಿ ಬಿಜೆಪಿಗೆ 185, ಆಪ್'ಗೆ 55 ಹಾಗೂ ಕಾಂಗ್ರೆಸ್ ಗೆ 15 ಸ್ಥಾನ ಬರಬಹುದು ಎಂದು ಟೈಮ್ಸ್ ನೌ ಸಮೀಕ್ಷೆ ಹೇಳಿದೆ. ಇನ್ನು ಎಬಿಪಿ ನ್ಯೂಸ್ ನಡೆಸಿದ್ದ ಸಮೀಕ್ಷೆಯಲ್ಲಿ ಬಿಜೆಪಿಗೆ 179, ಆಪ್ ಗೆ 45 ಹಾಗೂ ಕಾಂಗ್ರೆಸ್ ಗೆ 26 ಸ್ಥಾನ ಬರಬಹುದು ಎಂದು ವ್ಯಕ್ತವಾಗಿದೆ. 
ದೆಹಲಿಯ ಆಡಳಿತಾರೂಢ ಆಮ್ಮ ಅದ್ಮಿ ಪಕ್ಷ, ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಗೆಲುವಿಗಾಗಿ ತೀವ್ರ ಪೈಪೋಟಿ ಏರ್ಪಟ್ಟಿದೆ. ಇತ್ತೀಚೆಗೆ ನಡೆದ ಪಂಚರಾಜ್ಯಗಳ ಚುನಾವಣೆಯಲ್ಲಿ ಪ್ರಾಬಲ್ಯ ಮರೆದಿರುವ ಬಿಜೆಪಿಗೆ ಸೆಡ್ಡು ಹೊಡೆಯಲು ಆಮ್ ಆದ್ಮಿ ಪಕ್ಷ ಮತ್ತು ಕಾಂಗ್ರೆಸ್ ನಡುವೆಯೇ ಪೈಪೋಟಿ ಜೋರಾಗಿದೆ. ಏಪ್ರಿಲ್ 26 ರಂದು ಮತ ಎಣಿಕೆ ಪ್ರಕ್ರಿಯೆ ನಡೆಸಲಿದ್ದು, ಅಂದು ದೆಹಲಿ ಪಾಲಿಕೆಯಲ್ಲಿ ಯಾರು ಅಧಿಕಾರ ನಡೆಸುತ್ತಾರೆಂಬುದು ಬಹಿರಂಗಗೊಳ್ಳಲಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com