ಶಶಿಕಲಾ ಸೂಚನೆಯಂತೆ ರಾಜ್ಯದಲ್ಲಿ ಆಡಳಿತ: ಸಿಎಂ ಪಳನಿಸ್ವಾಮಿ ಸೇರಿ 4 ಸಚಿವರಿಗೆ ನೋಟಿಸ್

ಎಐಎಡಿಎಂಕೆ ಕಾರ್ಯಕರ್ತರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದಕ್ಕೆ ಸಂಬಂಧಿಸಿದಂತೆ ತಮಿಳುನಾಡು ಮುಖ್ಯಮಂತ್ರಿ ಎಡಪ್ಪಾಡಿ ಕೆ.ಪಳನಿಸ್ವಾಮಿ ಸೇರಿ ನಾಲ್ಕು ಸಚಿವರಿಗೆ ಮದ್ರಾಸ್ ಹೈಕೋರ್ಟ್ ಗುರುವಾರ ನೋಟಿಸ್ ಜಾರಿ ಮಾಡಿದೆ...
ತಮಿಳುನಾಡು ಮುಖ್ಯಮಂತ್ರಿ ಎಡಪ್ಪಾಡಿ ಕೆ.ಪಳನಿಸ್ವಾಮಿ
ತಮಿಳುನಾಡು ಮುಖ್ಯಮಂತ್ರಿ ಎಡಪ್ಪಾಡಿ ಕೆ.ಪಳನಿಸ್ವಾಮಿ
ಚೆನ್ನೈ: ಎಐಎಡಿಎಂಕೆ ಕಾರ್ಯಕರ್ತರು  ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದಕ್ಕೆ ಸಂಬಂಧಿಸಿದಂತೆ ತಮಿಳುನಾಡು ಮುಖ್ಯಮಂತ್ರಿ ಎಡಪ್ಪಾಡಿ ಕೆ.ಪಳನಿಸ್ವಾಮಿ ಸೇರಿ ನಾಲ್ಕು ಸಚಿವರಿಗೆ ಮದ್ರಾಸ್ ಹೈಕೋರ್ಟ್ ಗುರುವಾರ ನೋಟಿಸ್ ಜಾರಿ ಮಾಡಿದೆ.
ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಜೈಲು ಸೇರಿರುವ ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ. ವಿ.ಕೆ. ಶಶಿಕಲಾ ಅವರ ಸೂಚನೆಯಂತೆ ತಮಿಳುನಾಡು ರಾಜ್ಯದಲ್ಲಿ ಆಡಳಿತ ನಡೆಸಲಾಗುತ್ತಿದೆ ಎಂದು ಹೇಳಿ ಈ ಹಿಂದೆ ಎಐಎಡಿಎಂಕೆ ಮಾಜಿ ಶಾಸಕ ಆರ್. ತಮರೈಕನಿ ಅವರ ಪುತ್ರ ಟಿ. ಅನಲಂಗನ್ ಎಂಬುವವರು ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದನ್ನು ದಾಖಲಿಸಿದ್ದರು. 
ಅರಣ್ಯ ಸಚಿವ ದಿಂಡುಕ್ಕಲ್ ಸಿ. ಶ್ರೀನಿವಾಸನ್, ಶಿಕ್ಷಣ ಸಚಿವ ಕೆ.ಎ. ಸೆಂಗೋಟ್ಟೈಯಾನ್, ಸಹಕಾರ ಸಚಿವ 'ಸೆಲ್ಲೂರ್' ಕೆ. ರಾಜು ಮತ್ತು ಆಹಾರ ಮತ್ತು ನಾಗರೀಕ ಸರಬರಾಜು ಸಚಿವ ಆರ್. ಕಾಮರಾಜ್ ಅವರು ಕಳೆದ ಫೆ.28 ರಂದು ಜೈಲಿನಲ್ಲಿರುವ ಶಶಿಕಲಾ ಅವರನ್ನು ಭೇಟಿ ಮಾಡಿದ್ದರು. ಭೇಟಿ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿ, ರಾಜ್ಯ ಸರ್ಕಾರದ ಆಡಳಿತ ಕುರಿತಂತೆ ಶಶಿಕಲಾ ಅವರೊಂದಿಗೆ ಚರ್ಚೆ ನಡೆಸಿದ್ದೇವೆಂದು ಹೇಳಿದ್ದರು. 
ಶಶಿಕಲಾ ಅವರ ಸೂಚನೆಯಂತೆ ರಾಜ್ಯದ ಮುಖ್ಯಮಂತ್ರಿಗಳು ಹಾಗೂ ಸಚಿವರು ಆಡಳಿತ ನಡೆಸುತ್ತಿದ್ದು, ಮುಖ್ಯಮಂತ್ರಿಗಳು, ಸಚಿವರು ಹಾಗೂ ರಾಜ್ಯಪಾಲರ ಅನರ್ಹತೆ ಕುರಿತಂತೆ ಸ್ಪೀಕರ್ ಹಾಗೂ ವಿಧಾನಸಭಾ ಕಾರ್ಯದರ್ಶಿಗಳಿಗೆ ನಿರ್ದೇಶನ ನೀಡುವಂತೆ ಅರ್ಜಿಯಲ್ಲಿ ಅನಲಂಗನ್ ಮನವಿ ಮಾಡಿದ್ದರು. ಈ ಹಿನ್ನಲೆಯಲ್ಲಿ ತಮಿಳುನಾಡು ಮುಖ್ಯಮಂತ್ರಿ ಎಡಪ್ಪಾಡಿ ಕೆ.ಪಳನಿಸ್ವಾಮಿ ಸೇರಿ ನಾಲ್ಕು ಸಚಿವರಿಗೆ ನ್ಯಾಯಾಲಯ ನೋಟಿಸ್ ಜಾರಿ ಮಾಡಿದೆ ಎಂದು ತಿಳಿದುಬಂದಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com