ನವದೆಹಲಿ: ಶಿರಚ್ಛೇದವಲ್ಲ, ಗಡಿಯಲ್ಲಿ ಪಾಕಿಸ್ತಾನ ನಡೆಸಿದ್ದ ಅಪ್ರಚೋದಿತ ಗುಂಡಿನ ದಾಳಿಯಿಂದಾಗಿ ಯೋಧರು ಹುತಾತ್ಮರಾಗಿದ್ದರು ಎಂದು ಭಾರತೀಯ ಸೇನೆ ಭಾನುವಾರ ಸ್ಪಷ್ಟನೆ ನೀಡಿದೆ.
ನಿನ್ನೆಯಷ್ಟೇ ಜಮ್ಮು ಮತ್ತು ಕಾಶ್ಮೀರದ ರಜೌರಿ ಜಿಲ್ಲೆಯ ಗಡಿ ನಿಯಂತ್ರಣ ರೇಖೆ ಬಳಿ ಗಸ್ತು ತಿರುಗುತ್ತಿದ್ದ ಭಾರತೀಯ ಯೋಧರ ಮೇಲೆ ಪಾಕಿಸ್ತಾನ ಅಪ್ರಚೋದಿತ ಗುಂಡಿನ ದಾಳಿ ನಡೆಸಿತ್ತು. ಈ ವೇಳೆ ಸೇನೆಯ ಮೇಜರ್ ಸೇರಿದಂತೆ ಒಟ್ಟು ನಾಲ್ವರು ಯೋಧರು ಹುತಾತ್ಮರಾಗಿದ್ದರು.
ಹುತಾತ್ಮರಾದ ಯೋಧರನ್ನು ಮೇಜರ್ ಮೋಹರ್ಕರ್ ಪ್ರಫುಲ್ಲ ಅಂಬಾದಾಸ್, ಲ್ಯಾನ್ಸ್ ನಾಯ್ಕ್ ಗುರ್ಮೇಲ್ ಸಿಂಗ್, ಸಿಪಾಯಿ ಪರ್ಗತ್ ಸಿಂಗ್, ಲ್ಯಾನ್ಸ್ ನಾಯ್ಕ್ ಕುಲ್ದೀಪ್ ಸಿಂಗ್ ಎಂದು ಗುರ್ತಿಸಲಾಗಿದೆ.
ಘಟನೆ ಕುರಿತಂತೆ ಸ್ಪಷ್ಟನೆ ನೀಡಿರುವ ಸೇನಾಧಿಕಾರಿಗಳು, ಯೋಧರ ಶಿರಚ್ಛೇದವಾಗಿಲ್ಲ. ಗಡಿಯಲ್ಲಿ ಗಸ್ತು ತಿರುಗುತ್ತಿದ್ದ ವೇಳೆ ಶತ್ರುಗಳು ನಡೆಸಿದ್ದ ಗುಂಡಿನ ದಾಳಿಯಲ್ಲಿ ತೀವ್ರವಾಗಿ ಗಾಯಗೊಂಡು ಹುತಾತ್ಮರಾಗಿದ್ದಾರೆಂದು ಹೇಳಿದ್ದಾರೆ.