ಏಷ್ಯಾದಲ್ಲಿ ಭಾರತ ಅತ್ಯಂತ ಭ್ರಷ್ಟ ದೇಶ: ಫೋರ್ಬ್ಸ್ ವರದಿ

ಜಾಗತಿಕ ಮಟ್ಟದ ಸಂಸ್ಥೆಯಾದ ಭ್ರಷ್ಟಾಚಾರ ನಿಗ್ರಹ ನಾಗರಿಕ ಸೊಸೈಟಿ ಟ್ರಾನ್ಸರೆನ್ಸಿ ಇಂಟರ್ ನ್ಯಾಷನಲ್ ....
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ನವದೆಹಲಿ: ಜಾಗತಿಕ ಮಟ್ಟದ ಸಂಸ್ಥೆಯಾದ ಭ್ರಷ್ಟಾಚಾರ ನಿಗ್ರಹ ನಾಗರಿಕ ಸೊಸೈಟಿ ಟ್ರಾನ್ಸರೆನ್ಸಿ ಇಂಟರ್ ನ್ಯಾಷನಲ್ ನಡೆಸಿರುವ ಸಮೀಕ್ಷೆ ಪ್ರಕಾರ, ಏಷ್ಯಾ ಖಂಡದಲ್ಲಿ ಭಾರತ ಅತ್ಯಂತ ಭ್ರಷ್ಟ ದೇಶವಾಗಿದೆ.
ಕಳೆದ ಮಾರ್ಚ್ ತಿಂಗಳಲ್ಲಿ ಈ ಸಮೀಕ್ಷೆ ಪ್ರಕಟವಾಗಿದ್ದು, ಫೋರ್ಬ್ಸ್ ನ ಅಧಿಕೃತ ಟ್ವಿಟ್ಟರ್ ಪುಟದಲ್ಲಿ ಲೇಖನವನ್ನು ಮತ್ತೊಮ್ಮೆ ಪ್ರಕಟಿಸಿದೆ.
ಭ್ರಷ್ಟಾಚಾರ ಇಡೀ ಏಷ್ಯಾದ್ಯಂತ ಎಷ್ಟು ವ್ಯಾಪಕವಾಗಿದೆ ಎಂಬುದನ್ನು ಫೋರ್ಬ್ಸ್ ಬಿಡುಗಡೆ ಮಾಡಿದ ಪಟ್ಟಿಯಿಂದ ತಿಳಿದುಬರುತ್ತದೆ. ಏಷ್ಯಾದ ಟಾಪ್ 5 ಭ್ರಷ್ಟ ರಾಷ್ಟ್ರಗಳಲ್ಲಿ ಭಾರತ ಮೊದಲ ಸ್ಥಾನದಲ್ಲಿದ್ದು ನಂತರದ ಸ್ಥಾನಗಳಲ್ಲಿ ವಿಯೆಟ್ನಾಂ, ಥೈಲ್ಯಾಂಡ್, ಪಾಕಿಸ್ತಾನ ಮತ್ತು ಮ್ಯಾನ್ಮಾರ್ ದೇಶಗಳಿವೆ.
ಭಾರತದಲ್ಲಿ ಶೇಕಡಾ 69ರಷ್ಟು ಲಂಚದ ಪ್ರಮಾಣವಿದೆ. ಸಾರ್ವಜನಿಕ ಸೇವೆಗಳಲ್ಲಿ ಯಾವ ಮಟ್ಟದಲ್ಲಿ ಲಂಚ ಪಡೆಯಲಾಗುತ್ತದೆ ಎಂಬ ವಿಷಯದ ಆಧಾರದ ಮೇಲೆ ಈ ಪಟ್ಟಿ ತಯಾರಿಸಲಾಗಿದೆ. ಭಾರತದಲ್ಲಿ ಶಾಲೆಗಳು, ಆಸ್ಪತ್ರೆಗಳು, ಐಡಿ ದಾಖಲೆಗಳು, ಪೊಲೀಸ್ ಮತ್ತು ಉಪಯೋಗದ ಸೇವೆಗಳಲ್ಲಿ ಅರ್ಧಕ್ಕೂ ಹೆಚ್ಚು ಪ್ರಮಾಣದಲ್ಲಿ ಲಂಚ ನೀಡಬೇಕಾಗುತ್ತದೆ ಎಂದು ಸಮೀಕ್ಷೆಯಿಂದ ತಿಳಿದುಬಂದಿದೆ.
ಭ್ರಷ್ಟಾಚಾರದ ವಿರುದ್ಧ ಹೋರಾಡುವ ಭಾರತದ ಪ್ರಧಾನಿ ನರೇಂದ್ರ ಮೋದಿಯವರನ್ನು ಲೇಖನದಲ್ಲಿ ಶ್ಲಾಘಿಸಲಾಗಿದೆ.
ಪ್ರಧಾನಿಯವರು ಭ್ರಷ್ಟಾಚಾರ ವಿರುದ್ಧ ಹೋರಾಡುವುದರಿಂದ ಶೇಕಡಾ 53ರಷ್ಟು ಜನರು, ಪ್ರಧಾನಿ ಒಳ್ಳೆಯದನ್ನು ಮಾಡುತ್ತಾರೆ ಎಂದು ಭಾವಿಸುತ್ತಾರೆ. ಜನರಿಗೆ ಸಶಕ್ತೀಕರಣದ ಭಾವನೆ ಬರುತ್ತದೆ. ಸಾಮಾನ್ಯ ಜನರು ಭ್ರಷ್ಟಾಚಾರದ ಪರಿಸ್ಥಿತಿಯನ್ನು ಬದಲಾಯಿಸಬಹುದು ಎಂದು ಶೇಕಡಾ 63 ಜನರು ಭಾವಿಸುತ್ತಾರೆ ಎಂದು ಸಮೀಕ್ಷೆಯಲ್ಲಿ ತಿಳಿದುಬಂದಿದೆ.
ಭಾರತದ ನಂತರ ವಿಯೆಟ್ನಾಂ ದೇಶವಿದ್ದು, ಇಲ್ಲಿ ಶೇಕಡಾ 65ರಷ್ಟು ಭ್ರಷ್ಟಾಚಾರದ ಪ್ರಮಾಣವಿದೆ ಎನ್ನಲಾಗಿದೆ.
ಭಾರತದ ನೆರೆಯ ರಾಷ್ಟ್ರ ಪಾಕಿಸ್ತಾನದಲ್ಲಿ ಶೇಕಡಾ 40ರಷ್ಟು ಲಂಚದ ಪ್ರಮಾಣವಿದೆ. ಪಾಕಿಸ್ತಾನದಲ್ಲಿ ನಾಲ್ಕರಲ್ಲಿ ಮೂರರಷ್ಟು ಅಥವಾ ಎಲ್ಲ  ಪೊಲೀಸರು ಭ್ರಷ್ಟರಾಗಿದ್ದಾರೆ. ಕೋರ್ಟ್ ಅಥವಾ ಪೊಲೀಸರ ಬಳಿಗೆ ಸಮಸ್ಯೆ ಹೇಳಿಕೊಂಡು ಹೋದ 10ರಲ್ಲಿ ಏಳು ಮಂದಿ ಪಾಕಿಸ್ತಾನದಲ್ಲಿ ಲಂಚ ಕೊಡಬೇಕಾಗುತ್ತದೆ. ಈ ಪರಿಸ್ಥಿತಿ ಬದಲಾಗಬಹುದೆಂದು ಜನರು ಭಾವಿಸುವುದಿಲ್ಲ. 
ಟ್ರಾನ್ಪರೆನ್ಸಿ ಇಂಟರ್ ನ್ಯಾಷನಲ್ ಸಂಸ್ಥೆ 18 ತಿಂಗಳ ಕಾಲ ಸಮೀಕ್ಷೆ ನಡೆಸಿದ್ದು ಏಷ್ಯಾ ಫೆಸಿಫಿಕ್ ನ 16 ದೇಶಗಳಲ್ಲಿ ಸುಮಾರು 20,000 ಮಂದಿ ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದರು. 
ಬರ್ಲಿನ್ ಮೂಲದ ಭ್ರಷ್ಟಾಚಾರವನ್ನು ಪರೀಕ್ಷಿಸುವ ಸಂಸ್ಥೆ ಕಳೆದ ವರ್ಷ ಭ್ರಷ್ಟಾಚಾರ ಸೂಚ್ಯಂಕದಲ್ಲಿ 168 ದೇಶಗಳಲ್ಲಿ ಭಾರತಕ್ಕೆ 76ನೇ ಸ್ಥಾನ ನೀಡಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com