ಚಂಢೀಘಡ: ಅತ್ಯಾಚಾರ ಪ್ರಕರಣ ಸಂಬಂಧ ಸೋಮವಾರ ಬಾಬಾ ರಾಮ್ ರಹೀಂ ಸಿಂಗ್ ವಿರುದ್ಧ ಶಿಕ್ಷೆ ಪ್ರಮಾಣ ಪ್ರಕಟವಾಗುವ ಹಿನ್ನಲೆಯಲ್ಲಿ ಹರ್ಯಾಣದಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಮೊಬೈಲ್ ಇಂಟರ್ ನೆಟ್. ಎಸ್ ಎಂಎಸ್ ಸೇವೆ ಸೇರಿದಂತೆ ಡಾಂಗಲ್ ನ ಎಲ್ಲ ಸೇವೆಗಳನ್ನೂ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.
ಈ ಬಗ್ಗೆ ಸ್ವತಃ ಹರ್ಯಾಣ ಸರ್ಕಾರದ ಗೃಹ ಇಲಾಖೆಯೇ ಈ ಬಗ್ಗೆ ಆದೇಶ ನೀಡಿದ್ದು, ನಾಳೆ ಹರ್ಯಾಣ ರಾಜ್ಯದಲ್ಲಿ ಎಲ್ಲ ಬಗೆಯ ಸಂದೇಶ ರವಾನೆ ವ್ಯವಸ್ಥೆಗಳನ್ನು ಸ್ಥಗಿತಗೊಳಿಸುವಂತೆ ಸೂಚಿಸಲಾಗಿದೆ. ಅದರಂತೆ ಸಾಮೂಹಿಕ ಸಂದೇಶ ರವಾನೆ ವ್ಯವಸ್ಥೆ ವಾಟ್ಸಪ್ ನಂತಹ ಎಲ್ಲ ಬಗೆಯ ಸಂದೇಶ ರವಾನೆ ವ್ಯವಸ್ಥೆಯನ್ನು ಆಗಸ್ಚ್ 29ರ ವರೆಗೂ ರದ್ದುಗೊಳಿಸಲಾಗಿದೆ. ಅಂತೆಯೇ ರೋಹ್ಟಕ್ ಹಾಗೂ ಡೇರಾ ಸಚ್ಚಾ ಆಶ್ರಮ ಸೇರಿದಂತೆ ಸಿರ್ಸಾದಾದ್ಯಂತ ನಿಷೇಧಾಜ್ಞೆ ಮುಂದುವರೆಸಲಾಗಿದ್ದು, ನಾಳೆ ಪಂಚಕುಲ, ಸಿರ್ಸಾ ಮತ್ತು ರೋಹ್ಟಕ್ ನಲ್ಲಿನ ಎಲ್ಲ ಶಾಲಾ-ಕಾಲೇಜು ಹಾಗೂ ಎಲ್ಲ ಬಗೆಯ ಶಿಕ್ಷಣ ಸಂಸ್ಥೆಗಳಿಗೆ ರಜೆ ಘೋಷಣೆ ಮಾಡಲಾಗಿದೆ.
ಈಗಾಗಲೇ ಡೇರಾ ಸಚ್ಚಾ ಆಶ್ರಮವನ್ನು ಸೇನೆ ಸುತ್ತುವರೆದಿದ್ದು, ಆಶ್ರಮದೊಳಗೆ ಇನ್ನೂ 30 ಸಾವಿರ ಮಂದಿ ಭಕ್ತರಿದ್ದಾರೆ ಎಂದು ತಿಳಿದುಬಂದಿದೆ. ರೋಹ್ಟಕ್, ಪಂಚಕುಲದಲ್ಲಿ ನಿಷೇಧಾಜ್ಞೆ ಮುಂದುವರೆಸಲಾಗಿದ್ದು, ಅಂಬಾಲದಲ್ಲಿ 144 ಸೆಕ್ಷನ್ ಮುಂದುವರೆಸಲಾಗಿದೆ. ಸಿರ್ಸಾದಲ್ಲಿ ಮುಂಜಾಗ್ರತಾ ಕ್ರಮವಾಗಿ ಕರ್ಫ್ಯೂ ಮುಂದುವರೆಸಲಾಗಿದ್ದು, ಶಿಕ್ಷೆ ಪ್ರಮಾಣದ ಹಿನ್ನಲೆಯಲ್ಲಿ ಇಡೀ ದಿನ ಕರ್ಫ್ಯೂ ಮುಂದುವರೆಸಲಾಗುತ್ತದೆ ಎಂದು ಹರ್ಯಾಣ ಡಿಸಿಪಿ ಹೇಳಿದ್ದಾರೆ.
Advertisement