ಒಖಿ ಚಂಡಮಾರುತ ಅಬ್ಬರ: ಮಂಗಳೂರಿನಿಂದ ಹೊರಟಿದ್ದ 2 ಹಡಗು ಮುಳುಗಡೆ

ದಕ್ಷಿಣ ಭಾರತದ ಕರಾವಳಿ ಪ್ರದೇಶದಲ್ಲಿ ಒಖಿ ಚಂಡಮಾರುತ ಅಬ್ಬರ ಮುಂದುವರೆದಿದ್ದು, ಮಂಗಳೂರಿನಿಂದ ಲಕ್ಷದ್ವೀಪದತ್ತ ಹೊರಟಿದ್ದ 2 ಸರಕು ಸಾಗಣಿಕಾ ಹಡಗುಗಳು ಚಂಡಮಾರುತದ ಅಬ್ಬರಕ್ಕೆ ಸಿಲುಕಿ ಮುಳುಗಡೆಯಾಗಿವೆ.
ಹಾನಿಗೀಡಾದ ಮೀನುಗಾರಿ ಬೋಟ್
ಹಾನಿಗೀಡಾದ ಮೀನುಗಾರಿ ಬೋಟ್
ಚೆನ್ನೈ: ದಕ್ಷಿಣ ಭಾರತದ ಕರಾವಳಿ ಪ್ರದೇಶದಲ್ಲಿ ಒಖಿ ಚಂಡಮಾರುತ ಅಬ್ಬರ ಮುಂದುವರೆದಿದ್ದು, ಮಂಗಳೂರಿನಿಂದ ಲಕ್ಷದ್ವೀಪದತ್ತ ಹೊರಟಿದ್ದ 2 ಸರಕು ಸಾಗಣಿಕಾ ಹಡಗುಗಳು ಚಂಡಮಾರುತದ ಅಬ್ಬರಕ್ಕೆ ಸಿಲುಕಿ ಮುಳುಗಡೆಯಾಗಿವೆ.
ಲಕ್ಷದ್ವೀಪದ ಬಳಿಯ ಕವರತಿ ಎಂಬಲ್ಲಿ ಈ ದುರ್ಘ‌ಟನೆ ಸಂಭವಿಸಿದ್ದು, ಅದೃಷ್ಟವಶಾತ್ ಹಡಗಿನಲ್ಲಿದ್ದ ಎಲ್ಲ 14 ಮಂದಿ ಸಿಬ್ಬಂದಿಗಳನ್ನೂ ನೌಕಾಪಡೆಯ ಸಿಬ್ಬಂದಿಗಳು ರಕ್ಷಿಸಿದ್ದಾರೆ ಎಂದು ತಿಳಿದುಬಂದಿದೆ. ಇದೇ ವೇಳೆ, ಸುಮಾರು  38 ಮೀನುಗಾರಿಕಾ ದೋಣಿಗಳು ಸಮುದ್ರದ ಮಧ್ಯೆ ಸಿಲುಕಿಕೊಂಡಿದ್ದು, ಅದರಲ್ಲಿರುವವರಿಗೆ ನೌಕಾಪಡೆಯು ಆಹಾರ ಮತ್ತಿತರ ಪರಿಹಾರ ಕಿಟ್‌ ಗಳನ್ನು ಒದಗಿಸಿದೆ. ಅಂತೆಯೇ ನಾಪತ್ತೆಯಾಗಿರುವ ಇತರೆ ದೋಣಿಗಳ ಶೋಧ  ಕಾರ್ಯವನ್ನೂ ನಡೆಸಲಾಗುತ್ತಿದ್ದು, ಒಟ್ಟು ಎಷ್ಟು ಮಂದಿ ಮೀನುಗಾರರು ನೀರಿಗಿಳಿದಿದ್ದರು ಎಂಬ ಬಗ್ಗೆ ನಿಖರ ಮಾಹಿತಿಯಿಲ್ಲವಾದರೂ ಸುಮಾರು 150 ಮಂದಿ ಮೀನುಗಾರರು ನಾಪತ್ತೆಯಾಗಿದ್ದಾರೆ ಎಂದು ಹೇಳಲಾಗಿದೆ.
ಲಕ್ಷದ್ವೀಪದಲ್ಲಿ ಕಲ್ಪೇನಿ, ಮಿನಿಕಾಯ್‌, ಕವರತಿ, ಅಗತ್ತಿ, ಅಂಡ್ರೋತ್‌, ಕಡಮತ್‌, ಅಮಿನಿ ದ್ವೀಪ ಸೇರಿದಂತೆ ತಗ್ಗುಪ್ರದೇಶದಲ್ಲಿರುವ ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸುವಂತೆ ಸೂಚಿಸಲಾಗಿದ್ದು, ಹೆಚ್ಚಿನವರಿಗೆ  ಶಾಲೆಗಳಲ್ಲಿ ಆಶ್ರಯ ನೀಡಲಾಗಿದೆ. ಭಾರೀ ಮಳೆಯಿಂದಾಗಿ ಕಲ್ಪೇನಿಯಲ್ಲಿ ನಿಲ್ಲಿಸಲಾಗಿದ್ದ 5 ದೋಣಿಗಳು ಹಾನಿಗೀಡಾಗಿವೆ ಎಂದು ತಿಳಿದುಬಂದಿದೆ. 
ಅಪಾಯದಲ್ಲಿದ್ದ ಮೀನುಗಾರರಿಗೆ ಜಪಾನ್ ನೆರವು!
ಇನ್ನು ಸಮುದ್ರದಲ್ಲಿ ಸಿಲುಕಿದ್ದ ಮೀನುಗಾರರ ನೆರವಿಗೆ ಜಪಾನ್‌ ನ ಸರಕು ನೌಕೆಯೊಂದು ಧಾವಿಸಿದ್ದು, 60 ಮೀನುಗಾರರನ್ನು ರಕ್ಷಿಸಿದೆ ಎನ್ನಲಾಗಿದೆ. ಇನ್ನೊಂದೆಡೆ, ನಾಪತ್ತೆಯಾಗಿರುವ ಮೀನುಗಾರರ ಕುಟುಂಬ ಸದಸ್ಯರು  ಆತಂಕಕ್ಕೀಡಾಗಿದ್ದು, ಶುಕ್ರವಾರ ಕೊಲ್ಲಂ ಮತ್ತು ತಿರುವನಂತಪುರದಲ್ಲಿ ರಸ್ತೆತಡೆ ನಡೆಸಿ ಪ್ರತಿಭಟನೆ ನಡೆಸಿದ್ದಾರೆ. ಬೆಸ್ತರನ್ನು ರಕ್ಷಿಸುವಲ್ಲಿ ಸರ್ಕಾರ ವಿಳಂಬ ಧೋರಣೆ ಅನುಸರಿಸುತ್ತಿದೆ ಎಂದು ಆರೋಪಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com