ಉತ್ತರ ಪ್ರದೇಶ: "ವಿಜೃಂಭಣೆ"ಯ ಕೃಷ್ಣ ಜನ್ಮಾಷ್ಟಮಿ ಆಚರಣೆಗೆ ಸಿಎಂ ಯೋಗಿ ಆದಿತ್ಯಾನಾಥ್ ಆದೇಶ!

ಮಕ್ಕಳ ಸರಣಿ ಸಾವಿನ ವಿಚಾರವಾಗಿ ದೇಶಾದ್ಯಂತ ಸುದ್ದಿಗೆ ಗ್ರಾಸವಾಗಿರುವ ಉತ್ತರ ಪ್ರದೇಶ ಇದೀಗ ಮತ್ತೊಂದು ವಿಚಾರಕ್ಕೆ ಸುದ್ದಿಯಾಗುತ್ತಿದ್ದು, ಸಿಎಂ ಯೋಗಿ ಆದಿತ್ಯಾನಾಥ್ ಅವರು "ವಿಜೃಂಭಣೆ"ಯ ಕೃಷ್ಣ ಜನ್ಮಾಷ್ಟಮಿ ಆಚರಣೆಗೆ ಆದೇಶ ನೀಡಿರುವುದು ಇದೀಗ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಲಖನೌ: ಮಕ್ಕಳ ಸರಣಿ ಸಾವಿನ ವಿಚಾರವಾಗಿ ದೇಶಾದ್ಯಂತ ಸುದ್ದಿಗೆ ಗ್ರಾಸವಾಗಿರುವ ಉತ್ತರ ಪ್ರದೇಶ ಇದೀಗ ಮತ್ತೊಂದು ವಿಚಾರಕ್ಕೆ ಸುದ್ದಿಯಾಗುತ್ತಿದ್ದು, ಸಿಎಂ ಯೋಗಿ ಆದಿತ್ಯಾನಾಥ್ ಅವರು "ವಿಜೃಂಭಣೆ"ಯ ಕೃಷ್ಣ  ಜನ್ಮಾಷ್ಟಮಿ ಆಚರಣೆಗೆ ಆದೇಶ ನೀಡಿರುವುದು ಇದೀಗ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.

ಗೋರಖ್ ಪುರ ಆಸ್ಪತ್ರೆಯ ಮಕ್ಕಳ ಸರಣಿ ಸಾವಿನ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿರುವ ಬೆನ್ನಲ್ಲೇ ಸಿಎಂ ಯೋಗಿ ಆದಿತ್ಯಾನಾಥ್ ಅವರು ಕೃಷ್ಣ ಜನ್ಮಾಷ್ಟಮಿಯನ್ನು "ವಿಜೃಂಭಣೆ"ಯಿಂದ ಆಚರಣೆ ಮಾಡುವಂತೆ ಆದೇಶ  ನೀಡಿರುವುದು ವಿಪಕ್ಷಗಳ ಕೆಂಗಣ್ಣಿಗೆ ಗುರಿಯಾಗಿದೆ. ಮೂಲಗಳ ಪ್ರಕಾರ ಉತ್ತರ ಪ್ರದೇಶ ಡಿಜಿಪಿ ಸುಲ್ಖಾನ್ ಸಿಂಗ್ ಅವರಿಗೆ ಸಿಎಂ ಯೋಗಿ ಆದಿತ್ಯಾನಾಥ್ ಅವರು ಈ ನಿರ್ದೇಶನ ನೀಡಿದ್ದು, "ಕೃಷ್ಣ ಜನ್ಮಾಷ್ಟಮಿ ಪ್ರಮುಖ  ಹಬ್ಬವಾಗಿದ್ದು, ಪೊಲೀಸ್ ಇಲಾಖೆ ಸಾಂಪ್ರದಾಯಿಕವಾಗಿ ಮತ್ತು ವಿಜೃಂಭಣೆಯಿಂದ ಹಬ್ಬ ಆಚರಿಸಬೇಕು. ಭಾರತೀಯ ಸಂಪ್ರದಾಯದಂತೆ ಆಚರಣೆ ನಡೆಯಬೇಕು ಎಂದು ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ.

ಸಿಎಂ ಯೋಗಿ ಆದಿತ್ಯಾನಾಥ್ ನಿರ್ದೇಶನದಂತೆಯೇ ಡಿಜಿಪಿ ಸಿಂಗ್ ಅವರೂ ಕೂಡ ಎಲ್ಲ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮತ್ತು ರೈಲ್ವೇ ಪೊಲೀಸರಿಗೆ, ರಾಜ್ಯದಲ್ಲಿ ಕಾರ್ಯ ನಿರತ ಯೋಧರಿಗೆ ಈ ಬಗ್ಗೆ ನಿರ್ದೇಶನ ನೀಡಿ  ಪತ್ರ ಬರೆದಿದ್ದಾರೆ ಎಂದು ತಿಳಿದುಬಂದಿದೆ. ಅಂತೆಯೇ ರಾಜ್ಯದ ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಕೂಡ ಈ ಬಗ್ಗೆ ಪ್ರಕಟಣೆ ಹೊರಡಿಸಿದ್ದು, ಈ ಹಿಂದಿನಂತೆಯೇ ಆಚರಣೆ ಸಾಗಲಿದೆ ಎಂದು ಸ್ಪಷ್ಟನೆ ನೀಡಿದೆ.

ವಿಪಕ್ಷಗಳ ಆಕ್ರೋಶಕ್ಕೆ ಕಾರಣವಾದ "ನಿರ್ದೇಶನ "
ಇನ್ನು ಉತ್ತರ ಪ್ರದೇಶ ಸರ್ಕಾರದ ಈ ನಿರ್ದೇಶನ ವಿಪಕ್ಷಗಳ ಆಕ್ರೋಶಕ್ಕೆ ಕಾರಣವಾಗಿದ್ದು, ಗೋರಖ್ ಪುರ ದುರಂತದಿಂದಾಗಿ ಇಡೀ ರಾಜ್ಯ ನೋವಿನಲ್ಲಿ ಮುಳುಗಿರುವಾಗ ಜನ್ಮಾಷ್ಟಮಿಯ "ವಿಜೃಂಭಣೆ"ಯ ಆಚರಣೆ ಏಕೆ ಬೇಕಿತ್ತು  ಎಂದು ಸರ್ಕಾರದ ವಿರುದ್ಧ ಕಿಡಿಕಾರಿವೆ. ಸರ್ಕಾರದ ಕ್ರಮವನ್ನು ದುರಂತ ಎಂದು ಬಣ್ಣಿಸಿರುವ ಆಮ್ ಆದ್ಮಿ ಪಕ್ಷ ಸರ್ಕಾರದ ನಡೆ ವ್ಯಂಗ್ಯಾತ್ಮಕವಾಗಿದೆ. ಮಕ್ಕಳ ಸರಣಿ ಸಾವಿನ ದುರಂತದ ಹೊರತಾಗಿಯೂ "ವಿಜೃಂಭಣೆ" ಆಚರಣೆಗೆ  ನಿರ್ದೇಶನ ನೀಡಿರುವ ಸರ್ಕಾರದ ಆದೇಶ ಸಿಎಂ ಯೋಗಿ ಆದಿತ್ಯಾನಾಥ್ ಅವರ ಮನಸ್ಸಿಗೆ ಹಿಡಿದ ಕೈಗನ್ನಡಿಯಾಗಿದೆ. ದುರಂತದ ಹೊರತಾಗಿಯೂ ಸರ್ಕಾರ ತನ್ನ ಅಜೆಂಡಾದಂತೆ ಸಾಗಿದೆ ಎಂದು ಟೀಕಿಸಿದೆ.

ಆಪ್ ಮಾತ್ರವಲ್ಲದೆ ಹಲವು ರಾಜಕೀಯ ನಾಯಕರು ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆಯಾದರೂ ಹಿಂದೂಪರ ಸಂಘಟನೆಗಳ ಆಕ್ರೋಶಕ್ಕೆ ತುತ್ತಾಗಬಹುದು ಎಂಬ ಆತಂಕದಿಂದ ಮಾಧ್ಯಮಗಳಲ್ಲಿ ಹೇಳಿಕೆ ನೀಡಲು  ಹಿಂಜರಿಯುತ್ತಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com