ಸಹಾರಾ ಸಂಸ್ಥೆ ಮುಖ್ಯಸ್ಥ ಸುಬ್ರತಾ ರಾಯ್
ದೇಶ
ಚೆಕ್ ಬೌನ್ಸ್ ಆದ್ರೆ, ತಿಹಾರ್ ಜೈಲಿಗೆ ಕಳುಹಿಸುತ್ತೇವೆ: ಸುಬ್ರತಾ ರಾಯ್'ಗೆ ಸುಪ್ರೀಂ ಎಚ್ಚರಿಕೆ
ಸಾಲ ಮರುಪಾವತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಜೂನ್.19ರೊಳಗಾಗಿ ರೂ.2,550ಕೋಟಿಗಳನ್ನು ನ್ಯಾಯಾಲಯದಲ್ಲಿ ಠೇವಣಿ ಮಾಡದಿದ್ದರೆ, ತಿಹಾರ್ ಜೈಲಿಗೆ ಕಳುಹಿಸುತ್ತೇವೆಂದು ಸುಪ್ರೀಂಕೋರ್ಟ್ ಸಹಾರಾ ಮುಖ್ಯಸ್ಥ ಸುಬ್ರತಾ ರಾಯ್ ಅವರಿಗೆ ಗುರುವಾರ...
ನವದೆಹಲಿ: ಸಾಲ ಮರುಪಾವತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಜೂನ್.19ರೊಳಗಾಗಿ ರೂ.2,550ಕೋಟಿಗಳನ್ನು ನ್ಯಾಯಾಲಯದಲ್ಲಿ ಠೇವಣಿ ಮಾಡದಿದ್ದರೆ, ತಿಹಾರ್ ಜೈಲಿಗೆ ಕಳುಹಿಸುತ್ತೇವೆಂದು ಸುಪ್ರೀಂಕೋರ್ಟ್ ಸಹಾರಾ ಸಂಸ್ಥೆ ಮುಖ್ಯಸ್ಥ ಸುಬ್ರತಾ ರಾಯ್ ಅವರಿಗೆ ಗುರುವಾರ ಎಚ್ಚರಿಕೆ ನೀಡಿದೆ.
ವಸತಿ ಯೋಜನೆ ಹೆಸರಿನಲ್ಲಿ ಸಾರ್ವಜನಿಕ ಹೂಡಿಕೆದಾರರನ್ನು ವಂಚಿಸಿ, ಹೂಡಿಕೆ ಹಣ ಹಿಂದಿರುಗಿಸದ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಜಾಮೀನುರಹಿತ ವಾರಂಟ್ ಹೊರಡಿಸಿ ಬಂಧನಕ್ಕೆ ಆದೇಶ ನೀಡಿತ್ತು. ಇದಾದ ಬಳಿಕ ತಲೆಮರೆಸಿಕೊಂಡಿದ್ದ ಸುಬ್ರತಾರಾಯ್ ಅವರು ಲಖನೌದಲ್ಲಿ ಪೊಲೀಸರ ಎದುರು ಶರಣಾಗಿ ಜೈಲು ಪಾಲಾಗಿದ್ದರು.
2014ರಲ್ಲಿ ಬಂಧಿತರಾಗಿದ್ದ ಸಹಾರಾ ಮುಖ್ಯಸ್ಥ ಸುಬ್ರತಾ ರಾಯ್ ಅವರಿಗೆ ಸುಪ್ರೀಂಕೋರ್ಟ್ ಕಳೆದ ವರ್ಷ ಜಾಮೀನು ನೀಡಿ ಬಿಡುಗಡೆಗೆ ಮಂಜೂರು ಮಾಡಿತ್ತು. ನ್ಯಾಯಾಲಯದ ಆದೇಶದಂತೆ ಇಂದು ಸುಬ್ರತಾ ರಾಯ್ ಅವರು ನ್ಯಾಯಾಲಯದಲ್ಲಿ ಹಾಜರಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯ ಸುಬ್ರತಾ ರಾಯ್ ಅವರ ಪೆರೋಲ್ ಅನ್ನು ಜುಲೈ15ರ ವರೆಗೆ ವಿಸ್ತರಿಸಿದೆ.
ವಿಚಾರಣೆ ವೇಳೆ ಮಾತನಾಡಿದ ರಾಯ್ ಪರ ವಕೀಲ, ಸುಪ್ರೀಂಕೋರ್ಟ್ ಆದೇಶದಂತೆಯೇ ಸುಬ್ರತಾ ರಾಯ್ ಅವರು ನ್ಯಾಯಾಲಯಕ್ಕೆ ಹಾಜರಾಗಿದ್ದಾರೆಂದು ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ತ್ರಿಸದಸ್ಯ ಪೀಠಕ್ಕೆ ತಿಳಿಸಿದರು.
ಈ ವೇಳೆ ರಾಯ್ ಅವರನ್ನು ಪ್ರಶ್ನಿಸಿದ ನ್ಯಾಯಾಲಯ, ಜೂನ್19ರೊಳಗಾಗಿ ರಾಯ್ ಅವರು 2,550 ಕೋಟಿ ಹಣವನ್ನು ನ್ಯಾಯಾಲಯದಲ್ಲಿ ಠೇವಣಿ ಮಾಡಬೇಕು. ಇಲ್ಲದೇ ಹೋದರೆ ಮತ್ತೆ ಜೈಲಿಗೆ ಮರಳಬೇಕಾಗುತ್ತದೆ. ಹಣವನ್ನು ಮರು ಪಾವತಿ ಮಾಡುತ್ತಿರೋ, ಇಲ್ಲವೋ ಎಂದು ಪ್ರಶ್ನಿಸಿತು.
ಇದಕ್ಕೆ ಉತ್ತರ ನೀಡಿದ ರಾಯ್ ಅವರು ರೂ.2.550 ಕೋಟಿಗಳನ್ನು ರೂ.1,500 ಕೋಟಿ, ರೂ.500 ಕೋಟಿ ಹಾಗೂ 3,000 ಕೋಟಿಯಂತೆ ಮೂರು ಚೆಕ್ ಗಳ ಮೂಲಕ ನೀಡುತ್ತೇನೆಂದು ತಿಳಿಸಿದರು.
ಈ ಚೆಕ್ಕುಗಳು ಬೌನ್ಸ್ ಆಗಿದ್ದೇ ಆದರೆ, ನಿಮ್ಮನ್ನು ಮತ್ತೆ ನ್ಯಾಯಾಲಯದಿಂದ ನೇರವಾಗಿ ತಿಹಾರ್ ಜೈಲಿಗೆ ಕಳುಹಿಸುತ್ತೇವೆಂದು ರಾಯ್ ಗೆ ನ್ಯಾಯಾಧೀಶರು ಎಚ್ಚರಿಕೆ ಕೊಟ್ಟರು.
ಹೂಡಿಕೆದಾರರಿಗೆ ರೂ.24,000 ಕೋಟಿಗಳನ್ನು ಪಾವತಿಸಬೇಕಿದ್ದ ಸಹಾರಾ ಸಮೂಹ ಈ ವರೆಗೂ ಕೇವಲ ರೂ.12,000 ಕೋಟಿಗಳನ್ನಷ್ಟೇ ಪಾವತಿಸಿದೆ. ಬಾಕಿಯಿರುವ ರೂ.12,000 ಕೋಟಿ ಹಣವನ್ನು ಪಾವತಿ ಮಾಡಲು ಹಲವಾರು ಗಡುವುಗಳನ್ನು ಸಹಾರಾ ಸಂಸ್ಥೆ ಉಲ್ಲಂಘನೆ ಮಾಡಿದೆ.
ಈ ಹಿನ್ನಲೆಯಲ್ಲಿ ಸಹಾರಾ ಸಂಸ್ಥೆ ಕೂಡಲೇ ರೂ.5,000 ಕೋಟಿಗಳನ್ನು ತುರ್ತಾಗಿ ಪಾವತಿ ಮಾಡಬೇತು. ಇದರ ಅರ್ಧಾಂಶ ಮೊತ್ತ ಹಣವನ್ನು ಜೂನ್.15ರೊಳಗಾಗಿ ನೀಡಬೇಕೆಂದು ನ್ಯಾಯಾಲಯ ಆದೇಶಿಸಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ