ಮೌಂಟ್ ಎವರೆಸ್ಟ್ ಹತ್ತಿದ ಮೊದಲ ಭಾರತೀಯ ದಂಪತಿ ಎಂದು ಸುಳ್ಳು ಹೇಳಿದ್ದ ಪೊಲೀಸ್ ದಂಪತಿ ವಜಾ!
ಪುಣೆ: ಜಗತ್ತಿನ ಅತೀ ಎತ್ತರದ ಎವರೆಸ್ಟ್ ಶಿಖರ ಹತ್ತಿದ ಮೊದಲ ಭಾರತೀಯ ದಂಪತಿ ತಾವೆಂದು ಸುಳ್ಳು ಹೇಳಿಕೊಂಡು ರಾತ್ರೋ ರಾತ್ರಿ ಖ್ಯಾತಿ ಗಳಿಸಿದ್ದ ಪುಣೆ ಮೂಲದ ಇಬ್ಬರು ಪೊಲೀಸ್ ದಂಪತಿಗಳನ್ನು ಅವರ ಸೇವೆಯಿಂದ ವಜಾಗೊಳಿಸಲಾಗಿದೆ.
ದಂಪತಿಗಳು ಮೌಂಟ್ ಎವರೆಸ್ಟ್ ಹತ್ತಿದ ಚಿತ್ರಗಳು ನಕಲಿ ಎಂಬ ವಿಚಾರ ಪೊಲೀಸ್ ತನಿಖೆಯಿಂದ ಸಾಬೀತಾದ ಹಿನ್ನಲೆಯಲ್ಲಿ ಅವರನ್ನು ಕೆಲಸದಿಂದ ವಜಾ ಮಾಡಲಾಗಿದೆ ಎಂದು ಹೇಳಲಾಗಿದೆ. ತಾವು 8,850 ಮೀಟರ್ ಎತ್ತರದ ಶಿಖರವನ್ನು ಯಶಸ್ವಿಯಾಗಿ ಆರೋಹಣ ಮಾಡಿದ್ದೇವೆ ಎಂದು ಪುಣೆ ಮೂಲದ ದಿನೇಶ್ ಮತ್ತು ತಾರಕೇಶ್ವರಿ ರಾಥೋಡ್ ಎಂಬ ದಂಪತಿಗಳು ಹೇಳಿಕೊಂಡಿದ್ದರು. ಆದರೆ ಈ ದಂಪತಿ ಫೋಟೋಗಳನ್ನು ತಿರುಚಿ ತಾವು ಮೇ 23ರಂದು ಎವರೆಸ್ಟ್ ಏರಿದ್ದೇವೆ ಎಂದು ಹೇಳಿಕೊಂಡಿದ್ದರೆಂದು ಮಹಾರಾಷ್ಟ್ರ ಪೊಲೀಸರು ತಿಳಿಸಿದ್ದಾರೆ.
ದಂಪತಿಗಳ ಹೇಳಿಕೆಗೆ ಸಂಬಂಧಿಸಿದಂತೆ ಇತರ ಶಿಖರಾರೋಹಿಗಳು ಸಂಶಯಗೊಂಡ ನಂತರ ಅಧಿಕಾರಿಗಳು ತನಿಖೆ ನಡೆಸಿದ್ದರು. ತಾವು ಮೌಂಟ್ ಎವರೆಸ್ಟ್ ಆರೋಹಣ ಮಾಡಿದ್ದೇವೆಂದು ಸಾಬೀತು ಪಡಿಸಲು ದಂಪತಿ ಪ್ರಸ್ತುತ ಪಡಿಸಿದ್ದ ಫೋಟೊಗಳು ಅವರದಲ್ಲ, ಬದಲಾಗಿ ತನಗೆ ಸೇರಿದ್ದು ಎಂದು ಬೆಂಗಳೂರು ಮೂಲದ ಪರ್ವತಾರೋಹಿ ಸತ್ಯರೂಪ್ ಸಿದ್ಧಾಂತ ಹೇಳಿಕೊಂಡಿದ್ದರು. ತನಿಖೆ ವೇಳೆ ಇದು ಸಾಬೀತು ಕೂಡ ಆಗಿದ್ದರಿಂದ ದಂಪತಿಗಳ ವಿರುದ್ಧ ಈ ಕಠಿಣ ಕ್ರಮ ಕೈಗೊಳ್ಳಲಾಗಿದೆ.
ಈ ದಂಪತಿ ಈ ರೀತಿ ದಾರಿ ತಪ್ಪಿಸುವ ಸುಳ್ಳು ಹೇಳಿಕೆಗಳನ್ನು ನೀಡಿ ಪೊಲೀಸ್ ಇಲಾಖೆಗೆ ಅಗೌರವ ತಂದಿದ್ದಾರೆಂದು ಮಹಾರಾಷ್ಟ್ರ ಪೊಲೀಸ್ ವರಿಷ್ಠಾಧಿಕಾರಿ ಶೆಬ್ರಾವ್ ಪಾಟೀಲ್ ಹೇಳಿದ್ದಾರೆ. ಪುಣೆಯ ಶಿವಾಜಿನಗರದಲ್ಲಿ ದಂಪತಿಗಳನ್ನು ಕೆಲಸಕ್ಕೆ ನಿಯೋಜಿಸಲಾಗಿತ್ತು. ಮೂರು ತಿಂಗಳ ಹಿಂದಷ್ಟೇ ದಂಪತಿಗಳಿಗೆ ಇಲಾಖೆ ಕೆಲಸದಿಂದ ವಜಾ ಮಾಡುವ ಕುರಿತು ನೋಟಿಸ್ ಜಾರಿ ಮಾಡಿತ್ತು. ಇನ್ನು ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿದ್ದ ಪುಣೆ ಮೂಲದ ಪರ್ವತಾರೋಹಿ ಸುರೇಂದ್ರ ಶೇಕ್ ಅವರು, ದಂಪತಿಗಳು ಹೇಗೆ ಪರ್ವತಾರೋಹಣ ಮಾಡಿದ್ದರು ಎಂಬ ಪ್ರಶ್ನೆಗಳಿಗೆ ಅವರು ನೀಡಿದ್ದ ಉತ್ತರದಲ್ಲಿ ಹಲವು ಲೋಪದೋಷಗಳಿದ್ದವು. ಇದರಿಂದಲೇ ತಿಳಿಯುತ್ತದೆ ಅವರು ಪರ್ವತಾರೋಹಣ ಮಾಡಿಲ್ಲವೆಂದು ಹೇಳಿದ್ದರು.
ಈ ವಿವಾದ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದ್ದಂತೆಯೇ ಅತ್ತ ನೇಪಾಳ ಪ್ರವಾಸೋದ್ಯಮ ಇಲಾಖೆ ಕೂಡ ಅವರ ಮೇಲೆ ಪರ್ವತಾರೋಹಣಕ್ಕೆ ಹತ್ತು ವರ್ಷಗಳ ನಿಷೇಧ ಹೇರಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ