ಮದುರೈನಲ್ಲಿದ್ದಾರೆ 75 ಬ್ಲೂ ವೇಲರ್ ಗಳು: ಪೊಲೀಸರಿಂದ ಆಘಾತಕಾರಿ ಮಾಹಿತಿ!

ಡೆಡ್ಲಿ ಬ್ಲೂ ವೇಲ್ ಭೂತಕ್ಕೆ ಬಲಿಯಾದ ವಿದ್ಯಾರ್ಥಿಗಳ ಸಂಖ್ಯೆ ಏರಿಕೆಯಾಗುತ್ತಿರುವ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ತಮಿಳುನಾಡು ಪೊಲೀಸರು ಬ್ಲೂ ವೇಲ್ ಗೇಮ್ ಆಡುತ್ತಿರುವ ಬ್ಲೂ ವೇಲರ್ ಗಳ ಮೇಲೆ ಕಣ್ಣಿಟ್ಟಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಮಧುರೈ: ಡೆಡ್ಲಿ ಬ್ಲೂ ವೇಲ್ ಭೂತಕ್ಕೆ ಬಲಿಯಾದ ವಿದ್ಯಾರ್ಥಿಗಳ ಸಂಖ್ಯೆ ಏರಿಕೆಯಾಗುತ್ತಿರುವ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ತಮಿಳುನಾಡು ಪೊಲೀಸರು ಬ್ಲೂ ವೇಲ್ ಗೇಮ್ ಆಡುತ್ತಿರುವ ಬ್ಲೂ ವೇಲರ್ ಗಳ ಮೇಲೆ ಕಣ್ಣಿಟ್ಟಿದ್ದಾರೆ.

ಈ ಬಗ್ಗೆ ಸಾಕಷ್ಟು ದಿನಗಳಿಂದ ತನಿಖೆ ನಡೆಸುತ್ತಿರುವ ಪೊಲೀಸರಿಗೆ ಸಾಕಷ್ಟು ಮಾಹಿತಿ ಗಳು ಲಭ್ಯವಾಗಿದ್ದು, ಮಧುರೈ ನಗರವೊಂದರಲ್ಲೇ 75 ಮಂದಿ ಬ್ಲೂ ವೇಲರ್ ಗಳು ಇದ್ದಾರೆ ಎಂಬ ಆಘಾತಕಾರಿ ಮಾಹಿತಿ ಲಭ್ಯವಾಗಿದೆ. ತಮಿಳುನಾಡು ಸೈಬರ್ ಪೊಲೀಸರ ನೆರವಿನೊಂದಿಗೆ ಪೊಲೀಸರು ಈ ತನಿಖೆ ನಡೆಸುತ್ತಿದ್ದಾರೆ ಎಂದು ಹೇಳಲಾಗಿದ್ದು, ಮಧುರೈ ನಗರದಲ್ಲಿ ಸುಮಾರು 75 ವಿದ್ಯಾರ್ಥಿಗಳು ಈ ಡೆಡ್ಲಿ ಗೇಮ್ ಗೆ ಅಂಟಿಕೊಂಡಿದ್ದಾರೆ ಎಂದು ಹೇಳಲಾಗಿದೆ.

ನಿನ್ನೆ ಸಾವಿಗೀಡಾಗಿದ್ದ ವಿದ್ಯಾರ್ಥಿ ವಿಘ್ನೇಶ್ ನ ಮೊಬೈಲ್ ಪರಿಶೀಲನೆ ನಡೆಸಿದ ಪೊಲೀಸರು ಮೊಬೈಲ್ ನಿಂದ ಸಾಕಷ್ಟು ದತ್ತಾಂಶಗಳನ್ನು ಪಡೆದುಕೊಂಡಿದ್ದು, ಈ ದತ್ತಾಂಶಗಳ ಮೇಲಿನ ತನಿಖೆ ವೇಳೆ ಈ ವಿಚಾರ ಬಹಿರಂಗವಾಗಿದೆ. ಬ್ಲೂ ಗೇಮ್ ವಿಚಾರವಾಗಿಯೇ ವಿಘ್ನೇಶ್ ವಾಟ್ಸಪ್ ಗ್ರೂಪ್ ಒಂದನ್ನು ನಿರ್ವಹಣೆ ಮಾಡುತ್ತಿದ್ದು, ಗ್ರೂಪ್ ನಲ್ಲಿ ಸುಮಾರು 75 ಮಂದಿ ಸದಸ್ಯರಿದ್ದಾರೆ. ಈ ಎಲ್ಲ ಸದಸ್ಯರೂ ಬ್ಲೂ ವೇಲ್ ಗೇಮ್ ಗೆ ಅಡಿಕ್ಟ್ ಆಗಿದ್ದು, ಗ್ರೂಪ್ ನಲ್ಲಿ ಗೇಮ್ ಬಗ್ಗೆ ಚರ್ಚೆ ನಡೆಸಿದ್ದಾರೆ ಎಂದು ಮದುರೈ ಪೊಲೀಸ್ ಸೂಪರಿಂಟೆಂಡ್ ಎನ್ ಮಣಿವಣ್ಣನ್ ಹೇಳಿದ್ದಾರೆ.

ವಿಘ್ನೇಶ್ ಕಳೆದ 50 ದಿನಗಳಿಂದ ಈ ಬ್ಲೂವೇಲ್ ಗೇಮ್ ಆಡುತ್ತಿದ್ದನಂತೆ. ಇದೇ ವೇಳೆ ಮಧುರೈ ಪೊಲೀಸರು ಬ್ಲೂ ವೇಲ್ ಗೇಮ್ ನಿಯಂತ್ರಣಕ್ಕಾಗಿ ಪ್ರತ್ಯೇಕ ವಿಭಾಗ ತೆರೆದಿದ್ದು, ಸಹಾಯಕ ಪೊಲೀಸ್ ಸೂಪರಿಟೆಂಟ್ ಕಲಾವತಿ ಅವರು ಈ ವಿಭಾಗದ ಮೇಲುಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ. ಈ ವಿಭಾಗದ ಮೂಲಕ ವಿದ್ಯಾರ್ಥಿಗಳಲ್ಲಿ ಬ್ಲೂವೇಲ್ ಚಾಲೆಂಜ್ ಬಗ್ಗೆ ಜಾಗೃತಿ ಮೂಡಿಸುವುದು ಮತ್ತು ಬ್ಲೂವೇಲ್ ಗೇಮ್ ಗೆ ಅಂಟಿಕೊಂಡಿರುವ ವಿದ್ಯಾರ್ಥಿಗಳಿಗೆ ಕೌನ್ಸೆಲಿಂಗ್ ನೀಡುವುದು ಈ ವಿಭಾಗದ ಮುಖ್ಯ ಉದ್ದೇಶವಾಗಿದೆ. ಅಂತೆಯೇ ಈ ಬಗ್ಗೆ ಇನ್ನು 10 ದಿನಗಳಲ್ಲಿ ಮೆಗಾ ಆನ್ ಲೈನ್ ಜಾಗೃತಿ ಅಭಿಯಾನವನ್ನೂ ಕೂಡ ನಡೆಸುವುದಾಗಿ ಮಣಿವಣ್ಣನ್ ಹೇಳಿದ್ದಾರೆ.

ಆನ್ ಲೈನ್ ಹ್ಯಾಕರ್ ಗಳು ವಿದ್ಯಾರ್ಥಿಗಳು ಗೇಮ್ ಗೆ ಅಂಟಿಕೊಳ್ಳುತ್ತಿದ್ದಾರೆ ಎಂದು ತಿಳಿಯುತ್ತಿದ್ದಂತೆಯೇ ಅವರಿಗೆ ಸವಾಲೆನಿಸುವ ಟಾಸ್ಕ್ ನೀಡುತ್ತಿದ್ದಾರೆ. ಅಲ್ಲದೆ ಪೇಸ್ ಬುಕ್, ಟ್ವಿಟರ್ ನಂತಹ ಸಾಮಾಜಿಕ ಜಾಲತಾಣಗಳಲ್ಲಿ ಬ್ಲೂ ವೇಲ್ ಗೇಮ್ ನ ಲಿಂಕ್ ಹರಿ ಬಿಡುವ ಮೂಲಕ ವಿದ್ಯಾರ್ಥಿಗಳನ್ನು ಬ್ಲೂ ವೇಲ್ ಜಾಲಕ್ಕೆ ಸೆಳೆಯುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com