ನವದೆಹಲಿ: ಸುಕ್ಮಾ ನಕ್ಸಲರ ದಾಳಿಯನ್ನು ಸವಾಲಾಗಿ ತೆಗೆದುಕೊಳ್ಳಲಾಗಿದ್ದು, ದಾಳಿಯಲ್ಲಿ ಭಾಗಿಯಾದ ಯಾರೊಬ್ಬರನ್ನೂ ಸುಮ್ಮನೆ ಬಿಡುವುದಿಲ್ಲ ಎಂದು ಕೇಂದ್ರ ಗೃಹ ಸಚಿವ ರಾಜನಾಥ ಸಿಂಗ್ ಅವರು ಮಂಗಳವಾರ ಹೇಳಿದ್ದಾರೆ.
ದಾಳಿ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಅವರು, ದಾಳಿ ನಿಜಕ್ಕೂ ದೃಷ್ಟಕರ. ಘಟನೆಯಿಂದ ಸಾಕಷ್ಟು ನೋವಾಗಿದೆ. ಈ ದಾಳಿಯನ್ನು ನಾವು ಸವಾಲಾಗಿ ತೆಗೆದುಕೊಳ್ಳುತ್ತಿದ್ದು, ದಾಳಿಯಲ್ಲಿ ಭಾಗಿಯಾದ ಒಬ್ಬರನ್ನೂ ನಾವು ಸುಮ್ಮನೆ ಬಿಡುವುದಿಲ್ಲ ಎಂದು ಹೇಳಿದ್ದಾರೆ.
ದಾಳಿಯಾದ ಬಳಿಕ ಟ್ವಿಟರ್ ನಲ್ಲಿಯೂ ಪ್ರತಿಕ್ರಿಯೆ ನೀಡಿದ್ದ ಗೃಹ ಸಚಿವ. ಸಿಆರ್ ಪಿಎಫ್ ಯೋಧರ ಮೇಲಿನ ದಾಳಿಯಿಂದ ಸಾಕಷ್ಟು ನೋವಾಗಿದೆ. ಹುತಾತ್ಮ ಯೋಧರಿಗೆ ಈ ಮೂಲಕ ಶ್ರದ್ಧಾಂಜಲಿ ಅರ್ಪಿಸುತ್ತೇನೆ. ಕುಟುಂಬಸ್ಥರಿಗೆ ಸಂತಾಪವನ್ನು ಸೂಚಿಸುತ್ತೇನೆಂದು ಹೇಳಿದ್ದರು.
ಛತ್ತೀಸ್ಗಢ ರಾಜ್ಯದ ಸುಕ್ಮಾದ ರಸ್ತೆಯೊಂದರಲ್ಲಿ ಕಾರ್ಮಿಕರು ಕಾಮಗಾರಿ ಕಾರ್ಯವನ್ನು ಮಾಡುತ್ತಿದ್ದರು ಈ ವೇಳೆ 150ಕ್ಕೂ ಹೆಚ್ಚು ಸಿಆರ್ ಪಿಎಫ್ ಯೋಧರು ಕಾರ್ಮಿಕರಿಗೆ ಭದ್ರತೆಯನ್ನು ಒದಗಿಸುತ್ತಿದ್ದರೆ. ಈ ವೇಳೆ ಸ್ಥಳಕ್ಕೆ ಬಂದ 300ಕ್ಕೂ ಹೆಚ್ಚು ನಕ್ಸಲರು ಏಕಾಏಕಿ ಯೋಧರ ಮೇಲೆ ಗುಂಡಿನ ದಾಳಿ ನಡೆಸಿದ್ದರು. ಪರಿಣಾಮ 25 ಸಿಆರ್ ಪಿಎಫ್ ಯೋಧರು ಹುತಾತ್ಮರಾಗಿದ್ದರು.