ಕಳೆದ ಆಗಸ್ಟ್ ನಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತು ಸಹ ಆಟಗಾರರಾದ ಶಿಖರ್ ಧವನ್, ಯುವರಾಜ್ ಸಿಂಗ್ ಮತ್ತು ರಾಬಿನ್ ಉತ್ತಪ್ಪ ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಮಗುವಿಗೆ ಪಾಠ ಹೇಳಿಕೊಡುವಾಗ ತಾಯಿಯ ಕಠಿಣ ವರ್ತನೆಯಿದ್ದ ವಿಡಿಯೋವೊಂದನ್ನು ಶೇರ್ ಮಾಡಿದ್ದರು. ಅಲ್ಲದೆ ಮಕ್ಕಳ ಜೊತೆ ಮೃಗೀಯ ವರ್ತನೆ ನಿಲ್ಲಿಸಿ ಎಂದು ಮನವಿ ಮಾಡಿದ್ದರು. ಈ ವಿಡಿಯೋ ವ್ಯಾಪಕ ವೈರಲ್ ಆಗಿ ತಾಯಿಯ ಕಠಿಣ ವರ್ತನೆ ವಿರುದ್ಧ ವ್ಯಾಪಕ ಟೀಕೆಗಳು ಕೂಡ ವ್ಯಕ್ತವಾಗಿದ್ದವು. ಆದರೆ ಬಳಿಕ ಆ ವಿಡಿಯೋದಲ್ಲಿದ್ದ ಪುಟ್ಟ ಹುಡುಗಿ ಬಾಲಿವುಡ್ ಗಾಯಕರಾದ ತೋಷಿ ಮತ್ತು ಶರಿಬ್ ಸಬ್ರಿ ಅವರ ಸಹೋದರಿಯ ಪುತ್ರಿ ಎಂದು ತಿಳಿದುಬಂತು. ಮೂರು ವರ್ಷ ವಯಸ್ಸಿನ ಹಯಾಳಿಗೆ ತಾಯಿ ಪಾಠ ಮಾಡುತ್ತಿದ್ದರು. ಕ್ರಿಕೆಟಿಗರ ಈ ಪೋಸ್ಟ್ ಗೆ ಪ್ರತಿಕ್ರಿಯೆ ನೀಡಿದ್ದ ಬಾಲಿವುಡ್ ಗಾಯಕ ತೋಷಿ ಒಂದೂವರೆ ನಿಮಿಷದ ಈ ವೀಡಿಯೋದಲ್ಲಿ ತಾಯಿಯೊಬ್ಬಳಿಗೆ ತನ್ನ ಮಗುವಿನ ಮೇಲಿನ ಪ್ರೀತಿಯ ಬಗ್ಗೆ ಪ್ರಶ್ನಿಸಲಾಗದು ಎಂದು ಕಿಡಿಕಾರಿದ್ದರು, ಅಲ್ಲದೆ ನಮ್ಮ ಸೋದರಿ ಮಗಳು ಹಯಾ ಬಗ್ಗೆ ನಮಗೆ ಚೆನ್ನಾಗಿ ತಿಳಿದಿದೆ. ಹಯಾಳನ್ನು ಬಯ್ದರೆ ಕೆಲ ಕ್ಷಣದಲ್ಲೇ ಅದನ್ನು ಮರೆತುಬಿಟ್ಟು ಆಟವಾಡಲು ಓಡುತ್ತಾಳೆ. ಆದರೆ, ಹಾಗೆಂದು ಅವಳನ್ನು ಕೇವಲ ಮುದ್ದು ಮಾಡಿದರೆ ಆಕೆ ಓದಿನ ಬಗ್ಗೆ ನಿರ್ಲಕ್ಷ್ಯ ತಳೆಯುವುದಿಲ್ಲವೇ?, ಆಮೇಲೆ ಆಕೆ ಓದಲು ಬರೆಯಲು ಕಷ್ಟ ಪಡಬೇಕಾಗುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು. ಗಾಯಕರ ಈ ಹೇಳಿಕೆಗೆ ವ್ಯಾಪಕ ಪರ-ವಿರೋಧ ಪ್ರತಿಕ್ರಿಯೆಗಳು ವ್ಯಕ್ತವಾಗಿದ್ದವು.