ಚಂಡೀಘಢ: ಅತ್ಯಾಚಾರ ಪ್ರಕರಣದಲ್ಲಿ ದೋಷಿ ಎಂದು ಸಾಬೀತಾಗಿರುವ ಡೇರಾ ಸಚ್ಚಾ ಸೌದಾ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಮ್ ಸಿಂಗ್ ಶಿಕ್ಷೆ ಪ್ರಮಾಣವನ್ನು ಸೋಮವಾರ ಸಿಬಿಐ ವಿಶೇಷ ನ್ಯಾಯಾಲಯ ಪ್ರಕಟಿಸಲಿದ್ದು, ಮುಂಜಾಗ್ರತಾ ಕ್ರಮವಾಗಿ ಸಿರ್ಸಾದಲ್ಲಿ ಕರ್ಫ್ಯೂ ಮುಂದುವರೆಸಲಾಗಿದೆ.
ಶಿಕ್ಷೆಯ ಪ್ರಮಾಣ ಪ್ರಕಟಿಸುವ ಒಂದು ದಿನ ಮೊದಲೇ ಡೇರಾ ಮುಖ್ಯ ಆಶ್ರಮ ಇರುವ ಸಿರ್ಸಾದಲ್ಲಿ ಕರ್ಫ್ಯೂ ಜಾರಿಗೊಳಿಸಲಾಗಿದ್ದು, ಕಳೆದ ಆಗಸ್ಟ್ 24ರಂದು ಸಿರ್ಸಾದಲ್ಲಿ ಕಫ್ಯೂ ಜಾರಿಗೊಳಿಸಲಾಗಿತ್ತಾದರೂ ಭಾನುವಾರ ಬೆಳಿಗ್ಗೆ 6ರಿಂದ 11 ಗಂಟೆಯವರೆಗೆ ಕರ್ಫ್ಯೂ ಸಡಿಲಿಸಲಾಗಿತ್ತು. ಜನಸಾಮಾನ್ಯರು ಅಗತ್ಯ ವಸ್ತುಗಳನ್ನು ಕೊಳ್ಳಲೆಂದು 5 ಗಂಟೆಗಳ ಕಾಲ ಕರ್ಫ್ಯೂ ಸಡಿಲಿಸಲಾಗಿತ್ತು. ಬೆಳಿಗ್ಗೆ 11 ಗಂಟೆಯ ಬಳಿಕ ಮತ್ತೆ ಕರ್ಫ್ಯೂ ಹೇರಲಾಗಿದೆ. ಕರ್ಫ್ಯೂ ಸಡಿಲಿಸಿದ್ದ ಅವಧಿಯಲ್ಲಿ ಸಿರ್ಸಾದಲ್ಲಿ ಡೇರಾ ಬೆಂಬಲಿಗರು ವಾಹನಗಳ ಮೇಲೆ ಕಲ್ಲು ತೂರಿದ ವರದಿಯಾಗಿದೆ.
ಈ ಹಿನ್ನಲೆಯಲ್ಲಿ ನ್ಯಾಯಾಲಯ ಶಿಕ್ಷೆಯ ಪ್ರಮಾಣ ಪ್ರಕಟಿಸುವ ದಿನವಾದ ಸೋಮವಾರವೂ ಹಿಂಸಾಚಾರ ನಡೆಯಬಹುದು ಎಂಬ ಕಾರಣಕ್ಕೆ ಪಂಚಕುಲಾ, ಸಿರ್ಸಾ ಸೇರಿದಂತೆ ಹಲವು ಕಡೆ ಬಿಗಿ ಭದ್ರತೆ ಏರ್ಪಡಿಸಲಾಗಿದೆ. ಸಿರ್ಸಾದಲ್ಲಿ ಸೇನೆಯ ನಾಲ್ಕು ತುಕಡಿಗಳನ್ನು ಡೇರಾ ಮುಖ್ಯ ಆಶ್ರಮದ ಹೊರಗೆ ನಿಯೋಜಿಸಲಾಗಿದೆ. ಸೇನೆಯ ತುಕಡಿಗಳ ಜತೆಗೆ ಅರೆಸೇನಾ ಪಡೆ ಹಾಗೂ ಭಾರೀ ಸಂಖ್ಯೆಯ ಪೊಲೀಸರು ಸಿರ್ಸಾದಲ್ಲಿ ಭದ್ರತೆಗಾಗಿ ನಿಯೋಜನೆಗೊಂಡಿದ್ದಾರೆ.
ಪ್ರಧಾನ ಆಶ್ರಮದಿಂದ ಸಾವಿರಾರು ಡೇರಾಗಳ ತೆರವು!
ಇನ್ನು ಇದೇ ವೇಳೆ ಸಿರ್ಸಾದಲ್ಲಿದಲ್ಲಿರುವ ಡೇರಾ ಸಚ್ಚಾ ಪ್ರಧಾನ ಆಶ್ರಮದಲ್ಲಿದ್ದ ಸಾವಿರಾರು ಅನುಯಾಯಿಗಳನ್ನು ತೆರವುಗೊಳಿಸಲಾಗಿದ್ದು, ಕೆಲವರನ್ನು ಬಲವಂತವಾಗಿ ತೆರವುಗೊಳಿಸಿದ್ದರೆ, ಮತ್ತೆ ಕೆಲವರು ತಾವಾಗಿಯೇ ಪೊಲೀಸರ ರಕ್ಷಣೆಯಲ್ಲಿ ಆಶ್ರಮ ತೊರೆದಿದ್ದಾರೆ ಎಂದು ತಿಳಿದುಬಂದಿದೆ. ಚೆರವು ಕಾರ್ಯಾಚರಣೆ ಇನ್ನೂ ನಡೆಯುತ್ತಿದ್ದು, ಅಧಿಕಾರಿಗಳು ಬೆಳಗ್ಗೆ ಹೊತ್ತಿಗೆ ಆಶ್ರಮದಲ್ಲಿರುವ ಬಹುತೇಕ ಅನುಯಾಗಳನ್ನು ತೆರವುಗೊಳಿಸುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
Advertisement