ಮೋದಿ ಪ್ರಚಾರಕ್ಕಾಗಿ 21 ಸಾವಿರ ಕೋಟಿ ವ್ಯರ್ಥ ಮಾಡಿದ ಕೇಂದ್ರ: ಸಾಮ್ನಾದಲ್ಲಿ ಶಿವಸೇನೆ ಟೀಕೆ

ಪ್ರಧಾನಿ ನರೇಂದ್ರ ಮೋದಿ ಅವರ ಪ್ರಚಾರಕ್ಕಾಗಿ ನೋಟು ನಿಷೇಧ ಎಂಬ ಯೋಜನೆಯಡಿ ಕೇಂದ್ರ ಸರ್ಕಾರ 21 ಸಾವಿರ ಕೋಟಿ ಪ್ರಜೆಗಳ ಹಣವನ್ನು ವ್ಯರ್ಥ ಮಾಡಿದೆ ಎಂದು ಶಿವಸೇನೆ ಕಿಡಿಕಾರಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಪ್ರಚಾರಕ್ಕಾಗಿ ನೋಟು ನಿಷೇಧ ಎಂಬ ಯೋಜನೆಯಡಿ ಕೇಂದ್ರ ಸರ್ಕಾರ 21 ಸಾವಿರ ಕೋಟಿ ಪ್ರಜೆಗಳ ಹಣವನ್ನು ವ್ಯರ್ಥ ಮಾಡಿದೆ ಎಂದು ಶಿವಸೇನೆ ಕಿಡಿಕಾರಿದೆ.

ನೋಟು ನಿಷೇಧ ಸಂಬಂಧ ಭಾರತೀಯ ರಿಸರ್ವ್ ಬ್ಯಾಂಕ್ ಇತ್ತೀಚೆಗೆ ಬಿಡುಗಡೆ ಮಾಡಿದ ವರದಿಯನ್ನಾಧರಿಸಿ ಶಿವಸೇನೆ ಮುಖವಾಣಿ ಸಾಮ್ನಾದಲ್ಲಿ ಈ ಬಗ್ಗೆ ಸಂಪಾದಕೀಯ ಬರೆಯಲಾಗಿದ್ದು, ಇಡೀ ನೋಟು ನಿಷೇಧ ಪ್ರಹಸನವೇ ಪ್ರಧಾನಿ ನರೇಂದ್ರ ಮೋದಿ ಅವರ ಪ್ರಚಾರಕ್ಕಾಗಿ ನಡೆದ ಯೋಜನೆಯಾಗಿದೆ ಎಂದು ಕಿಡಿಕಾರಿದೆ.

ತನ್ನ ಲೇಖನದಲ್ಲಿ ಆರ್ ಬಿಐ ವರದಿಯನ್ನು ಉಲ್ಲೇಖಿಸಿರುವ ಸಾಮ್ನಾ, ನೋಟು ನಿಷೇಧ ಬಳಿಕ ಆರ್ ಬಿಐಗೆ ಶೇ.99ರಷ್ಟು ಹಳೆಯ ನೋಟುಗಳು ವಾಪಸ್ ಆಗಿವೆ. ಆದರೆ ಶೇ.1ರಷ್ಟು ಹಣ ಮಾತ್ರ ಇನ್ನೂ ವಾಪಸ್ ಬಂದಿಲ್ಲ. ಈ ಶೇ.1ರಷ್ಟು ಹಣ ಯಾರದ್ದು ಎಂದರೆ, ಬ್ಯಾಂಕ್ ಗಳ ಮುಂದೆ ಕ್ಯೂ ನಿಲ್ಲಲಾಗದೇ ಹತಾಶರಾದ ಬಡವರದ್ದಾಗಿದೆ ಎಂದು ಹೇಳಿದೆ. ಅಂತೆಯೇ ಕಪ್ಪುಹಣ ಮುಂಬೈನಂತಹ ಮಹಾನಗರಗಳಲ್ಲಿ ರಿಯಲ್ ಎಸ್ಟೇಟ್ ಉದ್ಯಮದಲ್ಲಿ ಬಂಡವಾಳವಾಗಿ ಹರಿದಿದೆ. ಹಳೆಯ 26 ಸಾವಿರ ಕೋಟಿ ಹಣ ಬ್ಯಾಂಕಿಂಗ್ ವ್ಯವಸ್ಥೆಗೆ ವಾಪಸ್ ಆಗಿಲ್ಲ. ಮತ್ತೊಂದೆಡೆ ಹೊಸ ನೋಟುಗಳ ಮುದ್ರಣಕ್ಕಾಗಿ 21 ಸಾವಿರ ಕೋಟಿ ವ್ಯಯಿಸಲಾಗಿದೆ. ಸರ್ಕಾರದ ಪ್ರಚಾರಕ್ಕಾಗಿ ಈ 21 ಸಾವಿರ ಕೋಟಿ ವ್ಯರ್ಥ ಮಾಡಲಾಗಿದೆ ಎಂದು ಸಾಮ್ನಾದಲ್ಲಿ ಶಿವಸೇನೆ ಕೇಂದ್ರ ಸರ್ಕಾರಕ್ಕೆ ಕುಟುಕಿದೆ.

ಸರಾಗವಾಗಿ ನಡೆಯುತ್ತಿದ್ದ ಆರ್ಥಿಕ ವ್ಯವಸ್ಥೆಯನ್ನು ನೋಟು ನಿಷೇಧದ ಮೂಲಕ ಕೇಂದ್ರ ಸರ್ಕಾರ ಹಾಳುಗೆಡವಿದೆ. ಇದರ ಪರಿಣಾಮ ದೇಶದಲ್ಲಿ ಆರ್ಥಿಕಾಭಿವೃದ್ಧಿ ಕುಸಿದಿದ್ದು, ಅಗತ್ಯವಸ್ತುಗಳ ಬೆಲೆ ಏರಿಕೆಯಾಗಿದೆ. ದೇಶದ ಸಾಕಷ್ಟು ವಾಣಿಜ್ಯೋಧ್ಯಮಗಳು ಇಂದು ನೋಟು ನಿಷೇಧದ ಪರಿಣಾಮ ನಷ್ಟವನ್ನು ಅನುಭವಿಸುತ್ತಿವೆ. ನೋಟು ನಿಷೇಧದಿಂದ ಭಯೋತ್ಪಾದನೆಗೆ ಕಡಿವಾಣ ಬೀಳಲಿದೆ ಎಂಬ ಪ್ರಧಾನಿ ನರೇಂದ್ರ ಮೋದಿ ಅವರ ಮಾತು ಸುಳ್ಳಾಗಿದ್ದು, ಈ ಹಿಂದಿಗಿಂತಲೂ ದೇಶದಲ್ಲಿ ಭಯೋತ್ಪಾದನೆ ಚಟುವಟಿಕೆ ಹೆಚ್ಚಾಗಿದೆ. ಅಂತೆಯೇ ನಕಲಿ ನೋಟು ಹಾವಳಿ ತಪ್ಪುತದೆ ಎಂಬ ಹೇಳಿಕೆ ಕೂಡ ಸುಳ್ಳಾಗಿದ್ದು, 2000 ನೋಟುಗಳ ನಕಲು ಎಗ್ಗಿಲ್ಲದೇ ಸಾಗುತ್ತಿದೆ.

ಹೀಗಿರುವಾಗಿ ಪ್ರಧಾನಿ ಮೋದಿ ಅದ್ಯಾವ ಪುರುಷಾರ್ಥಕ್ಕಾಗಿ ನೋಟು ನಿಷೇಧ ಮಾಡಿದರು ತಿಳಿಯುತ್ತಿಲ್ಲ. ನೋಟು ನಿಷೇಧದಿಂದಾಗಿ ಮಧ್ಯಮ ವರ್ಗದ ಕುಟುಂಬಗಳು ಸಮಸ್ಯೆ ಎದುರಿಸುವಂತಾಗಿದೆ ಎಂದು ಸಾಮ್ನಾದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com