ಮಹದಾಯಿ ವಿವಾದ: ಗೋವಾ ಹಿತ ಬಲಿ ಕೊಡಲು ನಾವು ಸಿದ್ಧರಿಲ್ಲ: ಗೋವಾ ಸಿಎಂ ಪರಿಕ್ಕರ್

ಕರ್ನಾಟಕ ಮತ್ತು ಗೋವಾ ರಾಜ್ಯಗಳ ರೈತರ ತಿಕ್ಕಾಟಕ್ಕೆ ಕಾರಣವಾಗಿರುವ ಮಹದಾಯಿ ನದಿ ನೀರು ಹಂಚಿಕೆ ವಿವಾದ ಸಂಬಂಧ ಗೋವಾ ಸಿಎಂ ಮನೋಹರ್ ಪರಿಕ್ಕರ್ ಅವರು ಹೇಳಿಕೆಯೊಂದು ಇದೀಗ ವ್ಯಾಪಕ ಚರ್ಚೆಗೆ ಕಾರಣವಾಗಿದೆ.
ತರುಣ್ ಭಾರತ್ ಪತ್ರಿಕೆ ಸಂದರ್ಶನದ ಛಾಯಾಚಿತ್ರ ಪ್ರತಿ
ತರುಣ್ ಭಾರತ್ ಪತ್ರಿಕೆ ಸಂದರ್ಶನದ ಛಾಯಾಚಿತ್ರ ಪ್ರತಿ
Updated on
ಪಣಜಿ: ಕರ್ನಾಟಕ ಮತ್ತು ಗೋವಾ ರಾಜ್ಯಗಳ ರೈತರ ತಿಕ್ಕಾಟಕ್ಕೆ ಕಾರಣವಾಗಿರುವ ಮಹದಾಯಿ ನದಿ ನೀರು ಹಂಚಿಕೆ ವಿವಾದ ಸಂಬಂಧ ಗೋವಾ ಸಿಎಂ ಮನೋಹರ್ ಪರಿಕ್ಕರ್ ಅವರು ಹೇಳಿಕೆಯೊಂದು ಇದೀಗ ವ್ಯಾಪಕ  ಚರ್ಚೆಗೆ ಕಾರಣವಾಗಿದೆ.
ನಿನ್ನೆಯಷ್ಟೇ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ, ಗೋವಾ ಮುಖ್ಯಮಂತ್ರಿ ಮನೋಹರ್‌ ಪರಿಕ್ಕರ್‌, ಕೇಂದ್ರ ಸಚಿವ ಅನಂತಕುಮಾರ್‌, ಬಿಜೆಪಿ  ರಾಜ್ಯ ಉಸ್ತುವಾರಿ ಮುರಳೀಧರರಾವ್‌, ರಾಜ್ಯ ಬಿಜೆಪಿ ಚುನಾವಣಾ ಉಸ್ತುವಾರಿ ಪ್ರಕಾಶ್‌ ಜಾವಡೇಕರ್‌, ಸಹ ಚುನಾವಣಾ ಉಸ್ತುವಾರಿ ಪಿಯೂಷ್‌ ಗೋಯೆಲ್‌, ವಿಧಾನಸಭೆ ಪ್ರತಿಪಕ್ಷ ನಾಯಕ ಜಗದೀಶ್‌ ಶೆಟ್ಟರ್‌, ಸಂಸದ  ಪ್ರಹ್ಲಾದ್‌ ಜೋಶಿ ಮತ್ತಿತರರು ಸುದೀರ್ಘ‌ ಸಮಾಲೋಚನೆ ನಡೆಸಿದ್ದರು. 
ಇದರ ಬೆನ್ನಲ್ಲೇ ಗೋವಾ ಸಿಎಂ ಮನೋಹರ್ ಪರಿಕ್ಕರ್ ಅವರು ಸ್ಥಳೀಯ ತರುಣ್ ಭಾರತ್ ಎಂಬ ಪತ್ರಿಕೆ ಸಂದರ್ಶನ ನೀಡಿದ್ದು, ಸಂದರ್ಶನದಲ್ಲಿ, ಗೋವಾ ಹಿತ ಬಲಿ ಕೊಡಲು ನಾವು ಸಿದ್ಧರಿಲ್ಲ. ಗೋವಾ ಜನತೆ ಆತಂಕ ಪಡುವ  ಅಗತ್ಯವಿಲ್ಲ ಎಂದು  ಹೇಳಿದ್ದಾರೆ. ಸಂದರ್ಶನದಲ್ಲಿ ಮಹದಾಯಿ ವಿವಾದ ಸಂಬಂಧ ಸುಧೀರ್ಘವಾಗಿ ಮಾತನಾಡಿರುವ ಸಿಎಂ ಪರಿಕ್ಕರ್ ಅವರು, ಗೋವಾ ಹಿತ ಬಲಿ ಕೊಟ್ಟು ಸಂಧಾನ ಮಾತುಕತೆ ಮಾಡುವುದಿಲ್ಲ. ಜನರ ಹಿತ  ಕಾಪಾಡಲು ಸರ್ಕಾರ ಬದ್ಧವಾಗಿದೆ. ಹೀಗಾಗಿ ಜನರು ಆತಂಕ ಪಡುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ. 
ಮಹದಾಯಿ ಕುರಿತು ಹಿಂದಿನ ನಿಲುವಿಗೆ ಈಗಲೂ ಬದ್ಧವಾಗಿದ್ದು, ನ್ಯಾಯಾಧೀಕರಣದ ಮೂಲಕವೇ ವಿವಾದ ಇತ್ಯರ್ಥವಾಗಬೇಕು. ಈ ವಿವಾದವನ್ನು ನ್ಯಾಯಾಧೀಕರಣಕ್ಕೆ ತೆಗೆದುಕೊಂಡು ಹೋಗಿದ್ದೇ ನಾವು. ನಾವೇ ನ್ಯಾಯಾಧಿಕರಣಕ್ಕೆ ಹೋಗಿದ್ದರಿಂದ ಅಲ್ಲೇ ಇತ್ಯರ್ಥವಾಗಲಿ. ಮಹದಾಯಿ ವಿಷಯದಲ್ಲಿ ಗೋವಾ ಪ್ರಜೆಗಳು ಆತಂಕಗೊಳ್ಳಬೇಕಾಗಿಲ್ಲ ಎಂದು ಸಂದರ್ಶನದಲ್ಲಿ ಗೋವಾ ಪ್ರಜೆಗಳಿಗೆ ಪರಿಕ್ಕರ್ ಅಭಯ ನೀಡಿದ್ದಾರೆ.
ಅಂತೆಯೇ ಸಂದರ್ಶನದಲ್ಲಿ ಬಿಜೆಪಿ ಕರ್ನಾಟಕ ಘಟಕದ ಅಧ್ಯಕ್ಷ ಬಿಎಸ್ ಯಡಿಯೂರಪ್ಪ ಅವರು ಬರೆದಿರುವ ಪತ್ರಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಪರಿಕ್ಕರ್ ಅವರು, ರಾಜ್ಯದ ಎಲ್ಲ ಸಚಿವರೊಂದಿಗೆ ಚರ್ಚಿಸಿ ಈ ಬಗ್ಗೆ  ನಿರ್ಧಾರ ಕೈಗೊಳ್ಳಲಾಗುತ್ತದೆ. 2002ರಲ್ಲಿ ಕೈಗೊಂಡ ತೀರ್ಮಾನವೇ ಅಂತಿಮವಾಗಿದ್ದು, ಈ ಬಗ್ಗೆ ಸಚಿವರೊಂದಿಗಿನ ಚರ್ಚೆ ಬಳಿಕ ಯಡಿಯೂರಪ್ಪ ಅವರ ಪತ್ರಕ್ಕೆ ಉತ್ತರಿಸುತ್ತೇನೆ ಎಂದು ಪರಿಕ್ಕರ್ ಹೇಳಿದ್ದಾರೆ.
ನಮ್ಮ ತಾಯಿ ಮಹದಾಯಿ ರಕ್ಷಣೆಗೆ ನಾವು ಸಿದ್ಧ, ಪ್ರತೀ ನೀರಿನ ಹನಿಯನ್ನೂ ರಕ್ಷಿಸುತ್ತೇವೆ: ಗೋವಾ ನೀರಾವರಿ ಸಚಿವ
ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಗೋವಾ ನೀರಾವರಿ ಸಚಿವ ವಿನೋದ್ ಪಾಲೇಕರ್ ಅವರು, ಜಲಸಂಪನ್ಮೂಲ ಇಲಾಖೆ ನಿರ್ಧಾರದಲ್ಲಿ ಯಾವುದೇ ಬದಲಾವಣೆ ಇಲ್ಲ. ನಮ್ಮ ತಾಯಿ ಮಹದಾಯಿ ರಕ್ಷಣೆಗೆ  ನಾವು ಬದ್ಧರಾಗಿದ್ದೇವೆ. ಪ್ರತೀ ನೀರಿನ ಹನಿಯನ್ನೂ ರಕ್ಷಿಸುತ್ತೇವೆ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com