ಅಹಮದಾಬಾದ್: ಇತ್ತೀಚಿಗೆ ನಡೆದ ರಾಜ್ಯಸಭೆ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಅಹಮದ್ ಪಟೇಲ್ ವಿರುದ್ಧ ಮತ ಚಲಾಯಿಸಿದ್ದ 7 ಕಾಂಗ್ರೆಸ್ ಶಾಸಕರನ್ನು ಪಕ್ಷದಿಂದ ಉಚ್ಚಾಟಿಸಲಾಗಿದ್ದು, ಉಚ್ಚಾಟಿತ 7 ಶಾಸಕರು ಶುಕ್ರವಾರ ತಮ್ಮ ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ.
7 ಕಾಂಗ್ರೆಸ್ ಶಾಸಕರು ನಿನ್ನೆ ರಾತ್ರಿ ತಮ್ಮ ನಿವಾಸಕ್ಕೆ ಆಗಮಿಸಿ ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ ಎಂದು ಗುಜರಾತ್ ವಿಧಾನಸಭೆ ಸ್ಪೀಕರ್ ರಮಣ್ ಲಾಲ್ ವೋರಾ ಅವರು ಇಂದು ತಿಳಿಸಿದ್ದಾರೆ.
ಆಗಸ್ಟ್ 8ರಂದು ನಡೆದ ರಾಜ್ಯಸಭೆ ಚುನಾವಣೆಯಲ್ಲಿ ಕ್ರಾಸ್ ವೋಟ್ ಮಾಡಿದ್ದ ಪ್ರತಿಪಕ್ಷ ನಾಯಕ ಶಂಕರ್ ಸಿಂಗ್ ವಘೇಲಾ ಹಾಗೂ ಅವರ ಪುತ್ರ ಮಹೇಂದರ್ ಸಿಂಗ್ ಸೇರಿದಂತೆ ಏಳು ಶಾಸಕರನ್ನು ಕಾಂಗ್ರೆಸ್ ನಿಂದ ಆರು ವರ್ಷಗಳ ಕಾಲ ಉಚ್ಚಾಟಿಸಲಾಗಿತ್ತು.
ನಾವು ನಮ್ಮ ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡಿದ್ದು, ಶೀಘ್ರದಲ್ಲೇ ಬಿಜೆಪಿ ಸೇರುವುದಾಗಿ ಮಹೇಂದರ್ ಸಿಂಗ್ ವಘೇಲಾ ಅವರು ವರದಿಗಾರರಿಗೆ ತಿಳಿಸಿದ್ದಾರೆ.