ಇಂದು ಮಧ್ಯಾಹ್ನ 2.30ರ ಸುಮಾರಿಗೆ ನ್ಯಾಯಾಲಯ ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸುತ್ತಿದೆ. ರಾಮ್ ರಹೀಮ್ ರನ್ನು ದೋಷಿ ಎಂದು ನ್ಯಾಯಾಲಯ ತೀರ್ಪು ಪ್ರಕಟಿಸಿದ ಬಳಿಕ ಹೊತ್ತಿ ಉರಿಯುತ್ತಿದ್ದ ಹರಿಯಾಣ ಮತ್ತು ಪಂಜಾಬ್'ನಲ್ಲಿ ಗಲಭೆ ನಿಯಂತ್ರಣಕ್ಕೆ ಬಂದಿದ್ದು, ಆದರೂ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ. ಇಂದು ನ್ಯಾಯಾಲಯ ಶಿಕ್ಷೆ ಪ್ರಮಾಣವನ್ನು ಪ್ರಕಟಣೆ ಮಾಡುತ್ತಿರುವ ಹಿನ್ನಲೆಯಲ್ಲಿ ಹಿಂಸಾಚಾರ ಮರುಕಳಿಸುವ ಸಾಧ್ಯತೆಗಳಿದ್ದು, ಹರಿಯಾಣ, ಪಂಜಾಬ್, ಉತ್ತರಪ್ರದೇಶದ ಗಡಿಗಳಲ್ಲಿ ಹೈಅಲರ್ಟ್ ಘೋಷಣೆ ಮಾಡಲಾಗಿದೆ.
ಇನ್ನು ರೊಹ್ಟಕ್ ನಲ್ಲಿ 15 ಸಾವಿರಕ್ಕೂ ಹೆಚ್ಚು ಡೇರಾ ಭಕ್ತರು ಹಿಂಸೆ ನಡೆಸಲು ಅಲ್ಲಲ್ಲಿ ಅವಿತು ಕುಳಿತಿರುವ ಮಾಹಿತಿಗಳು ಲಭ್ಯವಾಗಿರುವ ಹಿನ್ನಲೆಯಲ್ಲಿ ಭಾರೀ ಎಲ್ಲೆಡೆ ಭಾರೀ ಭದ್ರತೆಗಳನ್ನು ಒದಗಿಸಲಾಗಿದೆ. ಈ ನಡುವೆ ರೊಹ್ಟಕ್ ನಲ್ಲಿ ಹಿಂಸಾಚಾರ ಸೃಷ್ಟಿಸುವವರ ಮೇಲೆ ಕಂಡಲ್ಲಿ ಗುಂಡು ಹಾರಿಸುವಂದೆ ಆದೇಶವನ್ನೂ ಹೊರಡಿಸಲಾಗಿದೆ ಎಂದು ಹೇಳಲಾಗತ್ತಿದೆ.
ಶುಕ್ರವಾರದಂಥಹ ಹಿಂಸಾತ್ಮಕ ಘಟನೆಗಳು ಮರುಕಳಿಸದಂತೆ ಮುಂಜಾಗ್ರತಾ ಕ್ರಮವಾಗಿ ರೊಹ್ಟಕ್ ಜಿಲ್ಲೆಯಲ್ಲಿ 144ನೇ ಕಲಂನ ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಬಾಬಾ ಇರುವ ರೊಹ್ಟಕ್ ನ ಸುನಾರಿಯಾ ಜೈಲಿನ ಹೊರಗೆ ಸೆಕ್ಯುರಿಟಿ ಬ್ಯಾರಿಕೇಡ್ ಗಳನ್ನು ಹಾಕಲಾಗಿದೆ. ಅಲ್ಲಿ ಬಾಬಾ ಭಕ್ತರಿಗಾಗಲೀ, ಸಾರ್ವಜನಿಕರಿಗಾಗಲಿ ಪ್ರವೇಶವನ್ನು ನಿರ್ಬಂಧಿಸಲಾಗಿದೆ.
ಎಡಿಜಿಪಿ ಅನಂದ್ ಕುಮಾರ್ ಅವರು ಮಾತನಾಡಿ, ಡೇರಾ ಸಚ್ಚಾ ಆಶ್ರಮದ ಸುತ್ತಲೂ ಭದ್ರತೆಯನ್ನು ನೀಡಲಾಗಿದ್ದು, ಆಗ್ರಾ, ಮೀರುತ್ ಹಾಗೂ ಉತ್ತರಪ್ರದೇಶದ ಗಡಿಗಳಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ. ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಅಗತ್ಯ ಬಿದ್ದರೆ ಸೆಕ್ಷನ್ 144 ಜಾರಿ ಮಾಡುವಂತೆಯೂ ಅಧಿಕಾರಿಗಳಿಗೆ ಸೂಚನೆ ಮಾಡಲಾಗಿದೆ. ದೆಹಲಿ ಹಾಗೂ ಹರಿಯಾಣ ಗಡಿಗಳಲ್ಲಿ ಹೆಚ್ಚಿನ ಕಣ್ಗಾವಲಿರಿಸುವಂತೆ ಸೂಚನೆ ನೀಡಲಾಗಿದೆ. ಗಡಿಯಿಂದ ಬರುವ ಪ್ರತೀ ವಾಹನವನ್ನು ತಪಾಸಣೆಗೊಳಪಡಿಸಲಾಗುತ್ತಿದೆ ಎಂದು ಹೇಳಿದ್ದಾರೆ.
ಭದ್ರತಾ ಕಾರಣಗಳಿಗಾಗಿ ಬಾಬಾನನ್ನು ಪಂಚಕುಲ ನ್ಯಾಯಾಲಯಕ್ಕೆ ಕರೆತರಲಾಗುತ್ತಿಲ್ಲ. ಬದಲಾಗಿ ಸಿಬಿಐ ವಿಶೇಷ ನ್ಯಾಯಾಧೀಶ ನ್ಯಾ. ಜಗದೀಪ್ ಸಿಂಗ್ ಅವರನ್ನೇ ಸುರಕ್ಷತೆ ದೃಷ್ಟಿಯಿಂದ ಹೆಲಿಕಾಪ್ಟರ್ ನಲ್ಲಿ, ಬಾಬ್ ಇರುವ ರೊಹ್ಟಕ್ ಜಿಲ್ಲಾ ಕಾರಾಗೃಹಕ್ಕೆ ಕರೆತರಲಾಗುತ್ತಿದೆ. ಅಲ್ಲಿಯೇ ವ್ಯವಸ್ಥೆ ಮಾಡಲಾಗಿರುವ ತಾತ್ಕಾಲಿಕ ನ್ಯಾಯಾಲಯ ಕೊಠಿಯಲ್ಲಿ ವಾದ-ಪ್ರತಿವಾದಗಳನ್ನು ಆಲಿಸಿ ನ್ಯಾಯಾಧೀಶರು ಶಿಕ್ಷೆ ಪ್ರಮಾಣವನ್ನು ಪ್ರಕಟಿಸಲಿದ್ದಾರೆ. ರಾಮ್ ರಹೀಮ್ ಗೆ ಕನಿಷ್ಟ 7 ವರ್ಷದಿಂದ ಹಿಡಿದು ಗರಿಷ್ಟ ಜೀವಾವಧಿವರೆಗೆ ಶಿಕ್ಷೆ ಆಗಬಹುದಾಗಿದೆ.
2002ರಲ್ಲಿ ದಾಖಲಾಗದ ದೂರಿನಂತೆ, ಇಬ್ಬರು ಸಾಧ್ವಿಯರ ಮೇಲೆ ಅತ್ಯಾಚಾರವೆಸಗಿದ ಪ್ರಕರಣದಲ್ಲಿ ಶುಕ್ರವಾರವಷ್ಟೇ ನ್ಯಾಯಾಲಯವು ಬಾಬಾನ್ನು ದೋಷಿ ಎಂದು ತೀರ್ಪು ಪ್ರಕಟಿಸಿತ್ತು.