ಚೆನ್ನೈ: ಚೆನ್ನೈನಲ್ಲಿರುವ ಅಮೆರಿಕ ದೂತಾವಾಸ ಕಚೇರಿಯ ಕಾನ್ಸಲ್ ಜನರಲ್ ಆಗಿ ರಾಬರ್ಟ್ ಬರ್ಜಸ್ ಅವರು ಸೋಮವಾರ ಅಧಿಕಾರ ಸ್ವೀಕರಿಸಿದ್ದಾರೆ.
ಅಧಿಕಾರ ಸ್ವೀಕರಿಸಿದ ಬಳಿಕ ಮಾತನಾಡಿದ ರಾಬರ್ಟ್ ಬರ್ಜಸ್ ಅವರು, ಅಮೆರಿಕ- ಭಾರತದ ನಡುವಿನ ಸಂಬಂಧ ಮಹತ್ತರ ಘಟ್ಟದಲ್ಲಿರುವ ಹೊತ್ತಲ್ಲಿ ದಕ್ಷಿಣ ಭಾರತದಲ್ಲಿ ಅಮೆರಿಕವನ್ನು ಪ್ರತಿನಿಧಿಸುವ ಸುಯೋಗ ನನ್ನದು ಎಂದಿದ್ದಾರೆ.
ಮುಂಬರುವ ದಿನಗಳಲ್ಲಿ ತಮಿಳುನಾಡು, ಕರ್ನಾಟಕ ಮತ್ತು ಕೇರಳಗಳ ಬಗ್ಗೆ ತಿಳಿದು ಕೊಳ್ಳಲು ಹಾಗೂ ಉಭಯತ್ರರ ಧ್ಯೇಯೋದ್ದೇಶಗಳ ಮುಂದುವರಿಕೆಗೆ ಉತ್ಸುಕನಾಗಿರುವುದಾಗಿ ಬರ್ಜಸ್ ತಿಳಿಸಿದ್ದಾರೆ.
ಬರ್ಜಸ್ ಅವರು ಚೆನ್ನೈನಲ್ಲಿನ ಅಮೆರಿಕ ದೂತಾವಾಸ ಕಚೇರಿಯ ಕಾನ್ಸಲ್ ಜನರಲ್ ಆಗಿ ನೇಮಕಗೊಳ್ಳುವ ಮುನ್ನ ವಾಷಿಂಗ್ಟನ್ ಡಿಸಿಯಲ್ಲಿ ಡಿಪಾರ್ಟ್‌ಮೆಂಟ್ ಆಫ್ ಸ್ಟೇಟ್‌ನ ಬ್ಯೂರೋ ಆಫ್ ಸೌತ್ ಅಂಡ್ ಸೆಂಟ್ರಲ್ ಏಷ್ಯನ್ ಅಫೇರ್ಸ್‌ನಲ್ಲಿ ನಿರ್ದೇಶಕರಾಗಿದ್ದರು. ಅದಕ್ಕಿಂತ ಮೊದಲು ತಜಕಿಸ್ತಾನದ ದುಶಾಂಬೆಯಲ್ಲಿರುವ ಅಮೆರಿಕ ರಾಯಭಾರ ಕಚೇರಿಯಲ್ಲಿ ಡೆಪ್ಯುಟಿ ಛೀಫ್ ಆಫ್ ಮಿಶನ್ ಆಗಿ ಕಾರ್ಯನಿರ್ವಹಿಸಿದ್ದರು.
ಬಿಶ್ಕೆಕ್, ಕಿರ್ಜಿಸ್ತಾನ್, ಬಾಕು, ಅಜಎರ್ಬೈಜಾನ್, ಲಿಲೊನ್‌ಗ್ವೆ, ಮಲಾವಿ ಮತ್ತು ಪಾಕಿಸ್ತಾನದ ಕರಾಚಿಯಲ್ಲಿ ರಾಜತಾಂತ್ರಿಕರಾಗಿ ದುಡಿದ ಅನುಭವ ಬರ್ಜಸ್ ಅವರಿಗಿದೆ. ರಾಜತಾಂತ್ರಿಕರಾಗುವ ಮುನ್ನ ವಕೀಲರಾಗಿ ಕಾರ್ಯನಿರ್ವಹಿಸಿದ್ದರು.