ಈಗ ನಾನು ಬಿಜೆಪಿಗೆ ಸೇರಿದವನಲ್ಲ: ವೆಂಕಯ್ಯ ನಾಯ್ಡು

ಉಪರಾಷ್ಟ್ರಪತಿಯಾಗಿ ನನ್ನ ನೇಮಕ ಭಾರತೀಯ ಸಂವಿಧಾನ ಪ್ರಜಾಪ್ರಭುತ್ವದ ಸೌಂದರ್ಯವನ್ನ ಎತ್ತಿತೋರಿಸುತ್ತದೆ. ಸ್ಥಾನದ ಘನತೆ ಹಾಗೂ ಶಿಷ್ಟಾಚಾರವನ್ನು ಎತ್ತಿಹಿಡಿಯುತ್ತೇನೆ...
ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು
ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು

ತಿರುಪತಿ: ಉಪರಾಷ್ಟ್ರಪತಿಯಾಗಿ ನನ್ನ ನೇಮಕ ಭಾರತೀಯ ಸಂವಿಧಾನ ಪ್ರಜಾಪ್ರಭುತ್ವದ ಸೌಂದರ್ಯವನ್ನ ಎತ್ತಿತೋರಿಸುತ್ತದೆ. ಸ್ಥಾನದ ಘನತೆ ಹಾಗೂ ಶಿಷ್ಟಾಚಾರವನ್ನು ಎತ್ತಿಹಿಡಿಯುತ್ತೇನೆ. ಇದೀಗ ನಾನು ಬಿಜೆಪಿಗೆ ಸೇರಿದವನಲ್ಲ ಎಂದು ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ಸೋಮವಾರ ಹೇಳಿದ್ದಾರೆ. 


ತಿರುಪತಿಗೆ ಭೇಟಿ ನೀಡಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು, ವಿವಿಧ ಪಕ್ಷಗಳ ಸಂಸತ್ತಿನ ಸದಸ್ಯರು ನನಗೆ ಬೆಂಬಲ ನೀಡಿರುವುದಕ್ಕೆ ಬಹಳ ಕೃತಜ್ಞನಾಗಿದ್ದೇನೆ. ಇದೀಗ ನಾನು ಬಿಜೆಪಿಗೆ ಸೇರಿದವನಲ್ಲ. ಯಾವುದೇ ಪಕ್ಷವನ್ನೂ ನಾನು ಮುನ್ನಡೆಸುತ್ತಿಲ್ಲ. ಈಗಾಗಲೇ ನಾನು ಸಚಿವಾಲಯಕ್ಕೆ ಹಾಗೂ ಪಕ್ಷಕ್ಕೆ ರಾಜೀನಾಮೆಯನ್ನು ನೀಡಿದ್ದೇನೆ. ಇನ್ನು 2-3 ದಿನಗಳಲ್ಲಿ ಸಂಸತ್ತಿನ ಸದಸ್ಯ ಸ್ಥಾನಕ್ಕೂ ರಾಜೀನಾಮೆಯನ್ನು ಸಲ್ಲಿಸುತ್ತೇನೆಂದು ಹೇಳಿದ್ದಾರೆ. 

ಹಲವು ಪಕ್ಷಗಳ ಸದಸ್ಯರು, ಭಾರತದ ಜನತೆ ಹಾಗೂ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ವಿಶ್ವಾಸ ನನ್ನನ್ನು ಈ ಸ್ಥಾನಕ್ಕೆ ಏರುವಂತೆ ಮಾಡಿದೆ. ದೇಗುಲಕ್ಕೆ ಭೇಟಿ ನೀಡಿರುವುದರ ಹಿಂದೆ ಯಾವುದೇ ರಾಜಕೀಯ ಉದ್ದೇಶಗಳಿಲ್ಲ. 

ಉಪರಾಷ್ಟ್ರಪತಿಯಾಗಿ ಉತ್ತಮವಾದ ಕೆಲಸಗಳನ್ನು ಮಾಡುವುದು ನನ್ನ ಜವಬ್ದಾರಿಯಾಗಿದೆ. ವೆಂಕಟೇಶ್ವರನ ಆಶೀರ್ವಾದದಿಂದ ಎಲ್ಲವೂ ನಡೆದಿದೆ. ದೇಗುಲಕ್ಕೆ ಭೇಟಿ ನೀಡಿದಾಗಲೆಲ್ಲಾ ಸಾಕಷ್ಟು ಪ್ರೇರಿತಗೊಳ್ಳುತ್ತೇನೆ. ಇಂದು ನಾನು ನನ್ನ ಜೀವನದ ಹೊಸ ಅಧ್ಯಾಯವನ್ನು ಪ್ರಾರಂಭಿಸುತ್ತೇನೆ. ದೇಗುಲ ಭೇಟಿ ಸಂಪೂರ್ಣ ರಾಜಕೀಯ ರಹಿತವದಾದ್ದು. ಕೃಷಿ ಕುಟುಂಬ ಹಿನ್ನಲೆಯುಳ್ಳವನಾಗಿರುವ ನಾನು ಈ ಸ್ಥಾನಕ್ಕೆ ಏರಿರುವುದು ಬಹಳ ಸಂತೋಷವನ್ನು ತಂದಿದೆ ಎಂದು ತಿಳಿಸಿದ್ದಾರೆ. 

ಉಪರಾಷ್ಟ್ರಪತಿ ಆಯ್ಕೆಗೆ ಆಗಸ್ಟ್ 5 ರಂದು ನಡೆದ ಮತದಾನದಲ್ಲಿ ಶೇ.98.21ರಷ್ಟು ಮತದಾನವಾಗಿತ್ತು. ಒಟ್ಟು 785 ಸಂಸದರ ಪೈಕಿ 771 ಮಂದಿ ಮತದಾನ ಮಾಡಿದ್ದರು. ಯುಪಿಎ ಅಭ್ಯರ್ಥಿ ಗೋಪಾಲ್ ಕೃಷ್ಣ ಗಾಂಧಿಯವರ ವಿರುದ್ಧ ಸ್ಪರ್ಧಿಸಿದ್ದ ವೆಂಕಯ್ಯ ನಾಯ್ಡು ಅವರಿಗೆ 516 ಮತಗಳು ದೊರೆತಿದ್ದರೆ, ಪರಾಜಿತ ಅಭ್ಯರ್ಥಿ ಗೋಪಾಲ್ ಅವರಿಗೆ 244 ಮತಗಳನ್ನು ಪಡೆದಿದ್ದರು. ಇದರಂತೆ ದೇಶದ 13ನೇ ಉಪರಾಷ್ಟ್ರಪತಿಯಾಗಿ ಬಿಜೆಪಿಯ ಹಿರಿಯ ಮುಖಂಡ ವೆಂಕಯ್ಯನಾಯ್ಡು ಅವರು ಆಯ್ಕೆಯಾಗಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com