ಜಾರ್ಖಂಡ್: ವಿವಾಹಿತ ಬುಡಕಟ್ಟು ದಂಪತಿಗಳ ನಡುವೆ ವಿವಾದಾಸ್ಪದ ಬಹಿರಂಗ ಮುತ್ತಿನ ಸ್ಪರ್ಧೆ!

ವಿವಾಹಿತ ಬುಡಕಟ್ಟು ದಂಪತಿಗಳ ನಡುವೆ ಬಹಿರಂಗ ಮುತ್ತಿನ ಸ್ಪರ್ಧೆ ಏರ್ಪಡಿಸುವ ಮೂಲಕ ಜಾರ್ಖಂಡ್ ನ ಸ್ಥಳೀಯ ಶಾಸಕರೊಬ್ಬರು ವಿವಾದಕ್ಕೆ ಆಸ್ಪದ ನೀಡಿದ್ದು, ವ್ಯಾಪಕ ಟೀಕೆಗೆ ಗುರಿಯಾಗಿದ್ದಾರೆ.
ಕಿಸ್ಸಿಂಗ್ ಕಾಂಪಿಟೇಶನ್
ಕಿಸ್ಸಿಂಗ್ ಕಾಂಪಿಟೇಶನ್
ರಾಂಚಿ: ವಿವಾಹಿತ ಬುಡಕಟ್ಟು ದಂಪತಿಗಳ ನಡುವೆ ಬಹಿರಂಗ ಮುತ್ತಿನ ಸ್ಪರ್ಧೆ ಏರ್ಪಡಿಸುವ ಮೂಲಕ ಜಾರ್ಖಂಡ್ ನ ಸ್ಥಳೀಯ ಶಾಸಕರೊಬ್ಬರು ವಿವಾದಕ್ಕೆ ಆಸ್ಪದ ನೀಡಿದ್ದು, ವ್ಯಾಪಕ ಟೀಕೆಗೆ ಗುರಿಯಾಗಿದ್ದಾರೆ.
ಜಾರ್ಖಂಡ್ ನ ಪಾಕುರ್ ಜಿಲ್ಲೆಯ ದುಮಾರಿಯಾ ಎಂಬ ಹಳ್ಳಿಯ ಬುಡಕಟ್ಟು ಜನರಲ್ಲಿ ಹಿಂದೆಂದೂ ಕಂಡರಿಯದ ರೀತಿಯ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಅದುವೇ ಸಾರ್ವಜನಿಕವಾಗಿ ಮುತ್ತಿಡುವ ಸ್ಪರ್ಧೆ. ಇದನ್ನು  ಆಯೋಜಿಸಿದ್ದು ಜಾರ್ಖಂಡ್ ಮುಕ್ತಿ ಮೋರ್ಚಾ ಪಕ್ಷದ ಸ್ಥಳೀಯ ಶಾಸಕ ಸಿಮೊನ್ ಮರಂಡಿ. ಸುಮಾರು 37 ವರ್ಷಗಳಿಂದ ದುಮಾರಿಯಾ ಹಳ್ಳಿಯಲ್ಲಿ ವಾರ್ಷಿಕ ಮೇಳವನ್ನು ಆಚರಿಸಿಕೊಂಡು ಬರಲಾಗುತ್ತಿದ್ದು, ಈ ಮೇಳದಲ್ಲಿ  ಬುಡಕಟ್ಟು ಜನರ ನೃತ್ಯ ಸೇರಿದಂತೆ ಬಿಲ್ಲುಗಾರಿಕೆ, ಓಟದ ಸ್ಪರ್ಧೆಗಳನ್ನು ಆಯೋಜಿಸಲಾಗಿರುತ್ತದೆ. ಆದರೆ ಇದೇ ಮೊದಲ ಬಾರಿಗೆ 18 ವರ್ಷ ಮೇಲ್ಪಟ್ಟ ಗಂಡ ಹೆಂಡತಿಗೆ ಮುತ್ತಿನ ಸ್ಪರ್ಧೆ ಏರ್ಪಡಿಸಿರುವುದು ವಿಶೇಷವಾಗಿತ್ತು.
ಇಲ್ಲಿನ ಬುಡಕಟ್ಟು ಜನಾಂಗದ ವಿವಾಹಿತ ದಂಪತಿಗಳು ಸಾರ್ವಜನಿಕವಾಗಿ ಪರಸ್ಪರ ಮುತ್ತಿಡುವುದು ಈ ಸ್ಪರ್ಧೆಯ ನಿಯಮವಾಗಿದ್ದು, ಹೆಚ್ಚು ಸಮಯ ಮುತ್ತಿನಲ್ಲಿ ನಿರತರಾಗುವ ನಿಗದಿತ ಗುರಿ ತಲುಪುವ ದಂಪತಿಗಳು ಈ  ಸ್ಪರ್ಧೆಯ ವಿಜೇತರಾಗುತ್ತಾರಂತೆ. 
ಇನ್ನು ಇದೀಗ ಈ ಸ್ಪರ್ಧೆ ಜಾರ್ಖಂಡ್ ನಲ್ಲಿ ಭಾರಿ ವಿವಾದಕ್ಕೆ ಕಾರಣವಾಗಿದ್ದು, ಜಾರ್ಖಂಡ್ ಬಿಜೆಪಿ ಘಟಕದ ಉಪಾಧ್ಯಕ್ಷ ಹೇಮ್ ಲಾಲ್ ಮರ್ಮು ಕಟುವಾಗಿ ಟೀಕಿಸಿದ್ದಾರೆ. ಮುತ್ತಿನ ಸ್ಪರ್ಧೆ ಆಯೋಜನೆ ಮೂಲಕ ಸಿಮೊನ್ ಮರಂಡಿ  ಮತ್ತು ಸ್ಟೀಫೆನ್ ಮರಂಡಿ ಸಂಥಲ್ ಸಮುದಾಯವನ್ನು ಅವಮಾನಿಸಿದ್ದಾರೆ. ಹೀಗಾಗಿ ಈ ಕೂಡಲೇ ಅವರು ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ಇನ್ನು ಈ ಬಗ್ಗೆ ಸ್ಪಷ್ಟನೆ ನೀಡಿರುವ ಸಿಮೊನ್ ಮರಂಡಿ 'ಬುಡಕಟ್ಟು ಜನರು ಮೂಲತಃ ಅವರು ಅಮಾಯಕರು ಮತ್ತು ಅವಿದ್ಯಾವಂತರು. ಅವರಲ್ಲಿ ಇತ್ತೀಚಿನ ದಿನಗಳಲ್ಲಿ ಕುಟುಂಬ ವ್ಯವಸ್ಥೆ ದುರ್ಬಲಗೊಳ್ಳುತ್ತಿದೆ. ಅವರಲ್ಲಿ  ಹೆಚ್ಚಾಗುತ್ತಿರುವ ವಿಚ್ಛೇದನ ಹಾಗೂ ಭಿನ್ನಾಭಿಪ್ರಾಯಗಳನ್ನು ಹೋಗಲಾಡಿಸಿ, ಕುಟುಂಬ ವ್ಯವಸ್ಥೆಯನ್ನು ಗಟ್ಟಿಗೊಳಿಸುವ ಉದ್ದೇಶದಿಂದ ಈ ರೀತಿಯ ವಿಭಿನ್ನವಾಗಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ' ಎಂದು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com