

ನವದೆಹಲಿ: ಮಹಿಳೆಯೊಬ್ಬರ ನೇತೃತ್ವದ ಗುಂಪಿನಿಂದ ತಮಗೆ ಮತ್ತು ಬರಿಸುವ ಪಾನೀಯ ಕುಡಿಸಿ ಆಕ್ಷೇಪಾರ್ಹ ಸ್ಥಿತಿಯಲ್ಲಿ ಚಿತ್ರೀಕಸಿದರು ಎಂದು ಗುಜರಾತ್ ನ ವಲ್ಸದ್ ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದ ಕೆ.ಸಿ.ಪಟೇಲ್ ದೂರು ದಾಖಲಿಸಿದ್ದಾರೆ.
ಅಲ್ಲದೆ ಮಹಿಳೆ ತಮ್ಮ ಬಳಿ 5 ಕೋಟಿ ರೂಪಾಯಿಗೆ ಬೇಡಿಕೆಯಿಟ್ಟಿದ್ದಾರೆ. ಹಣ ನೀಡದಿದ್ದರೆ ಫೋಟೋ ಮತ್ತು ವಿಡಿಯೋವನ್ನು ಬಿಡುಗಡೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ. ಅಲ್ಲದೆ ತಮ್ಮ ವಿರುದ್ಧ ಅತ್ಯಾಚಾರ ಕೇಸನ್ನು ದಾಖಲಿಸುವುದಾಗಿ ಕೂಡ ಬೆದರಿಕೆಯೊಡ್ಡಿದ್ದಾರೆ ಎಂದು ಸಂಸದ ಕೂಡ ಆರೋಪಿಸಿದ್ದಾರೆ. ದೆಹಲಿ ಪೊಲೀಸರು ಇದೀಗ ಮಹಿಳೆಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
ಕೆಸಿ ಪಟೇಲ್ ತಮ್ಮ ದೂರಿನಲ್ಲಿ, ಮಹಿಳೆ ನನ್ನ ಬಳಿಗೆ ಸಹಾಯ ಕೇಳಿಕೊಂಡು ಬಂದಳು ಮತ್ತು ನನ್ನನ್ನು ಗಜಿಯಾಬಾದ್ ನ ಮನೆಯೊಂದಕ್ಕೆ ಕರೆದೊಯ್ದಳು. ಅಲ್ಲಿ ನನಗೆ ಮತ್ತು ಬರಿಸುವ ವಸ್ತುವನ್ನು ತಂಪು ಪಾನೀಯದಲ್ಲಿ ಹಾಕಿ ಸೇವಿಸಲು ಕೊಟ್ಟರು. ಕೂಡಲೇ ನಾನು ಪ್ರಜ್ಞೆ ಕಳೆದುಕೊಂಡೆ. ನನಗೆ ಪ್ರಜ್ಞೆ ಬಂದಾಗ ಮೋಸ ಹೋಗಿರುವುದು ಗೊತ್ತಾಯಿತು ಎಂದು ವಿವರಿಸಿದ್ದಾರೆ.
ಪೊಲೀಸರು ದೂರು ಬಂದ ತಕ್ಷಣ ಎಫ್ಐಆರ್ ದಾಖಲಿಸಲು ಆದೇಶ ಹೊರಡಿಸಿದ್ದಾರೆ. ಭಾರತೀಯ ದಂಡ ಸಂಹಿತೆ 384ರಡಿ ಎಫ್ಐಆರ್ ದಾಖಲಿಸಲಾಗಿದೆ.
ಆದರೆ ಮಹಿಳೆ, ತಮ್ಮ ಮೇಲೆ ಸಂಸದರು ಅತ್ಯಾಚಾರವೆಸಗಿದ್ದಾರೆ ಎಂದು ಹೇಳುತ್ತಾರೆ. ಶಂಕಿತ ಹನಿಟ್ರ್ಯಾಪ್ ಕೇಸಿನ ಬಗ್ಗೆ ಪ್ರತಿಕ್ರಿಯೆ ನೀಡಿದ ಸಂಸದರು ಮಹಿಳೆ ತಮ್ಮ ವಿರುದ್ಧ ಸುಳ್ಳು ಆರೋಪ ಮಾಡುತ್ತಿದ್ದು, ನನಗೆ ಕಾನೂನಿನ ಮೇಲೆ ನಂಬಿಕೆಯಿದೆ. ತನಿಖೆಗೆ ಸಂಪೂರ್ಣ ಸಹಕರಿಸುವುದಾಗಿ ಹೇಳಿದ್ದಾರೆ.
ನ್ಯಾಯಾಲಯ ಕೂಡ ಪೊಲೀಸರಿಗೆ ತನಿಖೆ ನಡೆಸುವಂತೆ ಆದೇಶ ನೀಡಿದ್ದು ದೆಹಲಿ ಪೊಲೀಸರು ಇದಕ್ಕೆ ವಿಶೇಷ ತಂಡ ರಚಿಸಿದ್ದಾರೆ.