ಗೋರಖ್ ಪುರ ಆಸ್ಪತ್ರೆ ದುರಂತ: ಬಿಆರ್ ಡಿ ಆಸ್ಪತ್ರೆಯಲ್ಲಿ ಮತ್ತೆ 5 ಮಕ್ಕಳ ಸಾವು, ಸಾವಿನ ಸಂಖ್ಯೆ 71ಕ್ಕೆ ಏರಿಕೆ

ಉತ್ತರ ಪ್ರದೇಶದ ಗೋರಖ್ ಪುರದ ಬಿಆರ್ ಡಿ ಆಸ್ಪತ್ರೆಯಲ್ಲಿನ ಮಕ್ಕಳ ಸಾವಿನ ಸರಣಿ ಇನ್ನೂ ಮುಂದುವರೆದಿದ್ದು, ಬುಧವಾರ ಮತ್ತೆ ಐದು ಮಕ್ಕಳು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಲಖನೌ: ಉತ್ತರ ಪ್ರದೇಶದ ಗೋರಖ್ ಪುರದ ಬಿಆರ್ ಡಿ ಆಸ್ಪತ್ರೆಯಲ್ಲಿನ ಮಕ್ಕಳ ಸಾವಿನ ಸರಣಿ ಇನ್ನೂ ಮುಂದುವರೆದಿದ್ದು, ಬುಧವಾರ ಮತ್ತೆ ಐದು ಮಕ್ಕಳು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

ಆಗಸ್ಟ್ 15ರಿಂದೀಚೆಗೆ ಬಿಆರ್ ಡಿ ಆಸ್ಪತ್ರೆ ಮತ್ತೆ 14 ಮೆದುಳು ಸೋಂಕು ಪೀಡಿತ ಮಕ್ಕಳು ಬಿಆರ್ ಡಿ ಆಸ್ಪತ್ರೆಗೆ ದಾಖಲಾಗಿದ್ದು, ಈವರೆಗೂ ಆಸ್ಪತ್ರೆಯಲ್ಲಿ ಸುಮಾರು 64 ಮಂದಿ ಮೆದುಳು ಸೋಂಕು ಪೀಡಿತ ಸಮಸ್ಯೆಯಿಂದ ಚಿಕಿತ್ಸೆ  ಪಡೆಯುತ್ತಿದ್ದಾರೆ. ಈ ಪೈಕಿ ಮಂಗಳವಾರ ರಾತ್ರಿ ಮತ್ತು ಬುಧವಾರ ಬೆಳಗ್ಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದವರ ಪೈಕಿ ಮತ್ತೆ ಐದು ಮಂದಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಆ ಮೂಲಕ ಬಿಆರ್ ಡಿ ಆಸ್ಪತ್ರೆಯಲ್ಲಿ  ಸಾವನ್ನಪ್ಪಿದವರ ಸಂಖ್ಯೆ 71ಕ್ಕೆ ಏರಿಕೆಯಾದಂತಾಗಿದೆ.

ಆಸ್ಪತ್ರೆ ದಾಖಲೆಗಳ ಪ್ರಕಾರವೇ ಕಳೆದ ಜನವರಿಯಿಂದ ಈ ವರೆಗೂ ಆಸ್ಪತ್ರೆಯಲ್ಲಿ ಮೆದುಳು ಸೋಂಕಿಗೆ ಗುರಿಯಾಗಿ ಸಾವನ್ನಪ್ಪಿದವರ ಸಂಖ್ಯೆ ಬರೊಬ್ಬರಿ 144ಕ್ಕೇರಿದೆ ಎಂದು ತಿಳಿದುಬಂದಿದೆ.

ಕಳೆದ ಶುಕ್ರವಾರ ಮತ್ತು ಶನಿವಾರ ಆಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆಯಿಂದಾಗಿ ಕೇವಲ ಎರಡು ದಿನಗಳ ಅಂತರದಲ್ಲಿ 63 ಮಂದಿ ಸಾವನ್ನಪ್ಪಿದ್ದರು. ಈ ವಿಚಾರ ಇಂದಿಗೂ ದೇಶಾದ್ಯಂತ ವ್ಯಾಪಕ ಚರ್ಚೆಗೆ ಕಾರಣವಾಗಿದ್ದು, ಸಿಎಂ  ಯೋಗಿ ಆದಿತ್ಯಾನಾಥ್ ಸರ್ಕಾರಕ್ಕೆ ತೀವ್ರ ಮುಖಭಂಗವನ್ನುಂಟು ಮಾಡಿತ್ತು. ಇದೀಗ ಮತ್ತೆ ಆಸ್ಪತ್ರೆಯಲ್ಲಿ ಐದು ಮಕ್ಕಳು ಸಾವನ್ನಪ್ಪಿರುವುದು ಉತ್ತರ ಪ್ರದೇಶ ಸರ್ಕಾರಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಇನ್ನು ಪ್ರಸ್ತುತ  ಸಾವನ್ನಪ್ಪಿದವರು ಆಕ್ಸಿಜನ್ ಕೊರತೆಯಿಂದಾಗಿ ಸಾವನ್ನಪ್ಪಲು ಸಾಧ್ಯವೇ ಇಲ್ಲ. ಏಕೆಂದರೆ ಈಗಾಗಲೇ ಉತ್ತರ ಪ್ರದೇಶ ಸರ್ಕಾರ ಆಸ್ಪತ್ರೆಗೆ ಅಗತ್ಯಕ್ಕಿಂತ ಹೆಚ್ಚಾಗಿಯೇ ನಿರಂತರ ಆಕ್ಸಿಜನ್ ಪೂರೈಕೆಗೆ ವ್ಯವಸ್ಥೆ ಮಾಡಿದೆ. ಹೀಗಾಗಿ  ಪ್ರಸ್ತುತ ಸಾವನ್ನಪ್ಪಿರುವ ಮಕ್ಕಳ ಸಾವಿಗೆ ನಿಖರ ಕಾರಣ ಏನು ಎಂಬುದು ಇನ್ನಷ್ಟೇ ತಿಳಿದುಬರಬೇಕಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com