ಲಖನೌ: ಉತ್ತರ ಪ್ರದೇಶದಲ್ಲಿ ಬಿಜೆಪಿ ಸರ್ಕಾರ ರಚನೆಯಾಗಲಿದೆ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಫೆ.5 ರಂದು ಚುನಾವಣಾ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು, ಬಿಜೆಪಿಗೆ ಬಹುಮತ ಸಿಗಲಿದ್ದು, ಎಸ್ ಪಿ ಕಾಂಗ್ರೆಸ್ ಮೈತ್ರಿಯನ್ನು ಜನ ತಿರಸ್ಕರಿಸಲಿದ್ದಾರೆ ಎಂದಿದ್ದಾರೆ. ಸಮಾಜವಾದಿ ಪಕ್ಷಕ್ಕೆ ಚುನಾವಣೆ ಗೆಲ್ಲುವ ವಿಶ್ವಾಸವಿಲ್ಲ ಆದ್ದರಿಂದಲೇ ಕಾಂಗ್ರೆಸ್ ನೊಂದಿಗೆ ಮೈತ್ರಿಗೆ ಮುಂದಾಗಿದೆ. ಇಲ್ಲದೇ ಇದ್ದಿದ್ದರೆ ಮೈತ್ರಿ ಏಕೆ ಮಾಡಿಕೊಳ್ಳುತ್ತಿದ್ದರು ಎಂದು ಅಮಿತ್ ಶಾ ಪ್ರಶ್ನಿಸಿದ್ದು, ಸಮಾಜವಾದಿ ಪಕ್ಷಕ್ಕೆ ಮೈತ್ರಿ ಇಲ್ಲದೇ ಇದ್ದಿದ್ದರೆ ಚುನಾವಣೆಯಲ್ಲಿ ವೈಟ್ ವಾಷ್ ಆಗುವ ಭಯ ಕಾಡುತ್ತಿತ್ತು ಎಂದು ಲೇವಡಿ ಮಾಡಿದ್ದಾರೆ.
ಕಳೆದ 5 ವರ್ಷಗಳಲ್ಲಿ ಉತ್ತರ ಪ್ರದೇಶ ಅಪ್ರಾಧ ಪ್ರಕರಣಗಳಲ್ಲಿ ಮುಂಚೂಣಿಯಲ್ಲಿದ್ದು, ಅಭಿವೃದ್ಧಿ ಕೆಲಸಗಳು ಕುಂಠಿತವಾಗಿದೆ. ಪ್ರತಿ ದಿನ ಕನಿಷ್ಠ 16 ಕೊಲೆಗಳು, 23 ಅತ್ಯಾಚಾರಗಳು ನಡೆಯುತ್ತಿದೆ. ಈ ವರೆಗೂ 200 ಕೋಮುಗಲಭೆ, 2,87,000 ಹೀನ ಅಪರಾಧ ಪ್ರಕರಣಗಳು ರಾಜ್ಯದಲ್ಲಿ ನಡೆದಿದೆ.
ಆಡಳಿತ ವಿರೋಧಿ ಕೂಗನ್ನು ಕಡಿಮೆ ಮಾಡಲು ಸಿಎಂ ಅಖಿಲೇಶ್ ಯಾದವ್ ಬಹುತೇಕ ಶಾಸಕರು ಸಚಿವರುಗಳಿಗೆ ಟಿಕೆಟ್ ನೀಡಿದ್ದಾರೆ, ನಾನು ಭೇಟಿ ನೀಡಿದ ಬಹುತೇಕ ವಿಧಾನಸಭಾ ಕ್ಷೇತ್ರಗಳಲ್ಲಿ ಆಡಳಿತ ವಿರೋಧಿ ಕೂಗು ಇದೆ, ಮೈತ್ರಿಯ ಹೊರತಾಗಿಯೂ ಸಮಾಜವಾದಿ ಪಕ್ಷ ಚುನಾವಣೆಯಲ್ಲಿ ಸೋಲಲಿದೆ ಎಂದು ಅಮಿತ್ ಶಾ ಹೇಳಿದ್ದಾರೆ.