ಜಾರ್ಖಂಡ್ ಸರ್ಕಾರದಿಂದ ಸಾವಿರಾರು ಸಾರ್ವಜನಿಕರ ಆಧಾರ್ ಮಾಹಿತಿ ಲೀಕ್?

ಆಧಾರ್ ಕಾರ್ಡ್ ಜಾಗೃತಿಗಾಗಿ ಕ್ರಿಕೆಟಿಗ ಧೋನಿ ಅವರ ಆಧಾರ್ ಕಾರ್ಡ್ ಅನ್ನು ಜಾಹಿರಾತಿಗಾಗಿ ಬಳಸಿಕೊಂಡು ವಿವಾದಕ್ಕೀಡಾಗಿದ್ದ ಜಾರ್ಖಂಡ್ ಸರ್ಕಾರ ಇದೀಗ ಮತ್ತೊಂದು ಯಡವಟ್ಟು ಮಾಡಿಕೊಂಡಿದ್ದು, ಸರ್ಕಾರದಿಂದ ಸಾವಿರಾರು ಮಂದಿಯ ಆಧಾರ್ ಮಾಹಿತಿಯನ್ನು ಸೋರಿಕೆಯಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.
ಜಾರ್ಖಂಡ್ ಸರ್ಕಾರದ ವೆಬ್ ಸೈಟ್ ಚಿತ್ರ
ಜಾರ್ಖಂಡ್ ಸರ್ಕಾರದ ವೆಬ್ ಸೈಟ್ ಚಿತ್ರ

ರಾಂಚಿ: ಆಧಾರ್ ಕಾರ್ಡ್ ಜಾಗೃತಿಗಾಗಿ ಕ್ರಿಕೆಟಿಗ ಧೋನಿ ಅವರ ಆಧಾರ್ ಕಾರ್ಡ್ ಅನ್ನು ಜಾಹಿರಾತಿಗಾಗಿ ಬಳಸಿಕೊಂಡ ವಿವಾದ ಹಸಿರಾಗಿರುವ ಬೆನ್ನಲ್ಲೇ ಸರ್ಕಾರದಿಂದ ಮತ್ತೊಂದು ಯಡವಟ್ಟಾಗಿದ್ದು, ಜಾರ್ಖಂಜ್ ಸರ್ಕಾರದಿಂದ ಸಾವಿರಾರು ಮಂದಿಯ ಆಧಾರ್ ಮಾಹಿತಿಯನ್ನು ಸೋರಿಕೆಯಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.

ಮೂಲಗಳ ಪ್ರಕಾರ ಜಾರ್ಖಂಡ್ ಸರ್ಕಾರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ವೆಬ್ ಸೈಟಿನಲ್ಲಿ ಸಾವಿರಾರು ಮಂದಿ ಆಧಾರ್ ಸಂಖ್ಯೆ, ಬ್ಯಾಂಕ್ ಖಾತೆಗಳ ಸಂಖ್ಯೆ ಇತರೆ ಮಾಹಿತಿಗಳನ್ನು ಹಂಚಿಕೊಳ್ಳಲಾಗಿದೆಯಂತೆ.  ಇಲಾಖೆಯ ವತಿಯಿಂದ ನೀಡಲಾದ ಮತ್ತು ವಿವಿಧ ಯೋಜನೆಗಳ ಅಡಿಯಲ್ಲಿ ಫಲಾನುಭವಿಗಳ ಪಟ್ಟಿಯನ್ನು ಸಾರ್ವಜನಿಕ ಪ್ರದರ್ಶನ ಮಾಡುವ ಸಂದರ್ಭದಲ್ಲಿ ಜಾರ್ಖಂಡ್ ಸರ್ಕಾರ ಅವರ ರಹಸ್ಯ ಮಾಹಿತಿಗಳನ್ನೇ ಸರ್ಕಾರದ  ವೆಬ್ ಸೈಟಿಗೆ ಅಪ್ ಲೋಡ್ ಮಾಡಿದೆ ಎಂದು ಆರ್ ಟಿಐ ಕಾರ್ಯಕರ್ತರೊಬ್ಬರು ಆರೋಪಿಸಿದ್ದಾರೆ.

ಸರ್ಕಾರದ ಯೋಜನೆಗಳಿಂದ ಅನುಕೂಲ ಪಡೆದ ಫಲಾನುಭವಿಗಳ ಪಟ್ಟಿಯನ್ನು ಪ್ರಕಟಿಸುವ ಭರದಲ್ಲಿ ಸರ್ಕಾರ ಈ ಯಡವಟ್ಟು ಮಾಡಿಕೊಂಡಿದ್ದು, ಸಾರ್ವಜನಿಕರ ರಹಸ್ಯ ಮಾಹಿತಿಗಳನ್ನು ವೆಬ್ ಸೈಟ್ ಗೆ ಅಪ್ಲೋಡ್ ಮಾಡಿದೆ.  ಕೇವಲ ಆಧಾರ್ ಸಂಖ್ಯೆ, ಬ್ಯಾಂಕ್ ಮಾಹಿತಿಯಷ್ಟೇ ಅಲ್ಲದೇ ಬ್ಯಾಂಕ್ ಖಾತೆಯ ಮಾದರಿ ಮತ್ತು ಬ್ರಾಂಚ್ ಗಳ ಮಾಹಿತಿಯನ್ನೂ ಕೂಡ ವೆಬ್ ಸೈಟಿನಲ್ಲಿ ನೀಡಲಾಗಿದೆ.  ಆದಿಮ್ ಜನ್ ಜಾತಿ ಪೆನ್ಷನ್ ಯೋಜನಾ, ಇಂದಿರಾಗಾಂಧಿ  ನ್ಯಾಷನಲ್ ಓಲ್ಜ್ ಏಜ್ ಪೆಂನ್ಷನ್ ಯೋಜನಾ, ಇಂದಿರಾಗಾಂಧಿ ನ್ಯಾಷನಲ್ ಡಿಸೆಬಿಲಿಟಿ ಪೆಂನ್ಷನ್ ಯೋಜನಾ ಸೇರಿದಂತೆ ವಿವಿಧ ಬುಡಕಟ್ಟು ಯೋಜನೆಗಳ ಫಲಾನುಭವಿಗಳ ರಹಸ್ಯ ಮಾಹಿತಿಗಳನ್ನು ವೆಬ್ ಸೈಟಿಗೆ ಅಪ್ಲೋಡ್  ಮಾಡಲಾಗಿದೆ.

ಈ ವಿಚಾರಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳಲ್ಲಿ ಸುದ್ದಿ ಪ್ರಸಾರವಾಗಿದ್ದು, ವ್ಯಾಪಕ ಟೀಕೆ ವ್ಯಕ್ತವಾಗುತ್ತಿದೆ. ಜಾರ್ಖಂಡ್ ಸರ್ಕಾರ ಸಾರ್ವಜನಿಕರ ರಹಸ್ಯ ಮಾಹಿತಿ ಸೋರಿಕೆ ಮಾಡಿದೆ ಎಂದು ಕೆಲ ಕಾರ್ಯಕರ್ತರು  ಆರೋಪಿಸುತ್ತಿದ್ದು, ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ವೆಬ್ ಸೈಟ್ ಅನ್ನು ಸ್ಥಗಿತಗೊಳಿಸಲಾಗಿದೆ.

ಈಗ್ಗೆ ಒಂದು ತಿಂಗಳ ಹಿಂದಷ್ಟೇ ಆಧಾರ್ ಬಗ್ಗೆ ಜಾಗೃತಿ ಮೂಡಿಸುವುದಕ್ಕಾಗಿ ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಅವರು ಖ್ಯಾತ ಕ್ರಿಕೆಟಿಗ ಧೋನಿ ಅವರ ಆಧಾರ್ ಕಾರ್ಡ್ ಅನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದರು. ಈ ವಿಚಾರಕ್ಕೆ ಸಂಬಂಧಿಸಿದಂತೆ ಧೋನಿ ಪತ್ನಿ ಸಾಕ್ಷಿ ಸಿಂಗ್ ತೀವ್ರ ಗರಂ ಆಗಿದ್ದ ವಿಚಾರ ವ್ಯಾಪಕ ಚರ್ಚೆಗೆ ಕಾರಣವಾಗಿತ್ತು.  ಇದೀಗ ಜಾರ್ಖಂಡ್ ಸರ್ಕಾರ ಮತ್ತೆ ಅಂತಹುದೇ ಯಡವಟ್ಟು ಮಾಡಿಕೊಂಡಿದ್ದು, ಸರ್ಕಾರದ ಸಾಧನೆಯನ್ನು ಜನರಿಗೆ ತೋರಿಸುವ ಭರದಲ್ಲಿ ಸಾರ್ವಜನಿಕರ ರಹಸ್ಯ ಮಾಹಿತಿಯನ್ನು ಸೋರಿಕೆ ಮಾಡಿದೆ ಎಂಬ ಗಂಭೀರ ಆರೋಪ ಕೇಳಿಬರುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com