ಹಲವು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ರಸ್ತೆಗಳಲ್ಲಿ ಸೊಂಟದ ವರೆಗೂ ನೀರು ತುಂಬಿಕೊಂಡು ರಸ್ತೆಗಳು ನದಿಯಂತೆ ಕಾಣಿಸುತ್ತಿವೆ. ಭಾರೀ ಮಳೆಯಿಂದಾಗಿ ಸಂಭವಿಸಿದ ಅವಾಂತರಗಳಲ್ಲಿ ಈ ವರೆಗೂ 3 ಜನರು ಸಾವನ್ನಪ್ಪಿದ್ದು, ನಗರ ಜನತೆಯ ಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.
ಆಸ್ಪತ್ರೆ, ಮನೆಗಳಿಗೆ ನೀರು ನುಗ್ಗಿರುವುದರಿಂದ ಹಾಗೂ ರಸ್ತೆ, ರೈಲು, ವಿಮಾನ ಸಂಚಾರ ಅಸ್ತವ್ಯಸ್ತವಾಗಿರುವುದರಿಂದ ಮುಂಬೈ ಜನರೆ ಭಾರೀ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.
ಸೋಮವಾರ ರಾತ್ರಿಯಿಂದ ಮಳೆಯಿಂದ ಮಳೆಯಾಗುತ್ತಿದೆ. ಆದರೂ, ಮಂಗಳವಾರ ಬೆಳಿಗ್ಗೆ 8.30ರಿಂದ ಮಧ್ಯಾಹ್ನ 12ರವರೆಗೆ ಸುರಿದ 8.5ಸೆಂ.ಮೀ ನಷ್ಟು ಧಾರಾಕಾರ ಮಳೆ ಭಾರೀ ಅವಾಂತರಗಳಿಗೆ ಕಾರಣವಾಗಿದೆ. ನಿನ್ನೆ ಮುಂಬೈನಲ್ಲಿ ಒಟ್ಟಾರೆ 9 ತಾಸುಗಳ ಕಾಲಾವಧಿಯಲ್ಲಿ 30 ಸೆಂ.ಮೀನಷ್ಟು ಮಳೆಯಾಗಿದೆ. ಇದು ಸರಾಸರಿ ಮಳೆಯ ಪ್ರಮಾಣಕ್ಕಿಂತ 9 ಪಟ್ಟು ಅಧಿಕ ಎಂದು ಹೇಳಲಾಗುತ್ತಿದೆ. 12 ವರ್ಷಗಳಲ್ಲೇ ಇದು ಭೀಕರ ಮಳೆ ಎಂಬ ವಿಶ್ಲೇಷಣೆಗಳೂ ಕೇಳಿಬರುತ್ತಿವೆ.
2005ರಲ್ಲಿ 24 ಗಂಟೆಗಳಲ್ಲಿ 96 ಸೆಂ.ಮೀ ನಷ್ಟು ಮಳೆಯಾಗಿದ್ದರಿಂದ ಮುಂಬೈ ಅಲ್ಲೋಲ-ಕಲ್ಲೋಲವಾಗಿ ಸುಮಾರು 500ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದರು. ಈಗಾಗಲೇ ಮುಂಬೈನ ರಸ್ತೆಗಳು ನದಿಯಂತಾಗಿದ್ದು ಮುಂದಿನ 24 ತಾಸುಗಳಲ್ಲಿ ಮತ್ತಷ್ಟು ಭಾರೀ ಮಳೆಯಾಗುವ ಸಂಭವವಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಹವಾಮಾನ ಇಲಾಖೆ ಅಧಿಕಾರಿಗಳ ಮುನ್ಸೂಚನೆ ಇದೀಗ ಮುಂಬೈ ಜನತೆಯಲ್ಲಿ ಮತ್ತಷ್ಟು ಭೀತಿಯನ್ನುಂಟು ಮಾಡಿದೆ. ತುರ್ತು ಅಗತ್ಯವಿದ್ದರೆ ಮಾತ್ರ ಮನೆಯಿಂದ ಹೊರಬನ್ನಿ. ಇಲ್ಲವಾದರೆ ಮನೆಯ ಒಳಗೇ ಇರಿ ಎಂದು ಸರ್ಕಾರ ಹಾಗೂ ಬೃಹತ್ ಮುಂಬೈ ಮಹಾನಗರ ಪಾಲಿಕೆಯ ಅಧಿಕಾರಿಗಳು ಜನತೆಯ ಬಳಿ ಮನವಿ ಮಾಡಿಕೊಂಡಿದ್ದಾರೆ.
ಭಾರೀ ಮಳೆಯಿಂದಾಗಿ ಶಾಲಾ-ಕಾಲೇಜುಗಳಿಗೆ ರಜೆಯನ್ನು ಘೋಷಣೆ ಮಾಡಲಾಗಿದ್ದು, ರಜೆ ಇಂದೂ ಕೂಡ ಮುಂದುವರೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ನಡುವೆ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಜೊತೆಗೆ ದೂರವಾಣಿ ಸಂಭಾಷಣೆ ನಡೆಸಿರುವ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಎಲ್ಲಾ ರೀತಿಯ ನೆರವು ನೀಡುವುದಾಗಿ ಭರವಸೆ ನೀಡಿದ್ದಾರೆಂದು ತಿಳಿದುಬಂದಿದೆ.
ಮುಂಬೈನ ಮಳೆ ನೀರು ಸಂಪೂರ್ಣವಾಗಿ ಸಮುದ್ರ ಸೇರುತ್ತದೆ. ಭಾರೀ ಗಾಳಿಯಿಂದಾಗಿ ಸಮುದ್ರದಲ್ಲಿ ಅಲೆಗಳ ಅಬ್ಬರ ಜೋರಾಗಿದೆ. ಹೀಗಾಗಿ ಮಳೆ ನೀರು ಸಮುದ್ರದೊಳಕ್ಕೆ ಹೋಗುತ್ತಿಲ್ಲ. ಆದಕಾರಣ ರಸ್ತೆಗಳು ಜಲಾವೃತಗೊಂಡಿವೆ. ಅಲೆಗಳ ಅಬ್ಬರ ಕಡಿಮೆಯಾದ ಬಳಿಕ ಪ್ರವಾಹ ಪರಿಸ್ಥಿತಿ ತಗ್ಗಬಹುದು.
ಆದಾಗ್ಯೂ ಬೃಹತ್ ಮುಂಬೈ ಮಹಾನಗರ ಪಾಲಿಕೆ 9 ಸಾವಿರ ಪಂಪ್ ಸೆಟ್ ಗಳನ್ನು ಬಳಸಿ ನೀರನ್ನು ಹೊರಹಾಕಲು ಯತ್ನಿಸುತ್ತಿದೆಯಾದರೂ ಫಲ ನೀಡಿಲ್ಲ. ಹಲವಾರು ಮರಗಳು ಧರೆಗುರುಳಿವೆ. ಸಾಕಷ್ಟು ವಾಹನಗಳು ಜಖಂಗೊಂಡಿವೆ. ರಸ್ತೆ, ರೈಲು ಸಂಚಾರ ಸ್ಥಗಿತಗೊಡಿದ್ದು ಕೊಡೆ ಹಿಡಿದುಕೊಂಡೇ ಜನರು ಸುರಿವ ಮಳೆಯಲ್ಲೇ ತಮ್ಮ ತಮ್ಮ ಮನೆಗಳನ್ನು ತಲುಪುತ್ತಿದ್ದಾರೆ.